ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ತ್ರಿವಿದ ದಾಸೋಹಿಗಳಲ್ಲಿ, ರಾಷ್ಟ್ರ ಕಂಡ ಮಹಾ ಪುರುಷರಲ್ಲಿ ಸಿದ್ಧಗಂಗಾ ಶ್ರೀಗಳಾದ ಶಿವಕುಮಾರಸ್ವಾಮೀಜಿಯವರು ಒಬ್ಬರಾಗಿದ್ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ ಎಂದು ಹಿರಿಯ ಪತ್ರಕರ್ತರ ಸು.ತ. ರಾಮೇಗೌಡ ತಿಳಿಸಿದರು.ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಚನ್ನಪಟ್ಟಣ ತಾಲೂಕು ಘಟಕ ಮತ್ತು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ನಗರದ ೭ನೇ ಅಡ್ಡರಸ್ತೆಯಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರ ೬ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅನೇಕ ಜಟಿಲವಾದ ಸಮಸ್ಯೆಗಳು ಬಂದಂತಹ ಸಂದರ್ಭದಲ್ಲಿಯೂ ಕೂಡ ಅವುಗಳನ್ನು ನಿವಾರಿಸಿಕೊಂಡು, ಯಾರು ಆರೋಪ ಮಾಡುತ್ತಿದ್ದರೋ ಅವರನ್ನು ಕರೆದು ಬುದ್ಧಿ ಹೇಳಿ ಸಹಮತಕ್ಕೆ ತರುವಂತಹ ವಿಶೇಷ ಗುಣಗಳನ್ನು ಶ್ರೀಗಳು ಹೊಂದಿದ್ದರು. ಇಂತಹವರು ಸೂರ್ಯ- ಚಂದ್ರರಿರುವವರೆಗೂ ಸ್ಮರಣೀಯರು ಎಂದು ಬಣ್ಣಿಸಿದರು.ಶ್ರೀಗಳು ಒಂದು ಜಾತಿಗೆ ಸೀಮಿತವಾಗಿರಲಿಲ್ಲ, ಅವರು ಸಮಾಜಕ್ಕೆ ಮಾಡಿದಂಥ ಸೇವೆ ಅವಿಸ್ಮರಣೀಯ. ಅವರ ಸಮಾಜ ಸೇವಾ ಕಾರ್ಯವನ್ನು ನಾವು ಮುಂದುವರಿಸಬೇಕಿದೆ. ಇಂದು ಬಹುತೇಕ ಕಡೆಗಳಲ್ಲಿ ಅವರ ಸ್ಮರಣೆಯನ್ನು ಮಾಡುತ್ತಿದ್ದಾರೆ. ಅದರ ಜೊತೆಗೆ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕಾದಂತಹ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ ಎಂದರು.
ಮಹಾಸಭಾದ ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ಸಿದ್ದಮಾದಯ್ಯ ಮಾತನಾಡಿ, ಶ್ರೀಗಳು ತಮ್ಮ ಸನ್ಯಾಸತ್ವ ಸ್ವೀಕಾರದ ದಿನದಿಂದ ಲಿಂಗೈಕ್ಯರಾಗುವವರೆಗೂ ಬದುಕಿನಲ್ಲಿ ಒಂದೇ ಒಂದು ಕ್ಷಣವೂ ತಮಗಾಗಿ ಬದುಕಿದವರಲ್ಲ. ಅವರ ಪ್ರತಿಯೊಂದು ಉಸಿರಾಟವೂ ಕಾಯಕ ಮತ್ತು ದಾಸೋಹಕ್ಕೆ ಮೀಸಲಾಗಿತ್ತು. ಪ್ರಾಥಮಿಕ ಶಾಲೆ ಹಂತದಿಂದ ಪದವಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಸಂಸ್ಕೃತಿ ಕಾಲೇಜು, ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ರಾಜ್ಯದ ವಿವಿದೆಡೆ ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಅಮೋಘವಾದದ್ದು. ಅಂತಹವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಕಾರ್ಯದರ್ಶಿ ಎಂ. ಶಿವಾನಂದ, ಖಜಾಂಚಿ ಶಿವಶಂಕರ್, ನಿರ್ದೇಶಕರಾದ ಕೆ. ರಾಜಪ್ಪ, ರವಿಕುಮಾರ್, ಸಿ.ಪಿ. ರಾಜೇಶ್, ರತ್ನಮ್ಮ, ಮಾದಪ್ಪ ಪಿ., ಗೀತಾ, ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಬಿ. ಮಹೇಶ್‌ಕುಮಾರ್, ಶಿವಕುಮಾರ್ ಸೇರಿ ಅನೇಕರು ಭಾಗವಹಿಸಿದ್ದರು.
ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು. ಅನೇಕ ಭಕ್ತರು, ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಪ್ರಸಾದವನ್ನು ಸ್ವೀಕರಿಸಿದರು.