ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಶ್ರೀ ವಾಸವಿ ಜಯಂತಿ ಪ್ರಯುಕ್ತ ಮೇ ೧ ರ ಗುರುವಾರದಿಂದ ಪ್ರತಿನಿತ್ಯ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತಿತ್ತು. ಬುಧವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಹೇಮಾವತಿ ನದಿ ತೀರದಲ್ಲಿ ಗಂಗೆ ಪೂಜೆ ನೆರವೇರಿಸಿ, ಕನ್ನಿಕೆಯರಿಂದ ಕಳಸದ ಮೆರವಣಿಗೆ, ನಂತರ ಗೋಪೂಜೆ, ಪಂಚಾಮೃತ ಅಭಿಷೇಕ ನಡೆಸಲಾಯಿತು.
ಶ್ರೀದೇವಿಯ ಉತ್ಸವ ಮೂರ್ತಿಗೆ ಭಕ್ತರಿಂದ ಸ್ವಯಂ ಹಾಲಿನ ಅಭಿಷೇಕಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ೧೦ ಗಂಟೆಯಿಂದ ಲಲಿತಾ ಹೋಮ, ಶ್ರೀದೇವಿಯ ಮೂರ್ತಿಗೆ ರಜತ ಅಲಂಕಾರ, ಹಾಗೂ ವಿಶೇಷ ಪೂಜಾ ಮಹೋತ್ಸವ ನೆಡೆಸಲಾಯಿತು. ಸಂಜೆ ಗೋದೂಳಿ ಲಗ್ನದಲ್ಲಿ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಪೂಜಿಸಿದ ನಂತರ ಆನೆ ಅಂಬಾರಿ ಮೇಲಿಟ್ಟು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.ವಿಶೇಷ ಪೂಜಾ ಮಹೋತ್ಸವದಲ್ಲಿ ಆರವೈಶ್ಯ ಮಂಡಳಿ, ಶ್ರೀ ವಾಸವಾಂಬ ಕೋ-ಆಪರೇಟಿವ್ ಬ್ಯಾಂಕ್ ಅಡಳಿತ ಮಂಡಳಿ, ಸಿಇಒ, ವ್ಯವಸ್ಥಾಪಕರು ಹಾಗೂ ನೌಕರರು, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘ, ವಾಸವಿ ಯುವತಿಯರ ಸಂಘ, ಶ್ರೀ ವಾಸವಿ ವಿದ್ಯಾಸಂಸ್ಥೆ, ವಾಸವಿ ಕ್ಲಬ್ ಸದಸ್ಯರು, ಇತರರು ಭಾಗವಹಿಸಿದ್ದರು.