ಕನ್ನಡಪ್ರಭ ವಾರ್ತೆ ಹನೂರು ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪನಾಗ್ ಸೂಚನೆ ನೀಡಿದರು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ನಡೆದ ನಾಗಮಲೆ ಭವನದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಾದ ಬಹುನಿರೀಕ್ಷಿತ 512 ಕೊಠಡಿ ಕಾಮಗಾರಿ ಹಾಗೂ ಬಹು ನಿರೀಕ್ಷಿತ ಯುಜಿಡಿ ಕಾಮಗಾರಿ ಮತ್ತು ಮಾದೇಶ್ವರನ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ಇರುವುದರಿಂದ ಸಂಬಂಧ ಪಟ್ಟ ಇಲ್ಲಿನ ಅಧಿಕಾರಿಗಳು ನಡೆಯುತ್ತಿರುವ ಪ್ರಗತಿಯಲ್ಲಿರುವ ಕಾಮಗಾರಿಗಳು ಆದಷ್ಟು ಬೇಗನೆ ಪೂರ್ಣಗೊಳಿಸಿ ಮಲೆ ಮಾದೇಶ್ವರನ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳಿಗೆ ತಾಕಿತು ಮಾಡಿದರು.
ಸಕಲಸಿದ್ಧತೆ ಕ್ರಮ ಕೈಗೊಳ್ಳಿ:ಯುಗಾದಿ ಜಾತ್ರಾ ಮಹೋತ್ಸವಕ್ಕೆ ಮುನ್ನ ನಡೆಯುತ್ತಿರುವ ಕಾಮಗಾರಿಗಳ ಹಾಗೂ ಸಕಲ ಸಿದ್ಧತೆಗಳ ಬಗ್ಗೆ ಜಾಗ್ರತೆ ವಹಿಸಿ ಹಬ್ಬ ಹರಿದಿನ ಅಮವಾಸೆ ಹುಣ್ಣಿಮೆ ದಿನಗಳಲ್ಲಿ ಬರುವ ಭಕ್ತಾದಿಗಳಿಗೆ ಯಾವುದೇ ಲೋಪದೋಷವಿಲ್ಲದೆ ಕಾಮಗಾರಿಗಳು ಪೂರ್ಣಗೊಳಿಸಿ ಮಾದಪ್ಪನ ಭಕ್ತಾದಿಗಳಿಗೆ ಸಕಲ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಬೇಸಿಗೆ ಆಗಿರುವುದರಿಂದ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಯುಗಾದಿ ಹಬ್ಬದ ಜಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ:
ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಮುಂದಿನ ಸಭೆಯೊಳಗೆ ಮಲೆ ಮಹದೇಶ್ವರ ಬೆಟ್ಟದ ಪ್ರಗತಿ ಚಿತ್ರಣ ಬದಲಾವಣೆಯಾಗಬೇಕು ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದವರು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು .ಪ್ರಗತಿ ಪರಿಶೀಲನ ಸಭೆಯಲ್ಲಿ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನಸ್ವಾಮಿ,ಜಿಲ್ಲಾ ಎಸ್ಪಿ ಪದ್ಮಿನಿ ಸಾಹೋ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಹಾಗೂ ಸಹಕಾರ್ಯದರ್ಶಿ ಚಂದ್ರಶೇಖರ್ ಅರಣ್ಯ ಇಲಾಖೆ ಅಧಿಕಾರಿಗಳು ಪಿಡಬ್ಲ್ಯೂಡಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.