ಕನ್ನಡಪ್ರಭ ವಾರ್ತೆ ಮಾನ್ವಿ
ಪಟ್ಟಣದ ಪ್ರಮುಖ ಬೀದಿಗಳಲ್ಲಿ, ವಾಲ್ಮೀಕಿ ವೃತ್ತದಲ್ಲಿ ಪುತ್ಥಳಿಗೆ ಪೂಜೆ ಸಲ್ಲಿಸಿ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಟಿಎಪಿಸಿಎಂಎಸ್ ಆವರಣದವರೆಗೆ ಶ್ರೀರಾಮ ದೇವರ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರ ಮೆರವಣಿಗೆ ನಡೆಯಿತು. ಕಂಚಿ ಮೇಳ, ಡೊಳ್ಳು ಕುಣಿತ, ಹಾಗೂ ಮಹಿಳಾ ಚಂಡಿವಾದ್ಯಾ ತಂಡ , ಮಹಿಳೆಯರ ಕೋಲಾಟ ತಂಡ ಸೇರಿದಂತೆ ಪಟ್ಟಣದ ಅಲೆಮಾರಿ ಬುಡಗ ಸಮುದಾಯದ ಹಗಲುವೇಶ ಕಲಾ ತಂಡದವರು ಶ್ರೀರಾಮ ಸೀತಾ, ಶ್ರೀ ಆಂಜನೇಯಸ್ವಾಮಿಯ ವೇಷವನ್ನು ಹಾಕಿ ಕೊಂಡು ಶ್ರೀರಾಮಯಣ ಕಥಾ ಪ್ರಸಂಗಗಳನ್ನು ಪ್ರದರ್ಶಿಸಿದರು.
ನಾಡಿನ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದವು.ಮೆರವಣಿಗೆಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಆರ್‌ಎಸ್‌ಎಸ್, ಪ್ರಮುಖರು, ನಗರ ಆರ್ಯವೈಶ್ಯ ಸಮಾಜದವರು, ವಿಪ್ರ ಸಮಾಜದವರು, ರಾಜಸ್ಥಾನ ಸಮುದಾಯದವರು, ಕಮ್ಮ ಸಮುದಾಯದವರು ಸೇರಿದಂತೆ ವಿವಿಧ ಸಮುದಾಯದವರು ಮಹಿಳೆಯರು ಮಕ್ಕಳು ಭಾಗವಹಿಸಿದರು.