ಕನ್ನಡಪ್ರಭ ವಾರ್ತೆ ಹಾಸನ
ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ತುರ್ತಾಗಿ ವಿಶೇಷ ಸಾಮಾನ್ಯ ಸಭೆಯನ್ನು ಕರೆಯುವಂತೆ ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರು ಸಾಮೂಹಿಕವಾಗಿ ಸೋಮವಾರ ನಗರಸಭೆಗೆ ಟಪಾಲ್ ಮೂಲಕ ಮನವಿ ನೀಡಿದ್ದಾರೆ.ನಗರಸಭೆಗೆ ನೀಡಿದ ಮನವಿ ಪತ್ರದಲ್ಲಿ "ನಗರಸಭಾ ಸದಸ್ಯರುಗಳಾದ ನಾವು ದಿನಾಂಕ:೨೮.೦೩.೨೦೨೫ರಂದು ಹಾಸನ ನಗರಸಭಾ ಆಯುಕ್ತರಾದ ತಮಗೆ ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಪತ್ರ ಮುಖೇನ ಕೋರಿದ್ದೆವು. ಆದರೆ, ನಾವುಗಳು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿ ಕೋರಿದ್ದ ಅವಧಿ ೧೦ ದಿನಗಳು ಕಳೆದಿದ್ದರೂ ಸಹ ನಿಯಮಾನುಸಾರ ಮತ್ತು ಕಾನೂನು ರೀತ್ಯಾ ಹಾಲಿ ನಗರಸಭಾ ಅಧ್ಯಕ್ಷರಾಗಲಿ, ನಗರಸಭಾ ಆಯುಕ್ತರಾಗಲಿ ಇದುವರೆಗೂ ಅವಿಶ್ವಾಸ ನಿರ್ಣಯ ಮಂಡಿಸಲು ವಿಶೇಷ ತುರ್ತು ಸಭೆಯನ್ನು ಕರೆದಿರುವುದಿಲ್ಲ. ಆದುದರಿಂದ ಹಾಸನ ನಗರಸಭಾ ಅಧ್ಯಕ್ಷರ ವಿರುದ್ಧ ಹಾಸನ ನಗರಸಭಾ ಸದಸ್ಯರು ನಿಮಗೆ ಪತ್ರ ಮುಖೇನ ದಿನಾಂಕ:೨೮.೦೩.೨೦೨೫ರಂದು ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯುವಂತೆ ತಮಗೆ ಕೋರಿರುವುದರಿಂದ ತಕ್ಷಣವೇ ಕರ್ನಾಟಕ ಪೌರಾಡಳಿತ ಕಾಯ್ದೆ ಕಲಂ ೪೨(೯)ರನ್ವಯ ಹಾಸನ ನಗರಸಭೆಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಶೇಷ ತುರ್ತು ಸಭೆಯನ್ನು ಕರೆದು ಹಾಲಿ ಹಾಸನ ನಗರಸಭಾ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ " ಈ ಮೂಲಕ ಕೋರುತ್ತೇವೆ ಎಂದು ಬರೆದಿದೆ.
ಇನ್ನು ನಗರಸಭೆ ಸದಸ್ಯ ಸಿ.ಆರ್. ಶಂಕರ್ ಮಾಧ್ಯಮದೊಂದಿಗೆ ಮಾತನಾಡಿ, ಮಾಜಿ ಸಚಿವರಾದ ಎಚ್.ಡಿ. ರೇವಣ್ಣರವರ ಸಮ್ಮುಖದಲ್ಲಿ ನಗರಸಭೆ ಜೆಡಿಎಸ್ ಸದಸ್ಯರೆಲ್ಲಾ ತೀರ್ಮಾನಕ್ಕೆ ಬಂದಿದ್ದು, ಈ ವೇಳೆ ಅಧ್ಯಕ್ಷರ ನೇಮಕದ ವೇಳೆ ನಮಗೆ ಮೂರು ತಿಂಗಳ ಅವಧಿ ಮೊದಲು ಬೇಕು ಎಂದು ಆಕಾಂಕ್ಷಿಗಳು ಪಟ್ಟು ಹಿಡಿದರು. ಈ ವೇಳೆ ಎಂ. ಚಂದ್ರೇಗೌಡರು ನನಗೆ ಕೊಡಿ ಮೂರು ತಿಂಗಳು ಸಾಕು ಎಂದರು. ಈ ನಿಟ್ಟಿನಲ್ಲಿ ಚಂದ್ರೇಗೌಡರಿಗೆ ಮೊದಲ ಅವಕಾಶ ನೀಡಿ ನಂತರ ಎರಡನೇ ಅವಧಿಗೆ ಗಿರೀಶ್ ಚನ್ನವೀರಪ್ಪ ಅವರಿಗೆ. ಮೂರನೇ ಅವಧಿಗೆ ಮುಸ್ಲಿಂ ಸಮುದಾಯ ನಗರಸಭೆ ಸದಸ್ಯರಾದ ಸಯ್ಯದ್ ಅಕ್ಬರ್, ಅಮಿರ್ ಜಾನ್ ಸೇರಿದಂತೆ ಯಾರಾದರೂ ಆಗಲಿ ಹಾಗೂ ನಾಲ್ಕನೆ ಅವಧಿಗೆ ಅಶ್ವಿನಿ ಮಹೇಶ್ ಅವರಿಗೆ ಕೊಡಲು ನಿರ್ಧರಿಸಲಾಗಿತ್ತು ಎಂದರು.ಈಗಾಗಲೇ ಮೊದಲ ಅವಧಿಯ ಅಧ್ಯಕ್ಷರ ಅಧಿಕಾರ 6 ತಿಂಗಳು ಮುಗಿದು ಏಳನೇ ತಿಂಗಳಿಗೆ ಮುಟ್ಟಿದೆ. ಇನ್ನು ರಾಜೀನಾಮೆ ಕೊಟ್ಟಿಲ್ಲ. ನಮ್ಮ ವರಿಷ್ಠರು ಎಲ್ಲಾ ರಾಜೀನಾಮೆ ಕೊಡುವಂತೆ ಕೇಳಲಾಗುತ್ತಿದೆ. ಹಾಸನಾಂಬೆ ಜಾತ್ರೆ ಇದ್ದುದರಿಂದ ಬೇರೆ ಕೆಲಸ ಮಾಡಲು ಆಗಲಿಲ್ಲ, ಅವಕಾಶ ಕೊಡಿ ಎಂದು ನಗರಸಭೆ ಅಧ್ಯಕ್ಷರಾದ ಚಂದ್ರೇಗೌಡರು ಕೇಳುವುದರ ಜೊತೆಗೆ ಮೊದಲ ಮೇಯರ್ ಆಗಬೇಕು ಮತ್ತು ಬಜೆಟ್ ಸಭೆ ಆಗಲಿ ಎಂದು ಕೇಳಿಕೊಂಡ ಪರಿಣಾಮ ಸುಮ್ಮನಾಗಿದ್ದರು. ಈಗ ಈ ಕುರಿತು ನಗರಸಭೆ ಜೆಡಿಎಸ್ ಸದಸ್ಯರಿಗೆಲ್ಲಾ ವರಿಷ್ಠರು ನೋಟಿಸ್ ಕೊಡಲಾಗಿದ್ದು, ಹೈಕಮಾಂಡ್ ಯಾವ ರೀತಿ ಹೇಳುತ್ತದೆ ಆ ರೀತಿ ಕೇಳುತ್ತೇವೆ. ಯಾವ ರೀತಿ ಈಗಾಯ್ತು ಎಂದು ಹೇಳುವುದಕ್ಕೆ ಮುಜುಗರವಾಗಿದೆ ಎಂದು ಹೇಳಿದರು. ಅಧ್ಯಕ್ಷರ ಮನಸ್ಸಿನಲ್ಲಿ ಏನಿದೆ ಅವರ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅವರು ವೈಯಕ್ತಿಕವಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮಾಧ್ಯಮದೊಂದಿಗೆ ಮಾತನಾಡಿ, ವರಿಷ್ಠರು ಮೂರು ತಿಂಗಳ ಅವಕಾಶ ಕೊಡಲಾಗಿದ್ದು, ಅವಧಿ ಮುಗಿದ ಮೇಲೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ವರಿಷ್ಠರು ಸೂಚಿಸಿದ್ದರು. ಆದರೆ ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡರು ಮೇಯರ್ ಆಗಬೇಕು ಒಂದು ಅವಕಾಶ ಕೊಡಿ ಎಂದಿದ್ದರು ಮತ್ತು ಬಜೆಟ್ ಮೀಟಿಂಗ್ ಕೂಡ ಕೇಳಿದಂತೆ ಕೊಡಲಾಗಿದೆ. ಆದರೆ ಮೇಯರ್ ಆಗಲು ನಮ್ಮ ಈ ಅವಧಿಯಲ್ಲಿ ಯಾರಿಗೂ ಸಿಗುವುದಿಲ್ಲ ತಡವಾಗುತ್ತದೆ. ಚಂದ್ರೇಗೌಡರು ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.