ದ್ರಾವಿಡ ವಾಸ್ತುಶಿಲ್ಪ ಶೈಲಿಯ ಶ್ರೀಗುರು ಭೈರವೈಕ್ಯ ಮಂದಿರ

KannadaprabhaNewsNetwork |  
Published : Apr 14, 2026, 01:45 AM IST
೧೩ಕೆಎಂಎನ್‌ಡಿ-೧ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸುವ ಶ್ರೀಗುರು ಭೈರವೈಕ್ಯ ಮಂದಿರ. | Kannada Prabha

ಸಾರಾಂಶ

ಆದಿ ಚುಂಚನಗಿರಿಯಲ್ಲಿ ನಿರ್ಮಿಸಲಾಗಿರುವ ಶ್ರೀಗುರು ಭೈರವೈಕ್ಯ ಮಂದಿರ ಕೇವಲ ಕಲ್ಲು-ಮಣ್ಣಿನ ಕಟ್ಟಡವಲ್ಲ. ಅದೊಂದು ಜೀವಂತ ಆಧ್ಯಾತ್ಮ ಧಾಮ. ದ್ರಾವಿಡ ವಾಸ್ತು ಶಿಲ್ಪ ಶೈಲಿಯಲ್ಲಿ ಮಂದಿರ ನಿರ್ಮಾಣಗೊಂಡು ಬುಧವಾರ (ಏ.೧೫) ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆದಿ ಚುಂಚನಗಿರಿಯಲ್ಲಿ ನಿರ್ಮಿಸಲಾಗಿರುವ ಶ್ರೀಗುರು ಭೈರವೈಕ್ಯ ಮಂದಿರ ಕೇವಲ ಕಲ್ಲು-ಮಣ್ಣಿನ ಕಟ್ಟಡವಲ್ಲ. ಅದೊಂದು ಜೀವಂತ ಆಧ್ಯಾತ್ಮ ಧಾಮ. ದ್ರಾವಿಡ ವಾಸ್ತು ಶಿಲ್ಪ ಶೈಲಿಯಲ್ಲಿ ಮಂದಿರ ನಿರ್ಮಾಣಗೊಂಡು ಬುಧವಾರ (ಏ.೧೫) ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರದ ಶ್ರೀಗುರು ಭೈರವೈಕ್ಯ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರು ಕೋಟಿ ರು.ಗೂ ಹೆಚ್ಚು ವೆಚ್ಚದಲ್ಲಿ ಮಂದಿರ ಒರಿಸ್ಸಾದ ಸೂರ್ಯದೇಗುಲದ ಕಲೆಯನ್ನು ಒಳಗೊಂಡು ಸುಂದರವಾಗಿ ರೂಪುಗೊಂಡಿದೆ. ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗ ವಾಸ್ತು ಶಿಲ್ಪದ ಸಮ್ಮಿಶ್ರಣವನ್ನು ಕಾಣಬಹುದಾಗಿದೆ ಎಂದರು.

ದ್ರಾವಿಡ ವಾಸ್ತು ಶಿಲ್ಪ ಶೈಲಿ ಸಹಸ್ರಾರು ವರ್ಷಗಳಿಂದ ದೈವಿಕ ಶಕ್ತಿಯ ದೃಶ್ಯಭಾಷೆ ಎಂದೇ ಪ್ರಸಿದ್ಧಿ ಪಡೆದಿದೆ. ಆಗಸಕ್ಕೆ ಚಾಚಿದ ಗೋಪುರಗಳು, ಶಿಲ್ಪಕಲೆಯ ಅದ್ಭುತ ಕೆತ್ತನೆಗಳು, ಬ್ರಹ್ಮಾಂಡ ನಿಯಮಗಳಿಗೆ ಅನುಸಾರವಾದ ವಿನ್ಯಾಸ. ಇವೆಲ್ಲವೂ ಕೇವಲ ಕಟ್ಟಡ ನಿರ್ಮಾಣವಲ್ಲ. ಅದೊಂದು ದೇವರ ಭಾಷೆಯನ್ನು ಕಲ್ಲಿನಲ್ಲಿ ಬರೆದ ಮಹಾಕಾವ್ಯ ಎಂದು ವರ್ಣಿಸಿದರು.

ಪ್ರತಿಯೊಂದು ಚೇತನವೂ ಮೂರು ದೇಹವನ್ನು ಹೊಂದಿರುವಂತೆ ಭೈರವೈಕ್ಯ ಮಂದಿರವೂ ಸಹ ಆತ್ಮ, ಸ್ಥೂಲ, ಅಜ್ಞಾನದ ಸ್ವರೂಪದಲ್ಲಿದೆ. ಗುರುಗಳ ಗದ್ದುಗೆ ಆತ್ಮ ಸ್ವರೂಪದಲ್ಲಿದ್ದರೆ, ಗರ್ಭಗುಡಿಯಲ್ಲಿರುವ ಪ್ರತಿಮೆ ಸ್ಥೂಲ ಸ್ವರೂಪದಲ್ಲಿದೆ. ಹೊರಗೆ ಅಜ್ಞಾನ ಸ್ವರೂಪದಲ್ಲಿರುತ್ತದೆ. ಅನ್ನ, ಪ್ರಾಣ, ಮನೋಮಯ, ವಿಜ್ಞಾನ ಮತ್ತು ಆನಂದಮಯ ಐದು ಕೋಶಗಳು ಆಧ್ಯಾತ್ಮ ಧಾಮದಲ್ಲಿವೆ. ಶ್ರೀಗಳ ಗದ್ದುಗೆಯ ಸುತ್ತ ಬೆಳ್ಳಿ ಕವಚವನ್ನು ನಿರ್ಮಿಸಿರುವುದಾಗಿ ವಿವರಣೆ ನೀಡಿದರು.

ಮೂರು ಮಾದರಿಯ ಕಲ್ಲುಗಳನ್ನು ಭೈರವೈಕ್ಯ ಮಂದಿರದಲ್ಲಿ ಕಾಣಬಹುದಾಗಿದೆ. ಕ್ಲೈರಾ ಎಂಬ ಕಲ್ಲನ್ನು ಹೆಚ್ಚು ಬಳಸಲಾಗಿದೆ. ಧರ್ಮಗುಡಿಗೆ ಇಳಕಲ್ ಮಾದರಿ ಶಿಲೆ, ಕೆಳಭಾಗಕ್ಕೆ ಸಂತೆಕಲ್ ಮಾದರಿಯ ಶಿಲೆಯನ್ನು ಬಳಸಿದ್ದು, ಮಂದಿರದ ಒಳಭಾಗ ಮತ್ತು ಹೊರಭಾಗ ಪೂರ್ತಾ ಕ್ಲೈರಾ ಶಿಲೆಯನ್ನು ಬಳಸಿರುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಇದ್ದರು.ನವಿಲಿಗೆ ಸಂಬಂಧಿಸಿದ ಉಡುಗೊರೆ

ಪ್ರಧಾನಮಂತ್ರಿಯೊಬ್ಬರು ಶ್ರೀಮಠಕ್ಕೆ ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ನಮ್ಮ ರಾಷ್ಟ್ರಪಕ್ಷಿ ನವಿಲು. ಆದಿ ಚುಂಚನಗಿರಿಯ ಸಂಕೇತವೂ ನವಿಲು. ಹಾಗಾಗಿ ನವಿಲಿಗೆ ಸಂಬಂಧಿಸಿದ ನೆನಪಿನ ಕಾಣಿಕೆಯನ್ನು ಉಡುಗೊರೆ ರೂಪದಲ್ಲಿ ಅವರಿಗೆ ನೀಡಲಾಗುವುದು ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಧಾನಿ ಎಲ್ಲೆಲ್ಲಿಗೆ ಭೇಟಿ..?

ಏ.೧೫ರಂದು ಬೆಂಗಳೂರಿನ ಎಚ್‌ಎಎಲ್ ಏರ್‌ಫೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ಆದಿ ಚುಂಚನಗಿರಿ ಕ್ಷೇತ್ರದ ತಪೋವನಕ್ಕೆ ಬಂದಿಳಿಯುವರು. ಅಲ್ಲಿಂದ ಶ್ರೀಕಾಲಭೈರವೇಶ್ವರ ಮಂದಿರಕ್ಕೆ ತೆರಳಿ ದರ್ಶನ ಪಡೆದು, ದೇವಾನುದೇವತೆಗಳನ್ನು ವೀಕ್ಷಣೆ ಮಾಡುವರು. ನಂತರ ಶ್ರೀಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಂದಿರದ ಗರ್ಭಗುಡಿ ಪಕ್ಕದ ಕೆಳಭಾಗದಲ್ಲಿ ನಿರ್ಮಿಸಿರುವ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆ ವೀಕ್ಷಿಸುವರು. ಆನಂತರ ಗರ್ಭಗುಡಿಯಲ್ಲಿರುವ ಶ್ರೀಗಳ ಪ್ರತಿಮೆಯನ್ನು ವೀಕ್ಷಿಸುವರು. ಬಳಿಕ ಆದಿಚುಂಚನಗಿರಿ ಕ್ಷೇತ್ರದ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಮಾರಂಭದಲ್ಲಿ ಗೋರಕ್ಷನಾಥ ಸಿದ್ಧ ಸಿದ್ಧಾಂತ ಪದ್ಧತಿ ಎಂಬ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ.

ಮಂದಿರ ನಿರ್ಮಿಸಿದ ಕಲಾವಿದ ಶಂಕರ ಸ್ತಪತಿ

ಶಂಕರ ಸ್ತಪತಿ ಮೂಲತಃ ತಮಿಳುನಾಡಿನವರು. ಬೆಂಗಳೂರಿನ ವಿಕಾಸಸೌಧ, ಉದ್ಯೋಗ ಸೌಧ, ಬೆಳಗಾವಿಯ ಸುವರ್ಣಸೌಧವನ್ನು ನಿರ್ಮಾತೃ. ಅಷ್ಟೇ ಅಲ್ಲದೇ, ಅಮೆರಿಕಾದಲ್ಲಿರುವ ಸಾವಿರಾರು ಹಿಂದೂ ದೇಗುಲಗಳ ಪೈಕಿ ಶೇ.೭೫ರಷ್ಟು ದೇಗುಲಗಳನ್ನು ನಿರ್ಮಿಸಿದ ಖ್ಯಾತಿ ಇವರಿಗಿದೆ. ಸುಮಾರು ೫೦೦ ಶಿಲ್ಪಿಗಳು ಈ ದೇವಾಲಯದ ಕೆತ್ತನೆಯಲ್ಲಿ ತೊಡಗಿದ್ದರು. ಬಹಳ ಆಕರ್ಷಣೀಯವಾಗಿ ಮಂದಿರ ಮೂಡಿಬಂದಿದೆ. ಪ್ರಧಾನ ಮಂತ್ರಿಯಿಂದ ಮಂದಿರ ಲೋಕಾರ್ಪಣೆಗೊಳ್ಳುತ್ತಿರುವುದು ಖುಷಿಯನ್ನು ತಂದುಕೊಟ್ಟಿದೆ ಎಂದು ಶಂಕರಸ್ತಪತಿ ಹೇಳಿದರು.

ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದೇಗುಲದ ಒಳಭಾಗ, ಹೊರಭಾಗ, ವಾಸ್ತುಶಿಲ್ಪ ಶೈಲಿ, ಕಲಾ ಶೈಲಿಯನ್ನು ರೂಪುಗೊಳಿಸಲಾಗಿದೆ. ದೇಗುಲಕ್ಕೆ ನಿರ್ದಿಷ್ಟವಾಗಿ ಇಷ್ಟೇ ಖರ್ಚಾಗಿದೆ ಎಂದು ಹೇಳಲಾಗುವುದಿಲ್ಲ. ಇಡೀ ಮಂದಿರವನ್ನು ಆನೆ ಮೇಲೆ ಕೂರಿಸಿದಂತೆ ಕಲ್ಲುಗಳ ಸುಭದ್ರ ತಳಹದಿಯ ಮೇಲೆ ನಿರ್ಮಿಸಲಾಗಿದೆ ಎಂದು ನುಡಿದರು.ಶ್ರೀಮಠಕ್ಕೆ ಸುತ್ತೂರು ಶ್ರೀಗಳು ಭೇಟಿ

ನಾಗಮಂಗಲ

ಆದಿಚುಂಚನಗಿರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಪ್ರಯುಕ್ತ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಸಾನಿಧ್ಯದಲ್ಲಿ ಸೋಮವಾರ ಜರುಗಿದ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಮೈಸೂರಿನ ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಪಾಲ್ಗೊಂಡು ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಚೈತನ್ಯ ಮೂರ್ತಿಗೆ ಪುಷ್ಪ ಮಾಲಿಕೆ ಅರ್ಪಿಸಿ ಪೂಜೆ ಸಲ್ಲಿಸಿದರು.

ರಾಜ್ಯ ಸರ್ಕಾರದ ಪಶು ಸಂಗೋಪನಾ ಸಚಿವ ವೆಂಕಟೇಶ್, ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಸೇರಿದಂತೆ ಹಲವು ಗಣ್ಯರೂ ಸಹ ಶ್ರೀಮಠಕ್ಕೆ ಭೇಟಿ ಕೊಟ್ಟು ಕ್ಷೇತ್ರಾಧಿದೇವತೆಗಳ ಹಾಗೂ ಡಾ.ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಧಾರ್ಮಿಕ ಪೂಜಾ ಕಾರ್ಯದಲ್ಲಿ ವಿವಿಧ ಮಠಗಳ ಶ್ರೀಗಳು

ನಾಗಮಂಗಲ:

ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಪ್ರಯುಕ್ತ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಸಾನಿಧ್ಯದಲ್ಲಿ ಜರುಗಿದ ಹೋಮ ಹವನಾದಿ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾದ್ಯಕ್ಷ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಪಾಲ್ಗೊಂಡರು.

ನಂತರ ಶ್ರೀಮಠಕ್ಕೆ ಭೇಟಿ ಕೊಟ್ಟ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ದಂಪತಿ ಕ್ಷೇತ್ರಾಧಿದೇವತೆಗಳ ಹಾಗೂ ಡಾ.ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಸ್ವಯಂ ಗಣತಿ ಪೂರ್ಣ, ನಾಳೆಯಿಂದ ಮನೆಗಣತಿ
ಮುಸ್ಲಿಂ ಮಹಾನಾಯಕ ನಾನಲ್ಲ, ದ್ರೋಹಿಗಳ ಹೆಸರೇಳಿ : ಜಮೀರ್‌