ಪುತ್ರಿಯ ಆಸ್ಪತ್ರೆಯ ಖರ್ಚುನ್ನು ಬಂಗಾರಮಕ್ಕೀ ಶಾಲಾ ಮಂಡಳಿ ಭರಿಸಲು ಒತ್ತಾಯ

KannadaprabhaNewsNetwork |  
Published : Apr 08, 2025, 12:33 AM IST
ಸ | Kannada Prabha

ಸಾರಾಂಶ

ವಿದ್ಯಾರ್ಥಿನಿಯ ತಂದೆ ಯಲ್ಲಾಪುರ ಮಂಚಿಕೇರಿಯ ತಿಮ್ಮಣ್ಣ ಹನುಮಂತಪ್ಪ ಭೋವಿವಡ್ಡರ ಒತ್ತಾಯಿಸಿದ್ದಾರೆ.

ಹೊನ್ನಾವರ: 8ನೇ ತರಗತಿ ವಿದ್ಯಾರ್ಥಿನಿ 3ನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 2 ಶಸ್ತ್ರಚಿಕಿತ್ಸೆ ಮಾಡಿದ್ದರೂ ಪ್ರಜ್ಞೆ ಬಂದಿಲ್ಲ. ಆಕೆಯ ವೈದ್ಯಕೀಯ ವೆಚ್ಚವನ್ನು ಗೇರಸೋಪ್ಪಾದ ಬಂಗಾರಮಕ್ಕಿ ಶಾಲಾ ಆಡಳಿತ ಮಂಡಳಿ ನೀಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿನಿಯ ತಂದೆ ಯಲ್ಲಾಪುರ ಮಂಚಿಕೇರಿಯ ತಿಮ್ಮಣ್ಣ ಹನುಮಂತಪ್ಪ ಭೋವಿವಡ್ಡರ ಒತ್ತಾಯಿಸಿದ್ದಾರೆ.

ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಡಾ.ಅಂಬೇಡ್ಕರ್ ಸೇವಾ ಸಮಿತಿಯ ಸಹಯೋಗದಲ್ಲಿ ಮನವಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು. ನನ್ನ ಮಗಳು ತ್ರಿಷಾಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶದಿಂದ ಮಾರುತಿ ಗುರೂಜಿ ಒಡೆತನದ ಶಿಕ್ಷಣ ಸಂಸ್ಥೆಯಲ್ಲಿ ಸೇರ್ಪಡೆ ಮಾಡಿದ್ದೆ. ತ್ರಿಷಾ ಮಾ.3ರಂದು 3ನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಳು. ಘಟನೆ ಬಗ್ಗೆ ವಾರ್ಡನ್ ಫೋನ್ ಮಾಡಿ ಬರಲು ಹೇಳಿದ್ದರು. ಅವರೇ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಾವು ಹೋಗುವ ತನಕ ಯಾವುದೇ ಚಿಕಿತ್ಸೆ ನೀಡಿಲ್ಲ. ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುತ್ತೇನೆ ಎಂದಿದ್ದರು.

ಹೊನ್ನಾವರ ಸಿಪಿಐ ಸಮ್ಮುಖದಲ್ಲಿ ಒಪ್ಪಿಗೆ ನೀಡಿದ್ದರು. ಸ್ವಲ್ಪ ಹಣ ಕೊಟ್ಟು ನಂತರ ನಮಗೆ ಸಂಬಂಧ ಇಲ್ಲ ಎಂದು ಕೈ ತೊಳೆದುಕೊಂಡಿದ್ದಾರೆ. ಒಂದು ಸಲ ಸಾಲ ಕೊಡಿ, ಮಗಳು ಗುಣಮುಖಳಾದ ನಂತರ ವಾಪಸ್ ಕೊಡುತ್ತೇನೆ ಎಂದರೂ ನಮಗೆ ಸಂಬಂಧ ಇಲ್ಲ ಎಂದರು. ಅಲ್ಲಿ ಇಲ್ಲಿ ಬೇಡಿ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇನೆ ಎಂದರು.

ನನ್ನ ಮಗಳು ಗಂಭೀರ ಸ್ಥಿತಿಯಲ್ಲಿದ್ದಾಳೆ. ಆಕೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್‌ ಸೇವಾ ಸಮಿತಿಯ ಸಂಸ್ಥಾಪಕ, ರಾಜ್ಯಾಧ್ಯಕ್ಷ ಯಲ್ಲಪ್ಪ ಫಕ್ಕೀರಪ್ಪ ಹೊಸಮನಿ ಮಾತನಾಡಿ, ವಿದ್ಯಾರ್ಥಿನಿ ಮಹಡಿಯಿಂದ ಬಿದ್ದು ಗಾಯಗೊಂಡಿರುವ ಘಟನೆ ಬಗ್ಗೆ ಅನುಮಾನವಿದೆ. ಯಾವ ಹಾಸ್ಟೆಲ್ ನಲ್ಲಿಯೂ ಇಂತಹ ಘಟನೆ ನಡೆಯಬಾರದು. ಆಕೆಯ ಆಸ್ಪತ್ರೆಯ ವೆಚ್ಚವನ್ನು ಶಾಲಾ ಆಡಳಿತ ಮಂಡಳಿ ಭರಿಸಬೇಕು. ಅವರು ಅದಕ್ಕೆ ಒಪ್ಪದೇ ಇದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದರು.

ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್ ವ್ಯವಸ್ಥೆ ಪರಿಶೀಲಿಸಬೇಕು. ಅಮಾಯಕ ಎಸ್ಸಿ-ಎಸ್ಟಿ ಮಕ್ಕಳಿಗೆ ಹೀಗೆ ಆಗ್ತಾ ಇದೆ. ಇದು ದುರ್ಘಟನೆ ಅಲ್ಲ; ದುರಂತ. ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ