ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಇಂದು

KannadaprabhaNewsNetwork |  
Published : Jan 14, 2026, 02:15 AM IST
ಮೈಲಾಪುರ ಶ್ರೀಮೈಲಾರಲಿಂಗೇಶ್ವರ | Kannada Prabha

ಸಾರಾಂಶ

ವಿಶಿಷ್ಟ ಹಾಗೂ ವಿಚಿತ್ರ ಸಂಪ್ರದಾಯಗಳ ಊರು ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ಜ.14ರಂದು ಕೊನೆ ಕ್ಷಣದ ಸಿದ್ಧತೆಗಳನ್ನು ಜಿಲ್ಲಾಡಳಿತ ನಡೆಸುತ್ತಿದೆ. ಪ್ರತಿವರ್ಷದಂತೆ, ಈ ಬಾರಿಯೂ ಸಹ, ಮಲ್ಲಯ್ಯನ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನದ ನಿರೀಕ್ಷೆ ಹೊಂದಲಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ವಿಶಿಷ್ಟ ಹಾಗೂ ವಿಚಿತ್ರ ಸಂಪ್ರದಾಯಗಳ ಊರು ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ಜ.14ರಂದು ಕೊನೆ ಕ್ಷಣದ ಸಿದ್ಧತೆಗಳನ್ನು ಜಿಲ್ಲಾಡಳಿತ ನಡೆಸುತ್ತಿದೆ. ಪ್ರತಿವರ್ಷದಂತೆ, ಈ ಬಾರಿಯೂ ಸಹ, ಮಲ್ಲಯ್ಯನ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನದ ನಿರೀಕ್ಷೆ ಹೊಂದಲಾಗಿದೆ.

ಕಳದ ಮೂರ್ನಾಲ್ಕು ತಿಂಗಳುಗಳಿಂದಲೇ ಜಾತ್ರೆಗೆ ಪೂರ್ವ ಸಿದ್ಧತೆ ನಡೆಸುತ್ತಿರುವ ಜಿಲ್ಲಾಡಳಿತ, ಭಕ್ತರ ಆಗಮನದ ವೇಳೆ ಯಾವುದೇ ರೀತಿಯ ಕುಂದುಕೊರತೆಗಳು ಆಗದಂತೆ ಕಟ್ಟೆಚ್ಚರ ವಹಿಸಿದೆ. ಜಿಲ್ಲಾಧಿಕಾರಿ ಹರ್ಷಲ್‌ ಭೋಯರ್‌ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ತಂಡ ಇದಕ್ಕಾಗಿ ಹಗಲಿರುಳು ಶ್ರಮಿಸಿದೆ.

ವಿಚಿತ್ರ ಹಾಗೂ ವಿಶಿಷ್ಠ ಸಂಪ್ರದಾಯಗಳಿಗೆ ಹೆಸರಾಗಿರುವ ಮೈಲಾಪೂರದ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ಯಾದಗಿರಿ ನಗರದಿಂದ 27 ಕಿ.ಮೀ. ದೂರದ ಮೈಲಾಪುರದಲ್ಲಿ ಜ.14 ರಂದು ನಡೆಯುವ ಈ ಜಾತ್ರೆಗೆ ತೆಲಂಗಾಣ, ಆಂಧ್ರ, ಹಾಗೂ ಮಹಾರಾಷ್ಟ್ರ ಸೇರಿದಂತೆ ರಾಜ್ಯದಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ, ಮೈಲಾರಲಿಂಗನ ದರ್ಶನ ಪಡೆಯಲಿದ್ದಾರೆ ಎನ್ನಲಾಗಿದೆ.

ವಿಚಿತ್ರ ಸಂಪ್ರದಾಯಗಳ ಊರು ಮೈಲಾಪುರ: ವಿಚಿತ್ರ ಹಾಗೂ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರಾದ ಮೈಲಾಪುರ ಗ್ರಾಮದ ಬಹುತೇಕ ಆಚರಣೆಗಳು, ವೈಜ್ಞಾನಿಕವಾಗಿ ಮುಂದುವರೆಯುತ್ತಿರುವ 21ನೇ ಈ ಶತಮಾನದಲ್ಲೂ ಅಚ್ಚರಿ ಹುಟ್ಟಿಸುತ್ತವೆ. ಗ್ರಾಮದ ಅಧಿದೇವರು ಮೈಲಾರಲಿಂಗನ ಆಸನ ‘ಮಂಚ’ ಆಗಿರೋದರಿಂದ ಇಲ್ಯಾರೂ ಅದರ ಮೇಲೆ ಮಲಗೋಲ್ಲ, ಕುಳಿತು ಕೊಳ್ಳುವುದೂ ಇಲ್ಲ. ಅಷ್ಟೇ ಅಲ್ಲ, ಹಸಿಬಾಣಂತಿಗೂ ಆಚರಣೆ ಕಾವು ತಪ್ಪಿರೋಲ್ಲವಾಗಿದ್ದರಿಂದ, ಕಲ್ಲಿನ ಮೇಲೆ ಹಾಸಿಗೆ ಹಾಸಿ ಮಲಗಬೇಕು. ಇನ್ನು, ದೇವರ ವಾಹನ ಕುದುರೆಯಾಗಿದ್ದರಿಂದ ಯಾರೂ ಕುದುರೆ ಹತ್ತೋಲ್ಲ, ಪೌರಾಣಿಕ ಕತೆಯೊಂದರ ಹಿನ್ನೆಲೆಯಲ್ಲಿ, ಕೋಳಿ ಇಲ್ಲಿ ಯಾರೂ ಸಾಕೋಲ್ಲ, ಮುಂಜಾನೆಯ ಕೋಳಿ ಕೂಗು ಇಲ್ಲಿ ಕೇಳಿಸೋದೇ ಇಲ್ಲ. ಕುಂಬಾರರು ಗಡಿಗೆ ಮಾಡುವಂತಿಲ್ಲ ಎಂಬ ಪ್ರತೀತಿಯಿದೆ.

ಸಾಹಸ ಮೆರೆಯುವ ಗುಡ್ಡೇರರು: ಗುಡ್ಡದ ತುತ್ತತುದಿಯಲ್ಲಿರುವ ಶ್ರೀ ಮೈಲಾರಲಿಂಗನ ಸನ್ನಿಧಿಯ ಬಳಿ ಎತ್ತರದಾದ ಒಂದು ಬಂಡೆಗಲ್ಲಿದೆ. ಬಂಡೆಗಲ್ಲಿನ ತುದಿಯಲ್ಲಿ ದೀಪ ಹಚ್ಚಲಿಕ್ಕೆಂದೇ ‘ಗುಡ್ಡೇರರು’ ಅನ್ನೋ ಪ್ರತ್ಯೇಕ ಜನಾಂಗದವರ ಸಾಹಸ ಶತಮಾನದಿಂದಲೂ ನಡೆದಿದೆ. ಹಗ್ಗವೊಂದನ್ನು ಹಿಡಿದುಕೊಂಡು, ಸರಸರನೇ ಬಂಡೆಗಲ್ಲನ್ನೇರಿ, ಬೃಹತ್ ಪಾತ್ರೆಗೆ ಡಬ್ಬಿಗಟ್ಟಲೇ ಎಣ್ಣೆ ಸುರಿದು ದೀಪ ಹಚ್ಚೋದು ಇವರ ನಿತ್ಯಕಾಯ. ಮೈನವಿರೇಳಿಸುವ ಇವರ ಸಾಹಸ ಜಾತ್ರೆಯ ಆಕರ್ಷಣೆ. ಇನ್ನೊಂದು, ಸರಪಳಿ ಹರಿಯುವುದು. ದೇವಸ್ಥಾನದ ಕೆಳಗಡೆ ನಿರ್ದಿಷ್ಟವಾದ ಜಾಗೆಯೊಂದರಲ್ಲಿ ಕಟ್ಟಲಾಗಿರುವ ಬೃಹತ್ ಸರಪಳಿಯನ್ನ ಬರಿಗೈಯಿಂದ ತುಂಡುಮಾಡುವ ‘ದೇವರ ಪೂಜಾರಿ’ಯ ಸಾಹಸ ನೆರೆದಿದ್ದ ಲಕ್ಷಾಂತರ ಜನರ ಭಕ್ತಿಭಾವಕ್ಕೆ ಕಾರಣವಾಗುತ್ತದೆ.-----

ಕುರಿ ಹಾರಿಸುವಿಕೆಗೆ ನಿಷೇಧ:

ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿಗಳನ್ನು ಹಾರಿಸುವುದನ್ನು ನಿಷೇಧಿಸಿ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೊರಡಿಸಿದ್ದಾರೆ. ಮೈಲಾಪುರ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯು ಜನವರಿ 12 ರಿಂದ 18ರವರೆಗೆ ನಡೆಯುವುದರಿಂದ, ಜನವರಿ 14ರಂದು ಜಾತ್ರೆಯಲ್ಲಿ ದೇವರ ಪಲ್ಲಕ್ಕಿಗಾಗಿ ಭಕ್ತರು ಕುರಿಗಳನ್ನು ಹಾರಿಸುವ ವಾಡಿಕೆ ಇರುತ್ತದೆ. ಈ ಹಿನ್ನೆಲೆ ಪ್ರಾಣಿ ಹಕ್ಕು ಕಾಯ್ದೆ 1960ನ್ನು ಉಲ್ಲಂಘನೆಯಾಗದಂತೆ ಅವಶ್ಯಕ ಕ್ರಮ ವಹಿಸಬೇಕು. ದೇವರ ಪಲ್ಲಕ್ಕಿಗೆ ಕುರಿ ಹಾಗೂ ಪ್ರಾಣಿಗಳನ್ನು ಹಾರಿಸುವುದು ಮತ್ತು ಜಾತ್ರೆಯಲ್ಲಿ ಕುರಿ ಮಾರಾಟ, ಖರೀದಿ, ಹರಾಜು ಮಾಡುವುದನ್ನು ನಡೆಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಸೂಕ್ತವೆಂದು ಕಂಡುಬಂದಿದೆ.

ಜನವರಿ 12ರ ಮಧ್ಯರಾತ್ರಿಯಿಂದ ಜನವರಿ 18ರ ಮಧ್ಯರಾತ್ರಿಯವರೆಗೆ ಗ್ರಾಮಕ್ಕೆ ಹೊಂದಿಕೊಂಡಿರುವ, ಕೂಡು ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಕುರಿಗಳು ಜಾತ್ರೆಯಲ್ಲಿ ಪ್ರವೇಶವಾಗದಂತೆ ತಡೆಗಟ್ಟುವುದು. ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಗೆ ಕುರಿ ಹಾಗೂ ಪ್ರಾಣಿಗಳನ್ನು ಹಾರಿಸುವುದು ಅಥವಾ ಕುರಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಸ್ಥಳದ ಜಮೀನನ್ನು, ನಿವೇಶನವನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು. ಕುರಿಗಳನ್ನು ವಾಹನದಲ್ಲಿಯೇ ಮಾರಾಟ ಮಾಡುವುದು ತಿಳಿದುಬಂದರೆ, ಆ ವಾಹನವನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಬೇಕು. ಜನವರಿ 14ರಂದು ಗಂಗಾಸ್ನಾನದ ಮೆರವಣಿಗೆಯ ಸಮಯದಲ್ಲಿ ಸಾಮೂಹಿಕವಾಗಿ ಕೊಂಡೊಯ್ಯುವ ಶಸ್ತ್ರದ ಬೆತ್ತದ ಬಡಿಗೆ ಹಾಗೂ ಛತ್ರಿಗಳನ್ನು ತೆಗೆದುಕೊಂಡು ಹೋಗುವುದು ನಿಷೇಧಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೆ ಸೂಚನೆ

ಯಾದಗಿರಿ: ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ, ಮದ್ಯಪಾನ ಹಾಗೂ ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೊರಡಿಸಿದ್ದಾರೆ. ಈ ಜಾತ್ರೆಯ ಸಂದರ್ಭದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೈಲಾಪೂರ, ಅರಕೇರಾ ಹಾಗೂ ರಾಮಸಮುದ್ರ ಗ್ರಾಮದ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ, ಯಾದಗಿರಿ ತಾಲೂಕಿನ ಮೈಲಾಪೂರ, ಅರಕೇರಾ ಹಾಗೂ ರಾಮಸಮುದ್ರ ಗ್ರಾಮಗಳಲ್ಲಿ ಜನವರಿ 13ರ ಮಧ್ಯರಾತ್ರಿಯಿಂದ ಜನವರಿ 15ರ ಮಧ್ಯರಾತ್ರಿಯ ವರೆಗೆ ಎಲ್ಲಾ ವೈನ್‌ಶಾಪ್, ಬಾರ್‌ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಕುರಿಮರಿಗಳ ಎಸೆಯುವ ಸಂಪ್ರದಾಯ ..!?

ಮೈಲಾಪುರದ ಗುಡ್ಡದ ಮೇಲಿನ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಪೌರಾಣಿಕ ಐತಿಹ್ಯವಿದೆ. ಜಾತ್ರೆಯ ಪ್ರತಿವರ್ಷ ಮಕರ ಸಂಕ್ರಮಣದಂದು ಜಾತ್ರೆ ನಡೆಯುತ್ತದೆ. ಮೈಲಾರಲಿಂಗನಿಗೆ ಕುರಿ ಒಪ್ಪಿಸುವ ಹರಕೆ ಕಳೆದ ಅನೇಕ ದಶಕಗಳಿಂದ ಮುಂದುವರೆದಿತ್ತು. ಜಾತ್ರೆಯ ದಿನದಂದು, ಅಲ್ಲಿನ ಹೊನ್ನಕೆರೆ (ಕೆರೆ)ಯಲ್ಲಿ ಮೈಲಾರಲಿಂಗನ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಗರ್ಭಗುಡಿಗೆ ಕರೆದೊಯ್ಯುವ ಸಂದರ್ಭದಲ್ಲಿ ಸಾವಿರಾರು ಹರಕೆಯ ಕುರಿಗಳನ್ನ ಎಸೆಯುವ ಅಮಾನವೀಯ ಕೃತ್ಯ ನಡೆಯುತ್ತಿತ್ತು. ಭಂಡಾರದ ಬಣ್ಣದ ನಡುವೆ ಭಯ-ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿ, ಲಕ್ಷಾಂತರ ಭಕ್ತರ ಕಾಲುಗಳಲ್ಲಿ ಸಿಲುಕಿ ಸಾವಿರಾರು ಕುರಿಮರಿಗಳು ಸಾವನ್ನಪ್ಪುತ್ತಿದ್ದವು. ಇದೊಂದು ರೀತಿಯ ಸಾಮಾನ್ಯ ಪ್ರಕ್ರಿಯೆ ಎಂಬಂತೆ ಅಲ್ಲಿ ಎಲ್ಲರೂ ಮೂಕಪ್ರೇಕ್ಷಕರಾಗಿಯೇ ಇರುತ್ತಿದ್ದರು. ಹರಕೆಯ ಹೆಸರಿನಲ್ಲಿ ಮೂಕಪ್ರಾಣಿಗಳ ಮೇಲಿನ ಇಂತಹ ದೌರ್ಜನ್ಯಕ್ಕೆ ಅಂತ್ಯ ಹಾಡಬೇಕೆಂದು ಭಕ್ತರ ಮನವೊಲೈಸುವ, ಎಚ್ಚರಿಕೆ ನೀಡುವ, ಮೀರಿದರೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಜನಜಾಗೃತಿ ಮೂಡಿಸಲಾಗಿದೆ. ಕುರಿಮರಿಗಳ ರಕ್ಷಿಸಲು ಮೈಲಾಪುರದ ಸುತ್ತಮುತ್ತ ಚೆಕ್ ಪೋಸ್ಟ್‌ಗಳ ನಿರ್ಮಿಸಿ, ಭಕ್ತರಿಂದ ಅಲ್ಲೇ ಪಡೆಯಲಾಗುತ್ತಿದೆ. ಎಲ್ಲೆಡೆ ಬಿಗಿ ಬಂದೋಬಸ್ತ್ ಮೂಲಕ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಜನರಿಗೆ ಈ ಬಗ್ಗೆ ಮನವರಿಕೆ ಮಾಡಿ, ಜಪ್ತಿ ಮಾಡಿದ ಕುರಿಮರಿಗಳನ್ನು ಪಶು ಸಂಗೋಪನಾ ಇಲಾಖೆ ಸುಪರ್ದಿಗೆ ನೀಡಿ, ಮರುದಿನ ಒಟ್ಟು ಕುರಿಮರಿಗಳ ಹರಾಜು ಹಾಕಿ, ಬರುತ್ತಿದ್ದ ಲಕ್ಷಾಂತರ ರುಪಾಯಿಗಳ ಆದಾಯವನ್ನು ಮೈಲಾಪುರದ ಅಭಿವೃದ್ಧಿಗಾಗಿ ನೀಡಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ