ಕನ್ನಡಪ್ರಭ ವಾರ್ತೆ ಬೆಂಗಳೂರು
ಶ್ರೀರಾಮನಿಗೆ ತೊಟ್ಟಿಲು ಸೇವೆ, ಶ್ರೀರಾಮ ತಾರಕ ಮಂತ್ರ ಪಠಣ, ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮೂಲಕ ನಗರದ ವಿವಿಧ ದೇವಸ್ಥಾನಗಳಲ್ಲಿ ಶ್ರೀರಾಮ ನವಮಿಯನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು.ದೇವಾಲಯಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಶ್ರೀರಾಮ ಮೂರ್ತಿಗೆ ಪಂಚಾಮೃತ ಅಭಿಷೇಕ, ಹಣ್ಣು- ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಬಾಲರಾಮನನ್ನು ಇರಿಸಲಾಗಿದ್ದ ತೊಟ್ಟಿಲನ್ನು ತೂಗುವ ಮೂಲಕ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಹೋಮ ಹವನಾದಿ ಪೂಜಾ ಕಾರ್ಯಕ್ರಮಗಳು ಬೆಳಗ್ಗೆಯಿಂದ ನೆರವೇರಿದವು.
ನಗರದ ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಾಲಯ, ಹನುಮಂತ ನಗರದ ಶ್ರೀ ರಾಮಾಂಜನೇಯ ಗುಡ್ಡ, ರಾಗಿಗುಡ್ಡ ಆಂಜನೇಯ, ಮಹಾಲಕ್ಷ್ಮೀ ಬಡಾವಣೆಯ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ, ರಾಜಾಜಿನಗರದ ಶ್ರೀ ರಾಮಮಂದಿರ, ಮಿಂಟೋ ಆಂಜನೇಯ, ವಿಜಯನಗರದ ರಾಮಮಂದಿರ, ಮಾರುತಿ ಮಂದಿರ, ಶಿವಾಜಿನಗರದ ಆಂಜನೇಯ ಸ್ವಾಮಿ, ಜಯನಗರದ ಪಟ್ಟಾಭಿರಾಮ ದೇವಾಲಯ, ವಿದ್ಯಾರಣ್ಯಪುರದ ಶ್ರೀರಾಮ ಭಕ್ತ ಸಭಾ, ಮಾರುಕಟ್ಟೆ ಬಳಿಯ ಕೋಟೆ ಆಂಜನೇಯ, ಕೊಟ್ಟಿಗೆಪಾಳ್ಯದ ಶ್ರೀ ರಾಮದೇವಾಲಯ, ಟಿ. ದಾಸರಹಳ್ಳಿಯ ಶ್ರೀ ರಾಮಮಂದಿರ, ಸುಂಕದಕಟ್ಟೆಯ ಬೋಡುಬಂಡೆ ಆಂಜನೇಯ ಸ್ವಾಮಿ ದೇವಾಲಯ, ಮೈಸೂರು ಬ್ಯಾಂಕ್ ವೃತ್ತ, ಯಲಹಂಕ ದಾರಿ ಆಂಜನೇಯ ಸೇರಿ ನಗರದ ರಾಮಾಂಜನೇಯ ದೇವಾಲಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಶ್ರೀರಾಮನ ದರ್ಶನ ಪಡೆದರು.ದೇವಸ್ಥಾನ, ಮನೆಗಳಲ್ಲಿ ಅಷ್ಟೇ ಅಲ್ಲ ನಗರದ ವೃತ್ತಗಳಲ್ಲಿ, ಮುಖ್ಯರಸ್ತೆಗಳಲ್ಲಿ, ಬೀದಿಗಳಲ್ಲಿ ಶ್ರೀರಾಮನ ಭಾವಚಿತ್ರವನ್ನು ಇಟ್ಟು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ವಿತರಿಸಿದರು. ಬೇಸಿಗೆ ಬಿಸಿಲಿನ ಝಳದಿಂದ ಬಳಲಿದ್ದವರು ಪಾನಕ ಸೇವಿಸಿದರು. ಓಣಿ ಆಂಜನೇಯ ದೇವಸ್ಥಾನದ ಬಳಿ ತಂಪು ಪಾನೀಯದ ಜೊತೆಗೆ ಸಾವಿರಾರು ಜನತೆಗೆ ಕುಲ್ಫೀ ಐಸ್‌ಕ್ರಿಮ್ ವಿತರಿಸಿದ್ದು ವಿಶೇಷವಾಗಿತ್ತು.
ಜೊತೆಗೆ ನಗರದ ಗಲ್ಲಿಗಲ್ಲಿಗಳಲ್ಲಿ ರಾಮನ ಕಟೌಟ್ ಹಾಕಿ ಜೈಕಾರದ ಘೋಷಣೆ ಮೊಳಗಿದವು. ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯವೂ ನಡೆಯಿತು. ಗಾಳಿ ಆಂಜನೇಯ ದೇವಸ್ಥಾನ, ರಾಜಾಜಿನಗರ ರಾಮಮಂದಿರ ಸೇರಿ ವಿವಿಧ ದೇವಸ್ಥಾನಗಳಿಂದ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.ಹಲವು ದೇವಾಲಯಗಳಲ್ಲಿ ಶ್ರೀರಾಮನ ಸಂಗೀತ, ಹರಿಕಥಾ ಕಾಲಕ್ಷೇಪ ಕಾರ್ಯಕ್ರಮ, ಭಜನೆಗಳು ನಡೆದವು. ಐಟಿ-ಬಿಟಿ ಕಚೇರಿ, ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳಲ್ಲಿ ರಾಮನ ಆರಾಧನೆ ಮಾಡಲಾಯಿತು. ವಸತಿ ಸಂಕೀರ್ಣಗಳಲ್ಲಿ ಆಯೋಜಿಸಿದ್ದ ವಿಶೇಷ ಛದ್ಮವೇಷ ಸ್ಪರ್ಧೆಯಲ್ಲಿ ಪೋಷಕರು ಪುಟ್ಟ ಮಕ್ಕಳಿಗೆ ರಾಮ-ಸೀತೆಯ ಪೋಷಾಕು ತೊಡಿಸಿ ಸಂಭ್ರಮಿಸಿದರು.
ರಾಜಾಜಿನಗರದ ಶ್ರೀರಾಮ ಮಂದಿರದ ಶ್ರೀರಾಮ ಸೇವಾ ಮಂಡಳಿಯಿಂದ ರಾಮನವಮಿ ಪ್ರಯುಕ್ತ ಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅಯೋಧ್ಯೆ ಮಾದರಿಯಲ್ಲಿ ರಾಮೋತ್ಸವ ಮತ್ತು ಬೃಹತ್ ಬ್ರಹ್ಮರಥೋತ್ಸವ ಜರುಗಿತು. ಶ್ರೀರಾಮನಿಗೆ ಸುವರ್ಣ ವಜ್ರಾಂಗಿ ಕವಚ ಅಲಂಕಾರ ಮಾಡಲಾಗಿತ್ತು.ಸಂಜೆ ಶೇಷಾದ್ರಿಪುರ ಕಾಲೇಜು ಆವರಣ ಸೇರಿ ಹಲವೆಡೆ ಶ್ರೀರಾಮನ ಕುರಿತು ವಿಶೇಷ ಉಪನ್ಯಾಸ ನಡೆಯಿತು. ವಿವಿಧೆಡೆ ಭರತನಾಟ್ಯ, ನೃತ್ಯ ರೂಪಕ, ಸಂಗೀತ ಕಾರ್ಯಕ್ರಮ, ದೇವರನಾಮ, ಭಜನೆ, ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಮುಸ್ಲಿಮರಿಂದಲೂ ರಾಮನವಮಿ ಆಚರಣೆಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವ್ಯದ ಸಂಕೇತವಾಗಿ ಎಸ್.ಕೆ. ಕಾರ್ಸ್ ಮಾಲೀಕ ಮಹಮ್ಮದ್ ಸಲೀಂ ಅಹಮ್ಮದ್ ಹಾಗೂ ಸೋಮಶೇಖರ್ ನೇತೃತ್ವದಲ್ಲಿ ಅದ್ದೂರಿ ಶ್ರೀ ರಾಮನವಮಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮತ್ತು ಚಿಕ್ಕಣ್ಣ ಅವರು ಶ್ರೀ ರಾಮನವಮಿ ಆಚರಣೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಪಾನಕ ಮಜ್ಜಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ಲೋರಿಯಾ ಎಲಿಜಬೆತ್, ಹರೀಶ್ ಪಾರ್ಥ, ಬಿ.ಎಂ. ಜಗದೀಶ್, ಸೋಮಶೇಖರ್, ಅಮ್ಜದ್ ಖಾನ್, ನಯಾಜ್ ಪಾಷಾ, ಮೊಹಮ್ಮದ್ ಸಿದ್ದಿಕ್, ಪುಷ್ಪಲತಾ, ಅಶ್ವತ್ಥಮ್ಮ, ಜಯಶ್ರೀ, ಲಲಿತಮ್ಮ ಮುಂತಾದವರಿದ್ದರು.
ರಾಮನವಮಿ: ದೇಗುಲಗಳಲ್ಲಿ ಪೂಜೆ, ಹೋಮಆನೇಕಲ್: ನಗರದ ವಿವಿಧೆಡೆ ಶ್ರೀರಾಮನವಮಿ ಪ್ರಯುಕ್ತ ದೇಗುಲಗಳಲ್ಲಿ ಪೂಜೆ, ಹೋಮ ಅಲಂಕಾರ, ಪ್ರಸಾದ ವಿನಿಯೋಗ ಸಡಗರ ಸಂಭ್ರಮಗಳಿಂದ ನಡೆಯಿತು. ಪ್ರತಿಹಳ್ಳಿಯ ನಾಗರಕಟ್ಟೆ, ಹನುಮ ಮಂದಿರ, ಹಾಗೂ ವೃತ್ತಗಳಲ್ಲಿ ಭಕ್ತರು ಶ್ರೀ ರಾಮಚಂದ್ರ ಮೂರ್ತಿಯ ಪಟವನ್ನಿಟ್ಟು ಪೂಜೆ ಸಲ್ಲಿಸಿ ಪಾನಕ, ಕೋಸಂಬರಿ, ಮಜ್ಜಿಗೆಯನ್ನು ಮೊಗೆದು ಮೊಗೆದು ಕೊಡುವ ಮೂಲಕ ಅದ್ಧೂರಿಯಾಗಿ ಶ್ರೀ ರಾಮನ ಸೇವೆ ಸಲ್ಲಿಸಿದರು. ಅನೇಕಲ್ಲಿನ ಗಾಂಧಿ ವೃತ್ತದಲ್ಲಿರುವ ಪುರಾತನ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯ ವತಿಯಿಂದ ಹೆಸರುಬೇಳೆ, ಪಾನಕ, ಮಜ್ಜಿಗೆ ಜೊತೆಗೆ ನಿರಂತರ ಅನ್ನದಾನ ಸೇವೆ ನಡೆಸಿದರು. ಆನೇಕಲ್ ನಗರ ಹಾಗೂ ಗ್ರಾಮೀಣ ಭಾಗದಲ್ಲಿಯೂ ಅರವಂಟಿಕೆ ಅನ್ನದಾನವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ರಾಮಕೃಷ್ಣ ಪುರದ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪೂಜೆ, ಹೋಮ ನಡೆಸಿ ಮಳೆಗಾಗಿ ವರುಣ ದೇವರಿಗೆ ಪೂಜೆ ಸಲ್ಲಿಸಿದರು. ಸೇವಾಕರ್ತರ ಉತ್ಸಾಹ, ಭಕ್ತಾದಿಗಳ ದಂಡು ನೋಡಿದಲ್ಲಿ ಸ್ವಯಂ ರಾಮಚಂದ್ರ ಪ್ರಭುವೇ ಅವತರಿಸಿ ವಾನರ ಸೇನೆಯ ಉಪಚಾರ ಮಾಡಿದಂತಿತ್ತು. ಆನೇಕಲ್ ಯುವಕ ಯುವತಿ ತಂಡದವರು ಪ್ರವಾಸಿ ತಾಣ ಮುತ್ಯಾಲಮಡು ಬಳಿ ಮಂಗಗಳಿಗೆ ಬಾಳೆ ಹಣ್ಣು ಹಂಚುವ ಮೂಲಕ ರಾಮನವಮಿಯನ್ನು ವಿಶೇಷವಾಗಿ ಆಚರಿಸಿದರು.