ಕನ್ನಡಪ್ರಭ ವಾರ್ತೆ ತುಮಕೂರುಕಲ್ಪತರುನಾಡಿನ ಶ್ರೀರಾಮ ಹಾಗೂ ಆಂಜನೇಯಸ್ವಾಮಿಯ ದೇವಾಲಯಗಳಲ್ಲಿ ಶ್ರೀರಾಮನವಮಿಯನ್ನು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀರಾಮ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಶ್ರೀರಾಮನಾಮ ಸ್ಮರಣೆ, ಘೋಷಣೆಗಳು ಮೊಳಗಿದವು. ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮನಮವಿ ಅಂಗವಾಗಿ ಶ್ರೀಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಕೆಲವು ಸಂಘ ಸಂಸ್ಥೆಗಳು, ಯುವಕ ಸಂಘಗಳು ಸಹ ಶ್ರೀರಾಮನಮವಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಹಬ್ಬದ ವಿಶೇಷವಾಗಿ ಪಾನಕ, ಮಜ್ಜಿಗೆ, ಹೆಸರು ಬೇಳೆ, ಅನ್ನದಾಸೋಹ ವ್ಯವಸ್ಥೆ ಮಾಡಿದ್ದು ಸಹ ಗಮನ ಸೆಳೆಯಿತು. ಜಾತಿ, ಮತ ಮೀರಿದ, ಸೌಹಾರ್ದತೆಯ ಸಂಕೇತವಾಗಿರುವ ಶ್ರೀರಾಮನವಮಿಯನ್ನು ಮುಸ್ಲಿಂ ಬಾಂಧವರು ಸೇರಿ ಆಚರಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ನಗರದ ಬಿ.ಎಚ್. ರಸ್ತೆಯುದ್ದಕ್ಕೂ ಭಕ್ತಾದಿಗಳು ಶ್ರೀರಾಮನ ಭಾವಚಿತ್ರ ಇಟ್ಟು ಪೆಂಡಾಲ್ ಹಾಕಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ತುಮಕೂರಿನ ಸೋಮೇಶ್ವರಪುರಂನಲ್ಲೂ ಕೂಡ ಶ್ರೀರಾಮನವಮಿ ಅಂಗವಾಗಿ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿಯನ್ನು ವಿತರಿಸಲಾಯಿತು. ಎಸ್ಐಟಿ ಮತ್ತಿತರೆ ಬಡಾವಣೆಗಳಲ್ಲೂ ಕೂಡ ರಾಮನಾಮ ಸ್ಮರಣೆ ಮಾಡುವ ಮೂಲಕ ಸಂಭ್ರಮದಿಂದ ರಾಮನವಮಿ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಪರಸ್ಪರ ಶುಭ ಕೋರುತ್ತಾ ಶ್ರೀರಾಮನವಿಗೆ ಮೆರಗು ತಂದರು. ಶ್ರೀರಾಮ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಒಟ್ಟಾರೆಯಾಗಿ ಕಲ್ಪತರು ನಾಡಿನಲ್ಲಿ ಸಂಭ್ರಮ ಮನೆ ಮಾಡಿತ್ತು.