ಹಾವೇರಿ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಶ್ರೀ ರಾಮನವಮಿ ಆಚರಣೆ

KannadaprabhaNewsNetwork |  
Published : Mar 28, 2026, 02:00 AM IST
ಹಾವೇರಿ ನಗರದ ರಾಮದೇವ ಮಂದಿರದಲ್ಲಿ ಶ್ರೀ ರಾಮನವಮಿ ಅಂಗವಾಗಿ ತೊಟ್ಟಿಲೋತ್ಸವ ಹಾಗೂ ಪಲ್ಲಕ್ಕಿ ಸೇವೆ ಜರುಗಿತು. | Kannada Prabha

ಸಾರಾಂಶ

ಹಾವೇರಿ ಜಿಲ್ಲಾದ್ಯಂತ ಶ್ರೀ ರಾಮನವಮಿ ಅಂಗವಾಗಿ ಶುಕ್ರವಾರ ರಾಮದೇವರ ಮಂದಿರಗಳಲ್ಲಿ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಸೇವಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಂದ ಜರುಗಿದವು. ಎಲ್ಲೆಡೆ ರಾಮನಾಮ ಜಪ ಕೇಳಿಬಂದವು.

ಹಾವೇರಿ: ಜಿಲ್ಲಾದ್ಯಂತ ಶ್ರೀ ರಾಮನವಮಿ ಅಂಗವಾಗಿ ಶುಕ್ರವಾರ ರಾಮದೇವರ ಮಂದಿರಗಳಲ್ಲಿ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಸೇವಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಂದ ಜರುಗಿದವು. ಎಲ್ಲೆಡೆ ರಾಮನಾಮ ಜಪ ಕೇಳಿಬಂದವು.ನೂರಾರು ವರ್ಷಗಳ ಇತಿಹಾಸ ಹೊಂದಿರುವ ನಗರದ ದೇಸಾಯಿಗಲ್ಲಿಯಲ್ಲಿರುವ ಶ್ರೀ ರಾಮದೇವರ ದೇವಸ್ಥಾನದಲ್ಲಿ ಶುಕ್ರವಾರ ಪ್ರತಿವರ್ಷದ ಪದ್ಧತಿಯಂತೆ ಈ ಬಾರಿಯೂ ಕೂಡ ರಾಮನವಮಿ ಆಚರಿಸಲಾಯಿತು. ಬೆಳಗ್ಗೆ 6 ಗಂಟೆಗೆ ಕಾಕಡಾರತಿ ಪೂಜೆ ಜರುಗಿತು. ಬೆಳಗ್ಗೆ 7.30ಕ್ಕೆ ಪುಷ್ಪಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಮತ್ತು ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಮಧ್ಯಾಹ್ನ 12.30ಕ್ಕೆ ಮಲ್ಲಿಗೆ, ಸೇವಂತಿಗೆ, ಸುಗಂಧ, ದಾಸವಾಳ, ಚಂಪಕ, ಗುಲಾಬಿ ಸೇರಿದಂತೆ ತರಹೇವಾರಿ ಹೂವುಗಳಿಂದ ಹಾಗೂ ಮಾವಿನ ತಳಿರು-ತೋರಣಗಳಿಂದ ಅಲಂಕಾರ, ವಸ್ತ್ರಾಲಂಕಾರ ಸೇವೆಯನ್ನು ಮಾಡಲಾಯಿತು. ಸರಿಯಾಗಿ ಮಧ್ಯಾಹ್ನ 12.40ಕ್ಕೆ ಶ್ರೀ ರಾಮನ ಜನ್ಮೋತ್ಸವ ನಿಮಿತ್ತ ತೋಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಬಳಿಕ ರಾಮದೇವ ದೇವಸ್ಥಾನದ ಆವರಣದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಸಡಗರ ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ಜರುಗಿಸಲಾಯಿತು.ಶ್ರೀರಾಮ ಸ್ತುತಿ ಪಠಣ: ತೊಟ್ಟಿಲೋತ್ಸವ ಸಂದರ್ಭದಲ್ಲಿ ರಾಮ ಜನ್ಮ ಕುರಿತ ಸ್ತುತಿಗಳನ್ನು ಭಕ್ತರು ಪ್ರಸ್ತುತಪಡಿಸಿದರು. ರಾಮ ಜನ್ಮವಾಯಿತು ಸಖಿ ರಾಮ ಜನ್ಮವು ಎಂಬ ಸ್ತುತಿಯನ್ನು ಪಠಣ ಮಾಡಿದರು. ಪಲ್ಲಕ್ಕಿ ಸೇವೆ ಸಮಯದಲ್ಲಿ ಶ್ರೀರಾಮ ಜಯ ರಾಮ, ಜಯ ಜಯ ರಾಮ ಎಂಬ ಘೋಷಣೆಗಳು ಮೊಳಗಿದವು. ಅಯೋಧ್ಯಾಪತಿ ಶ್ರೀ ಗುರು ರಾಮ ಚಂದ್ರ ಕೀ ಜೈ ಎಂಬ ಮಂತ್ರಘೋಷಣೆಗಳು ಎಲ್ಲೆಡೆ ಕಂಡುಬಂದವು.ಪೇಜಾವರ ಶ್ರೀಗಳು ಭೇಟಿ: ಕರ್ಜಗಿಯಲ್ಲಿ ನೂತನವಾಗಿ ನಿರ್ಮಿಸಿದ ವಿಶ್ವೇಶ ತೀರ್ಥ ಗುರುಕುಲದ ಉದ್ಘಾಟನೆಗೆ ಆಗಮಿಸಿದ್ದ ಉಡುಪಿಯ ಪೇಜಾವರಮಠದ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ರಾಮ ದೇವರ ದೇವಸ್ಥಾನಕ್ಕೆ ಆಗಮಿಸಿ ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಧರ್ಮದರ್ಶಿ ಹನುಮಂತನಾಯ್ಕ ಬದಾಮಿ ಸೇರಿದಂತೆ ಕೆಲವು ಭಕ್ತರಿಗೆ ಆಶೀರ್ವದಿಸಿ, ಮಂತ್ರಾಕ್ಷತೆ ವಿತರಿಸಿದರು. ಪಾನಕ ವಿತರಣೆ: ಶ್ರೀ ರಾಮನವಮಿ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಶ್ರೀರಾಮನ ಭಕ್ತಾದಿಗಳಿಗೆ ಕೋಸಂಬರಿ ಹಾಗೂ ಪಾನಕವನ್ನು ವಿತರಿಸಲಾಯಿತು. ದಿನವಿಡೀ ಉಪವಾಸ ವ್ರತ ಆಚರಣೆ ಮಾಡುವ ಭಕ್ತಾದಿಗಳಿಗೆ ಮಧ್ಯಾಹ್ನ 1.30ಕ್ಕೆ ಅವಲಕ್ಕಿ ಮೊಸರು, ಗೊಜ್ಜು ಅವಲಕ್ಕಿ ಉಪಾಹಾರ ವಿತರಿಸಲಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರು ಶ್ರೀರಾಮನ ದರ್ಶನವನ್ನು ಪಡೆದುಕೊಂಡು ಪುನೀತರಾದರು.ಈ ಸಂದರ್ಭದಲ್ಲಿ ಫಂಡರಾಪುರದ ಶ್ರೀ ಪ್ರಸಾದ ಮಹಾರಾಜ ಬಡವೆ ಶ್ರೀಗಳು, ದೇವಸ್ಥಾನದ ಧರ್ಮದರ್ಶಿ ಹನುಮಂತನಾಯಕ್ ಬದಾಮಿ, ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ವಸಂತ ಮೊಕ್ತಾಲಿ, ರಮೇಶ ಕಡಕೋಳ, ದತ್ತಾತ್ರೇಯ ಕಳ್ಳಿಹಾಳ, ಚಂದ್ರಕಾAತ ಕುಲಕರ್ಣಿ, ಎಚ್.ಎಸ್ ಕುಲಕರ್ಣಿ, ಅಶೋಕ ಕಳ್ಳಿಹಾಳ, ಉಮೇಶ ಕುಲಕರ್ಣಿ, ರಮೇಶ ಕುಲಕರ್ಣಿ, ಮಹಿಳಾ ಮಂಡಳದ ಮುಖ್ಯಸ್ಥೆ ಮೈಥಿಲಿ ಬದಾಮಿ ಸೇರಿದಂತೆ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಸರ್ವಜನಾಂಗದ ಭಕ್ತರು ಪಾಲ್ಗೊಂಡಿದ್ದರು.ಶ್ರೀ ರಾಮನವಮಿ ಅಂಗವಾಗಿ ಮಾ. 28ರಂದು ಬೆಳಗ್ಗೆ 10.30ಕ್ಕೆ ನಗರದ ದೇಸಾಯಿಗಲ್ಲಿ ರಾಮಮಂದಿರದಲ್ಲಿ ನಿತ್ಯದ ಪೂಜೆ ನೆರವೇರಿಸಿ, ಮಧ್ಯಾಹ್ನ 1.30 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗುವುದು. ಸಂಜೆ ವೇಳೆ ಮಹಾಮಂಗಳಾರತಿಯನ್ನು ನೆರವೇರಿಸಲಾಗುವುದು ಎಂದು ರಾಮಮಂದಿರ ದೇವಸ್ಥಾನ ವ್ಯವಸ್ಥಾಪಕ ಹನುಮಂತನಾಯಕ್ ಬದಾಮಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುದ್ಧ ಎಫೆಕ್ಟ್, ರಸಗೊಬ್ಬರ ಬಳಕೆ ಮೇಲೆ ನಿಗಾ
ಆಧ್ಯಾತ್ಮಿಕ ನೆಲೆಯಲ್ಲಿ ಮಕ್ಕಳ ಬದುಕು ರೂಪಗೊಳ್ಳಲಿ-ಪೇಜಾವರ ಶ್ರೀ