ಬಸ್ತಿಮಠ, ಚರ್ಚ್, ಮಸೀದಿಗಳಿಗೆ ಬೇಟಿ: ಗುರುಗಳಿಂದ ಆಶೀರ್ವಾದ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಈ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾಜ್ ಭವಿಷ್ಯ ನುಡಿದರು.
ಬುಧವಾರ ಪಟ್ಟಣಕ್ಕೆ ಆಗಮಿಸಿ ಸಿಂಸೆ ಆಂಥೋಣಿ ಚರ್ಚ್, ಪಟ್ಟಣದ ಎಲ್.ಎಫ್.ಚರ್ಚ್, ಸಿಂಹನಗದ್ದೆ ಬಸ್ತಿಮಠ, ಸೇಂಟ್ ಆರ್ಥೋಡೆಕ್ಷ್ ಚರ್ಚ್, ಜಾಮೀಯ ಮಸೀದಿ, ಪ್ರವಾಸಿ ಮಂದಿರ ಸಮೀಪ ಇರುವ ಸೇಂಟ್ ಜಾರ್ಜ ಜಾಕೋ ಬೈಟ್ ಚರ್ಚ್ ಗೆ ಭೇಟಿ ನೀಡಿ ಗುರುಗಳಿಂದ ಆಶೀರ್ವಾದ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ಚಿಕ್ಕಮಗಳೂರು ಜಿಲ್ಲೆ ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಇಂದಿರಾ ಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ ಜನ್ಮನೀಡಿದ ಜಿಲ್ಲೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 5 ಶಾಸಕರು ಕಾಂಗ್ರೆಸ್ ನಿಂದ ಗೆದ್ದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಗೆದ್ದಿರಬಹುದು. ಹಿಂದೆ ಉಡುಪಿಯಲ್ಲೂ ಕಾಂಗ್ರೆಸ್ ಶಾಸಕರು ಗೆಲ್ಲುತ್ತಿದ್ದರು. ಉಡುಪಿ ಜಿಲ್ಲೆಯನ್ನು ಬಿಜೆಪಿ ಭದ್ರ ಕೋಟೆ ಎಂದು ಹೇಳಲಾಗದು. ಬಿಜೆಪಿ ತನ್ನ ಸ್ವಂತ ಶಕ್ತಿ ಯಿಂದ ಸರ್ಕಾರ ರಚನೆ ಮಾಡಲಿಲ್ಲ. ಆಪರೇಷನ್ ಕಮಲ ಮಾಡಿ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಿತ್ತು.
ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.100 ಬಾರಿ ಸುಳ್ಳನ್ನೇ ಹೇಳುತ್ತಾ ಬಂದರೆ ಅದೇ ಸತ್ಯ ಎಂದು ಜನರು ನಂಬಿ ಬಿಡುತ್ತಾರೆ. ಇದು ಬಿಜೆಪಿ ನಾಯಕರ ನಡವಳಿಕೆ ಎಂದರು.ಪ್ರಜಾಪ್ರಭುತ್ವದಲ್ಲಿ ಚುನಾವಣೆ ಸಮಯದಲ್ಲಿ ಯಾರೂ ಬೇಕಾದರೂ ಆಶ್ವಾಸನೆ ನೀಡಬಹುದು. ಆದರೆ, ಅದನ್ನು ಈಡೇರಿಸಬೇಕು. ಕಾಂಗ್ರೆಸ್ ಹುಟ್ಟಿದಾಗಿನಿಂದ ಈವರೆಗೆ ಬದಲಾಗಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾ ಬಂದಿದೆ. ಕಾಂಗ್ರೆಸ್ ದ್ವಜ ಬದಲಾಗಲಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ಕಾಂಗ್ರೆಸ್ ಸ್ವಾತಂತ್ರಕ್ಕೋಸ್ಕರ ಹೋರಾಟ ಮಾಡಿದ ಪಕ್ಷ. ಎಲ್ಲಾ ಜಾತಿ, ಧರ್ಮದ ಬಡವರಿಗೆ ಸಹಾಯ ಮಾಡಿದೆ.ಇಂದಿರಾ ಗಾಂಧಿ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮ ಜಾರಿ ಮಾಡಿ ಬಡವರ ಕಷ್ಟಗಳಿಗೆ ಸ್ವಂದಿಸಿದ್ದೇವೆ ಎಂದರು.
ಕೇಂದ್ರ ಬಿಜೆಪಿ ಜಿಎಸ್ ಟಿ ತೆರಿಗೆ ವಿಧಿಸಿತು. ಗ್ಯಾಸ್, ಪೆಟ್ರೋಲ್ ಬೆಲೆ ಏರಿಸಿತು. ಎಲ್ಲಾ ಸಾಮಾನುಗಳ ಧಾರಣೆ ಏರಿಕೆಯಾಯಿತು. ಬಡವರು ಜೀವನ ಮಾಡುವುದೇ ಕಷ್ಟವಾಯಿತು. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕೈಗೊಂಡು ರಾಜ್ಯಕ್ಕೂ ಬಂದಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೊತೆ ಬಡವರ ಕಷ್ಟಗಳ ಬಗ್ಗೆ ಚರ್ಚೆ ಮಾಡಿ 5 ಗ್ಯಾರಂಟಿಗಳನ್ನು ಜಾರಿಗೆ ತೀರ್ಮಾನಿಸಲಾಗಿತ್ತು. ಚುನಾವಣೆಯಲ್ಲಿ ಗೆದ್ದ ನಂತರ ಮೊದಲ ಕ್ಯಾಬಿನೆಟ್ ನಲ್ಲೇ 5 ಗ್ಯಾರಂಟಿ ಜಾರಿಗೆ ತರಬೇಕು ಎಂದು ರಾಹುಲ್ ಸೂಚಿಸಿದ್ದರು. ಅದರಂತೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ 5 ಗ್ಯಾರಂಟಿ ಜಾರಿಗೆ ತಂದಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.ಈಗ ಪ್ರತಿ ಮನೆಗೂ 5 ರಿಂದ 6 ಸಾವಿರ ರು. ನೀಡುತ್ತಿದ್ದೇವೆ. 5 ಕೆ.ಜಿ. ಅಕ್ಕಿ ಬದಲಿಗೆ ಪ್ರತಿಯೊಬ್ಬ ಬಡವರಿಗೆ ತಿಂಗಳಿಗೆ 170 ರು. ನೀಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ್, ಕೆಪಿಸಿಸಿ ಸದಸ್ಯರಾದ ಪಿ.ಆರ್.ಸದಾಶಿವ, ಇಪ್ತೀಕರ್ ಆದಿಲ್, ಮುಖಂಡರಾದ ಕೆ.ಎ.ಅಬೂಬಕರ್, ಕೆ.ಎಂ.ಸುಂದರೇಶ್, ಇ.ಸಿ.ಜೋಯಿ, ಎಚ್.ಬಿ.ರಘುವೀರ್, ಎಂ.ಆರ್. ರವಿಶಂಕರ್, ಪ್ರಶಾಂತಶೆಟ್ಟಿ, ದೇವಂತ ಗೌಡ, ಜುಬೇದ, ಎಚ್.ಎಂ.ಮನು, ಸಾಜು, ಎಲ್ದೋ, ಎಲಿಯಾಸ್, ಶೇವಿಯಾರ್ ಮುಂತಾದವರಿದ್ದರು.