ಸೋಮರಡ್ಡಿ ಅಳವಂಡಿ
ಕೊಪ್ಪಳ:ರೈತರ ಸಂಕಷ್ಟಕ್ಕೆ ನೆರವಾಗಲಿ ಎಂದು ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ)ಯಲ್ಲಿ ಭಾರಿ ಗೋಲ್‌ಮಾಲ್ ನಡೆಯುತ್ತಿದೆ. ರೈತರ ಹೆಸರಿನಲ್ಲಿ ಪ್ರೀಮಿಯಮ್ ತುಂಬಿ, ಬೆಳೆ ವಿಮಾ ಪರಿಹಾರವನ್ನು ಲೂಟಿ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯ ಬೊಮ್ಮನಾಳ ಗ್ರಾಮದಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.ಆಗಿದ್ದೇನು?
ಕುಷ್ಟಗಿ ತಾಲೂಕಿ ಬೊಮ್ಮನಾಳ ಗ್ರಾಮದಲ್ಲಿನ ಸರ್ವೇ 53ರಲ್ಲಿ ಮೆಕ್ಕೆಜೋಳ ಬೆಳೆ ಹಾಕಲಾಗಿದೆ. ಆದರೆ, ಇದಕ್ಕೆ ಆಕ್ಷೇಪ ಸಲ್ಲಿಕೆ ಮಾಡಿ, ನಂತರ, ಈರುಳ್ಳಿ ಬೆಳೆ ಎಂದು ಬದಲಾಯಿಸುವ ಕೋರಿಕೆ ಸಲ್ಲಿಸಿದ್ದಾರೆ. ಅದನ್ನೇ ಕೃಷಿ ಇಲಾಖೆಯ ಅಧಿಕಾರಿಗಳು ಪರಾಮರ್ಶೆ ಮಾಡದೆಯೇ ಈರುಳ್ಳಿ ಎಂದು ಬೆಳೆ ಬದಲಾಯಿಸಿದ್ದಾರೆ. ಹೀಗೆ, ಆದ ಮೇಲೆ ಈರುಳ್ಳಿ ಬೆಳೆ ಹಾನಿಯ ಪರಿಹಾರ ಕ್ಲೇಮ್ ಮಾಡಿದ್ದಾರೆ.ಭೀಮವ್ವ ಪಡಚಿಂತಿ ಅವರ ಸರ್ವೆ ನಂಬರ್ ಹೆಸರಿನಲ್ಲಿ ಬೆಳೆ ವಿಮೆಯನ್ನು ಬಸವರಾಜ ಎನ್ನುವವರು ಕ್ಲೇಮ್ ಮಾಡಿದ್ದಾರೆ. ಈ ರೀತಿ 2023-24ನೇ ಸಾಲಿನಲ್ಲಿ ಬೆಳೆವಿಮೆ ಪರಿಹಾರದಲ್ಲಿ ಗೋಲ್‌ಮಾಲ್ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಬೆಳೆ ವಿಮೆ ಪರಿಹಾರ ಜಮೆಯಾಗುತ್ತಿದ್ದು, ಈಗ ಬೆಳಕಿಗೆ ಬಂದಿವೆ.
ಭಾರಿ ಗೋಲ್‌ಮಾಲ್:ಗ್ರಾಮದಲ್ಲಿ ಪಾಳು ಬಿದ್ದ ಭೂಮಿಗೂ ಬೆಳೆ ವಿಮೆ ತುಂಬುತ್ತಾರೆ. ಯಾವ ಬೆಳೆಗೆ ಜಾಸ್ತಿ ಪರಿಹಾರ ಬರುತ್ತದೆ ಆ ಬೆಳೆ ವಿಮೆ ಪರಿಹಾರವನ್ನು ಭರ್ತಿ ಮಾಡುತ್ತಾರೆ. ಇದಾದ ಮೇಲೆ ಬೆಳೆ ವಿಮೆ ಪರಿಹಾರ ಬಂದಾಗ ಅದನ್ನು ಲೂಟಿ ಹೊಡೆಯುತ್ತಿದ್ದಾರೆ. ಸರ್ಕಾರಿ ನೌಕರಿ ಮಾಡಲು ಊರು ಬಿಟ್ಟವರು, ಗುಳೆ ಹೋದವರು ಅಥವಾ ಬಿತ್ತನೆ ಮಾಡದೆ ಪಾಳು ಬಿದ್ದ ಭೂಮಿ ಗುರುತಿಸಿ, ಇವುಗಳಿಗೆ ಬೆಳೆ ವಿಮೆ ಕಂತು ಪಾವತಿ ಮಾಡುತ್ತಾರೆ. ನಂತರ ಬಂದ ಪರಿಹಾರ ಬಾಚಿಕೊಳ್ಳುತ್ತಾರೆ. ಹೀಗೆ ಲಕ್ಷ ಲಕ್ಷ ದೋಚುವ ಗ್ಯಾಂಗುಗಳೇ ಹುಟ್ಟಿಕೊಂಡಿವೆ.
ಕ್ರಿಮಿನಲ್ ಕೇಸ್:ಈ ಘಟನೆಯಿಂದ ಎಚ್ಚೆತ್ತಿರುವ ಕೃಷಿ ಇಲಾಖೆ ಈಗ ಅಂಥವರನ್ನು ಪತ್ತೆ ಮಾಡಿ, ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದೆ. ಹನುಮನಾಳ ಹೋಬಳಿ ಸೇರಿದಂತೆ ಅನೇಕ ಹೋಬಳಿಗಳಲ್ಲಿ ಇಂತಹ ಪ್ರಕರಣಗಳನ್ನು ವಿಚಕ್ಷಣ ದಳ ಪತ್ತೆ ಮಾಡಿದೆ. ಆದರೂ ಈ ವರೆಗೂ ಆರೋಪಿಗಳ ವಿರುದ್ಧ ದೂರು ದಾಖಲಾಗಿಲ್ಲ. ಇದು ಕೇವಲ ಕುಷ್ಟಗಿ ತಾಲೂಕಿಗೆ ಸೀಮಿತವಾಗದೆ ಜಿಲ್ಲಾದ್ಯಂತ ಪಾಳು ಬಿದ್ದ ಭೂಮಿ ಪತ್ತೆ ಮಾಡಿ, ಅದಕ್ಕೆ ಬೆಳೆ ವಿಮೆ ಬರಬಹುದಾದ ಬೆಳೆ ಗುರುತಿಸಿ, ವಿಮೆ ಕಂತು ಪಾವತಿಸಿ ಪರಿಹಾರ ಲೂಟಿ ಮಾಡುತ್ತಿದ್ದಾರೆ. ಇದರಲ್ಲಿ ಕೆಲ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳ ಪ್ರತಿನಿಧಿಗಳು ಭಾಗಿಯಾಗಿರುವುದರಿಂದ ಗೋಲ್‌ಮಾಲ್ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ
ಬೆಳೆ ವಿಮೆ ಕಂತು ಪಾವತಿಸಿದ ಬೆಳೆಯೇ ಅಧಿಕ ಹಾನಿ ಎಂದು ಲೆಕ್ಕಚಾರ ಮಾಡಲಾಗುತ್ತದೆ. ಹನುಮನಾಳ ಹೋಬಳಿಯಲ್ಲಿ ಮೆಕ್ಕೆಜೋಳ ಹಾನಿಯನ್ನು ಶೇ. 16 ತೋರಿಸಿದ್ದರೆ ಈರುಳ್ಳಿ ಬೆಳೆಯನ್ನು ಶೇ. 40ರಷ್ಟು ಹಾನಿ ಎಂದು ತೋರಿಸಲಾಗಿದೆ. ಇಲ್ಲಿ ಗೋಲ್‌ಮಾಲ್ ಮಾಡಿದವರು ಈರುಳ್ಳಿ ವಿಮಾ ಕಂತು ಪಾವತಿಸಿದ್ದಾರೆ. ಇದರ ಹಿಂದೆ ದೊಡ್ಡ ಗ್ಯಾಂಗ್ ಇದ್ದು ಸಮಗ್ರ ತನಿಖೆಯಾದರೆ ಸತ್ಯ ಬೆಳಕಿಗೆ ಬರುತ್ತದೆ.ಜಮೀನಿನ ಮಾಲೀಕರಲ್ಲದವರ ಹೆಸರಿನಲ್ಲಿ ಬೆಳೆ ವಿಮಾ ಪರಿಹಾರ ಪಡೆಯಲಾಗುತ್ತಿದೆ. ರೈತರು ಅಥವಾ ಭೂಮಿ ಮಾಲೀಕರಿಗೆ ಗೊತ್ತಿಲ್ಲದಂತೆ ವಿಮಾ ಕಂತು ಪಾವತಿಸಿ, ಪರಿಹಾರ ಪಡೆಯಲಾಗಿದೆ. ನಮ್ಮ ಹೊಲದ ಪಕ್ಕದ ರೈತರಿಗೆ ಗೊತ್ತಿಲ್ಲದಂತೆ ಅವರು ಬೆಳೆಯದೇ ಇರುವ ಬೆಳೆಗೆ ಪರಿಹಾರ ಪಡೆಯಲಾಗಿದೆ.ರವಿರಾಜ ಕುಲಕರ್ಣಿ, ವಕೀಲ
ಈ ಬಗ್ಗೆ ಮಾಹಿತಿ ಬಂದಿದ್ದು, ತಕ್ಷಣ ಕ್ರಮ ವಹಿಸಲು ವಿಚಕ್ಷಣ ದಳಕ್ಕೆ ಸೂಚಿಸಲಾಗಿದೆ. ಅಲ್ಲದೆ ಸರ್ಕಾರಕ್ಕೂ ಸಹ ಆಧಾರ್ ಒಟಿಪಿ ಬೇಸ್ಡ್ ವಿಮಾ ಕಂತು ಪಾವತಿ ಜಾರಿಗೆ ತರುವಂತೆಯೂ ಪತ್ರ ಬರೆಯಲಾಗಿದೆ.ರುದ್ರೇಶಪ್ಪ, ಜೆಡಿ ಕೃಷಿ ಇಲಾಖೆ ಕೊಪ್ಪಳ