ದಾಬಸ್‍ಪೇಟೆ: ವಿಷ್ಣುವಿನ ಏಳನೇ ಅವತಾರ ಶ್ರೀರಾಮನಾಗಿದ್ದು, ಇಂದಿಗೂ ಆತ ಭಾರತವಷ್ಟೇ ಅಲ್ಲ, ಸುತ್ತಮುತ್ತಲಿನ ಅನೇಕ ದೇಶಗಳಿಗೆ ಆದರ್ಶವಾಗಿದ್ದಾನೆ. ಶ್ರೀರಾಮನು ಯಾವುದೇ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಪ್ರಜಾಕಲ್ಯಾಣಕ್ಕಾಗಿ ಸದಾ ಸ್ಪಂದಿಸುತ್ತಿದ್ದ ಶ್ರೀರಾಮ ಎಂದಿಗೂ ಜೀವಂತ. ಶ್ರೀರಾಮ ದೇವಪುರುಷ ಮಾತ್ರವಲ್ಲ, ಒಬ್ಬ ಉತ್ತಮ ಆಡಳಿತಗಾರನೂ ಹೌದು. ಆಡಳಿತಗಾರನಿಗೆ ಇರಬೇಕಾದ ಸರ್ವಗುಣ ಸಂಪನ್ನನಾಗಿದ್ದ. ಹೆತ್ತವರಿಗೆ ಸತ್ಪುತ್ರನಾಗಿದ್ದರೆ ಪ್ರಜೆಗಳಿಗೆ ಆದರ್ಶ ಪುರುಷೋತ್ತಮನಾಗಿದ್ದ ಎಂದರು.
ಇಂದು ನಾವು ಶ್ರೀರಾಮನ ದರ್ಶನ ಮಾಡುವುದು ಮಾತ್ರವಲ್ಲ, ನಮ್ಮ ಮಕ್ಕಳಿಗೆ ಶ್ರೀರಾಮನ ಮುಖಾಂತರ ಧರ್ಮವನ್ನು, ನೈತಿಕತೆಯನ್ನು, ನೀತಿಯನ್ನು ಹಾಗೂ ಒಟ್ಟು ಬದುಕನ್ನು ಕಟ್ಟಿಕೊಡುವ ಪರಿಯನ್ನು ಹೇಳಿಕೊಡೋಣ. ಶ್ರೀರಾಮನ ಆದರ್ಶವನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯೋಣ ಎಂದರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಎನ್ ಡಿಎ ಸದಸ್ಯ ಪ್ರಕಾಶ್ ಬಾಬು, ಮುಖಂಡರಾದ ವಾಸುದೇವ್, ಸೋಮಶೇಖರ್ ಮತ್ತಿತರರಿದ್ದರು.