ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲಾ ಕೇಂದ್ರ ರಾಮನಗರದ ಇತಿಹಾಸ ಪ್ರಸಿದ್ಧ ಶ್ರೀ ರಾಮದೇವರ ಮಹಾರಥೋತ್ಸವ ಸೋಮವಾರ ಅತ್ಯಂತ ವಿಜೃಂಭಣೆ ಮತ್ತು ಭಕ್ತಿ ಭಾವದೊಂದಿಗೆ ಯಶಸ್ವಿಯಾಗಿ ನೆರವೇರಿತು.ನಗರದ ಅಗ್ರಹಾರದಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಬಳಿಯಿಂದ ಬೆಳಗ್ಗೆ ರಥೋತ್ಸವ ಆರಂಭವಾಯಿತು. ರಥೋತ್ಸವ ಚಾಲನೆಗೂ ಮುನ್ನ ಶ್ರೀರಾಮ ದೇವಾಲಯದಲ್ಲಿ ಪ್ರಾತಃ ಕಾಲ ಪೂಜೆ, ನವಗ್ರಹ ಪೂಜೆ, ಯಾತ್ರಾದಾನ ಮುಂತಾದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಸೀತಾ, ಲಕ್ಷಣ ಸಮೇತ ಶ್ರೀರಾಮ ದೇವರ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ತದನಂತರ ಅಗ್ರಹಾರ ಮುಖ್ಯ ರಸ್ತೆಯ ಮೂಲಕ ರಥೋತ್ಸವ ಕಾಮಣ್ಣನ ಗುಡಿ ವೃತ್ತಕ್ಕೆ ಬಂದಾಗ, ನೆರೆದಿದ್ದ ನೂರಾರು ಭಕ್ತರು ತಮ್ಮ ಕುಟುಂಬ ಸಮೇತರಾಗಿ ರಥದಲ್ಲಿ ವಿರಾಜಮಾನರಾಗಿದ್ದ ಶ್ರೀ ರಾಮ, ಸೀತಾ, ಲಕ್ಷ್ಮಣರಿಗೆ ಪೂಜೆ ನೆರೆವೇರಿಸಿದರು. ಅಗ್ರಹಾರ ಮುಖ್ಯರಸ್ತೆಯಲ್ಲಿ ಹಾಕಿದ್ದ ಬಣ್ಣ ಬಣ್ಣದ ರಂಗೋಲಿಗಳು ಗಮನ ಸೆಳೆದವು.ಭಕ್ತರಿಂದ ಪೂಜೆ ಸ್ವೀಕರಿಸಿದ ನಂತರ ಸಂಜೆ ವೇಳೆಗೆ ರಥೋತ್ಸವ ಪುನಃ ಆರಂಭವಾಯಿತು. ಎಂ.ಜಿ.ರಸ್ತೆ, ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ರಥ, ಇಳಿ ಸಂಜೆ ವೇಳೆಗೆ ಛತ್ರದ ಬೀದಿಯಲ್ಲಿರುವ ಶ್ರೀ ರಾಮ ದೇವಾಲಯದ ಬಳಿ ಸಮಾಪ್ತಿಯಾಯಿತು.
ಶ್ರೀರಾಮ ನವಮಿ ಮತ್ತು ಮಹಾ ರಥೋತ್ಸವದ ಅಂಗವಾಗಿ ಇಲ್ಲಿರುವ ಶ್ರೀರಾಮ ದೇವರ ಬೆಟ್ಟ ಮತ್ತು ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಮಾರ್ಚ್ 30ರಿಂದಲೇ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿವೆ. ಪ್ರಹ್ಲಾದ ಪರಿಪಾಲನೋತ್ಸವ ಯಶಸ್ವಿಯಾಗಿದೆ. ಕೀಲು ಕುದುರೆ ಉತ್ಸವ, ಪಲ್ಲಕ್ಕಿ ಉತ್ಸವ, ಶೇಷ ಶಯನ ಉತ್ಸವ, ಸೀತಾರಾಮ ಕಲ್ಯಾಣೋತ್ಸವ, ಹನುಮಂತೋತ್ಸವ, ಕೃಷ್ಣ ತುಲಾಭಾರ, ಚಿಕ್ಕ ಮತ್ತು ದೊಡ್ಡ ಗರುಡೋತ್ಸವ, ಚಿತ್ರ ಮಂಟಪೋತ್ಸವ, ನೂತನ ಪಲ್ಲಕ್ಕಿ ಉತ್ಸವ, ಪಾರ್ಥಸಾರಥಿ ಉತ್ಸವ, ಬೃಂದಾವನೋತ್ಸವ, ಉದ್ಯಾನೋತ್ಸವ, ಜಲ ಕ್ರೀಡೋತ್ಸವ, ಹೀಗೆ ದಿನನಿತ್ಯ ವಿವಿಧ ಉತ್ಸವಗಳು ಮತ್ತು ಕೈಂಕರ್ಯಗಳು ಏಪ್ರಿಲ್ 29ರವರೆಗೆ ಮುಂದುವರಿಯಲಿವೆ.ಶ್ರೀ ರಾಮ ರಥೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್. ಮಂಜುನಾಥ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ನಗರಸಭಾಧ್ಯಕ್ಷ ಕೆ.ಶೇಷಾದ್ರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ದಿಶಾ ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ಪಿಚ್ಚನಕೆರೆ ಜಗದೀಶ, ಮುಖಂಡರಾದ ಆನಂದಸ್ವಾಮಿ, ಜಿ.ವಿ.ಪದ್ಮನಾಭ, ಎಸ್.ಆರ್.ನಾಗರಾಜ, ಜಯಕುಮಾರ್, ತಾಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಮುಂತಾದವರು ದೇವಾಲಯಕ್ಕೆ ಭೇಟಿ ನೀಡಿ , ರಥೋತ್ಸವಕ್ಕೆ ಸಾಕ್ಷಿಯಾದರು.
ಈ ವೇಳೆ ಶ್ರೀ ಸೀತಾ ರಾಮ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಮನಮೋಹನ್ ಪ್ರಸಾದ್, ಅಧ್ಯಕ್ಷ ಆರ್.ರಾಘವೇಂದ್ರ, ಉಪಾಧ್ಯಕ್ಷರಾದ ಲಕ್ಷ್ಮಣ್, ಆರ್.ಜಿ.ಚಂದ್ರಶೇಖರ, ಪ್ರಧಾನ ಕಾರ್ಯದರ್ಶಿ ಕೆ.ವಿ.ಉಮೇಶ್, ಕಾರ್ಯದರ್ಶಿ ಆರ್.ಜೆ.ಕುಮಾರಸ್ವಾಮಿ, ಖಜಾಂಚಿ ನಾಗೇಂದ್ರ ಗುಪ್ತ, ಸಂಘಟನಾ ಕಾರ್ಯದರ್ಶಿ ಸಿ.ಎಸ್. ಮಹೇಶ್ , ಸಹ ಸಂಘಟನಾ ಕಾರ್ಯದರ್ಶಿ ಆರ್.ಆರ್.ಪುರುಷೋತ್ತಮ ಸೇರಿದಂತೆ ಟ್ರಸ್ಟಿಗಳು, ರಾಜಭೋವಿ ಮತಸ್ಥರು, ಮರಗೆಲಸ ಸಂಘದ ಪದಾಧಿಕಾರಿಗಳು ಹಾಜರಿದ್ದರು.ಶ್ರೀರಾಮ ಮಹಾರಥೋತ್ಸವ ರಾಮನಗರ ಜಿಲ್ಲೆ, ಬೆಂಗಳೂರು ನಗರ, ಮಂಡ್ಯ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿದೆ. ಶ್ರೀರಾಮ ರಥೋತ್ಸವಕ್ಕೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಶ್ರೀರಾಮದೇವರ ದರ್ಶನ ಪಡೆದರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತರ ದಾಹ ಮತ್ತು ಹಸಿವು ನೀಗಿಸಲು ಎಂ.ಜಿ.ರಸ್ತೆ, ಮುಖ್ಯ ರಸ್ತೆ, ಹಳೇ ಬಸ್ ನಿಲ್ದಾಣ, ಛತ್ರದ ಬೀದಿ ಹೀಗೆ ನಗರದ ವಿವಿಧೆಡೆ ಸಂಘ- ಸಂಸ್ಥೆಗಳು ಹಾಗೂ ದಾನಿಗಳು ವೈಯಕ್ತಿಕವಾಗಿ ಅರವಟ್ಟಿಗೆಗಳನ್ನು ಏರ್ಪಡಿಸಿದ್ದರು. ನೀರು, ಮಜ್ಜಿಗೆ, ಪಾನಕ, ಕೋಸಂಬರಿ, ಕೇಸರಿ ಬಾತ್, ಬಗೆಬಗೆಯ ರೈಸ್ ಬಾತ್ ಗಳನ್ನು ವಿತರಿಸಲಾಯಿತು.
ಶ್ರೀರಾಮ ರಥೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.