ಟೆಸ್ಟ್ ಡ್ರೈವ್ ವೇಳೆ ಪೊರ್ಶೆ ಕಾರಿನಲ್ಲಿ ಸಿಗರೆಟ್ ಸೇದಲು ಶೋಂ ರೂಂ ಸಿಬ್ಬಂದಿ ಆಕ್ಷೇಪಿಸಿದ್ದರಿಂದ ರೊಚ್ಚಿಗೆದ್ದು ಆ ಕಾರನ್ನೇ ಬಿಟ್ ಕಾಯಿನ್ ಬಳಸಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಶ್ರೀಕಷ್ಣ ಅಲಿಯಾಸ್ ಶ್ರೀಕಿ ಖರೀದಿಸಿದ್ದ ಕುತೂಹಲಕಾರಿ ಅಂಶ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯಲ್ಲಿ ಪತ್ತೆಯಾಗಿದೆ.
ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರು
ಟೆಸ್ಟ್ ಡ್ರೈವ್ ವೇಳೆ ಪೊರ್ಶೆ ಕಾರಿನಲ್ಲಿ ಸಿಗರೆಟ್ ಸೇದಲು ಶೋಂ ರೂಂ ಸಿಬ್ಬಂದಿ ಆಕ್ಷೇಪಿಸಿದ್ದರಿಂದ ರೊಚ್ಚಿಗೆದ್ದು ಆ ಕಾರನ್ನೇ ಬಿಟ್ ಕಾಯಿನ್ ಬಳಸಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಶ್ರೀಕಷ್ಣ ಅಲಿಯಾಸ್ ಶ್ರೀಕಿ ಖರೀದಿಸಿದ್ದ ಕುತೂಹಲಕಾರಿ ಅಂಶ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯಲ್ಲಿ ಪತ್ತೆಯಾಗಿದೆ.
ಬಿಟ್ ಕಾಯಿನ್ ಹಗರಣ ಸಂಬಂಧ ಶ್ರೀಕಿ ಹಾಗೂ ಆತನ ಸ್ನೇಹಿತರ ವಿರುದ್ಧ ತುಮಕೂರು ನ್ಯಾಯಾಲಯಕ್ಕೆ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಕಾರು ಖರೀದಿ ಪ್ರಸಂಗವನ್ನು ಎಸ್‌ಐಟಿ ಉಲ್ಲೇಖಿಸಿದೆ ಎಂದು ತಿಳಿದು ಬಂದಿದೆ.
ಶೋರೂಂ ಮುಂದೆ ಪೊರ್ಶೆ ಕಾರಲ್ಲಿ ಸಿಗರೇಟ್:
ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ಕನ್ನ ಹಾಕಿ ದೋಚಿದ ಹಣದಲ್ಲಿ ಶ್ರೀಕಿ ಹಾಗೂ ಆತನ ಸ್ನೇಹಿತರು ಮೋಜು ಮಸ್ತಿ ಮಾಡುತ್ತಿದ್ದರು. ಆತನ ಖಯಾಲಿ ಹೇಗಿತ್ತೆಂದರೆ ಒಂದೇ ದಿನ ಲಕ್ಷಾಂತರ ರು. ಮೌಲ್ಯದ ಪೊರ್ಶೆ ಕಾರನ್ನೇ ಖರೀದಿಸುವಷ್ಟರಮಟ್ಟಿಗಿತ್ತು.
ಒಂಬತ್ತು ವರ್ಷಗಳ ಹಿಂದೆ ತನ್ನ ಸ್ನೇಹಿತರ ಜತೆ ಹರಟುವಾಗ ಪೊರ್ಶೆ ಖರೀದಿಸುವ ಉಮೇದು ಶ್ರೀಕಿಗೆ ಬಂದಿದೆ. ಆ ಕ್ಷಣವೇ ತಡಮಾಡದೆ ಗೆಳೆಯರ ಜತೆ ನಗರದಲ್ಲಿದ್ದ ಶೋ ರೂಂಗೆ ಆತ ಹೋಗಿದ್ದ. ಅಲ್ಲಿದ್ದ ಕಾರನ್ನು ಟೆಸ್ಟ್ ಡ್ರೈವ್ ಸಲುವಾಗಿ ತೆಗೆದುಕೊಂಡು ಹೋಗಿದ್ದ. ಆ ವೇಳೆ ಕಾರಿನೊಳಗೆ ಸಿಗರೆಟ್ ಸೇದಲು ಶ್ರೀಕಿ ಮುಂದಾಗಿದ್ದಾನೆ. ಇದಕ್ಕೆ ಶೋಂ ಸಿಬ್ಬಂದಿ ಆಕ್ಷೇಪಿಸಿದ್ದಾರೆ. ಇದಕ್ಕೆ ಕೆರಳಿದ ಆತ, ಕೂಡಲೇ ಟೆಸ್ಟ್ ಡ್ರೈವ್ ಮೊಟಕುಗೊಳಿಸಿ ಶೋಂ ರೂಮ್‌ಗೆ ಮರಳಿದ್ದಾನೆ.
ಕಾರಿನಿಂದಿಳಿದು ಸೀದಾ ಶೋ ರೂಂನ ವ್ಯವಸ್ಥಾಪಕ ಬಳಿಗೆ ಹೋಗಿ ‘ಪೊರ್ಶೆ ಬೆಲೆ ಎಷ್ಟು ಹೇಳು. ನಾನು ನಿನ್ನ ಖಾತೆಗೆ ಹಣ ಬಿಸಾಕುತ್ತೇನೆ. ಈಗಲೇ ಕಾರು ಡೆಲಿವರಿ ಕೊಡಬೇಕು’ ಎಂದು ಅಹಂಕಾರದಿಂದ ಅಬ್ಬರಿಸಿದ್ದಾನೆ. ಆಗ ಟೆಸ್ಟ್ ಡ್ರೈವ್ ವೇಳೆ ಕಾರಿನಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ ಎಂದು ಆತನಿಗೆ ನಯವಾಗಿ ಹೇಳಿ ಸಮಾಧಾನಪಡಿಸಲು ಶೋ ರೂಂ ವ್ಯವಸ್ಥಾಪಕರು ಯತ್ನಿಸಿದ್ದಾರೆ. ಈ ಮಾತಿಗೆ ಕ್ಯಾರೇ ಎನ್ನದೆ ಕಾರು ಖರೀದಿಗೆ ಶ್ರೀಕಿ ಪಟ್ಟು ಹಿಡಿದಿದ್ದಾನೆ. ಅಷ್ಟೇ ಅಲ್ಲ, ತಕ್ಷಣವೇ ಶೋಂ ರೂಂ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಕಾರು ಖರೀದಿಸಿದ್ದಾನೆ. ಇಷ್ಟಕ್ಕೇ ಶ್ರೀಕಿ ಕೋಪ ತಣ್ಣಗಾಗಿಲ್ಲ. ಆ ಶೋ ರೂಂ ಮುಂದೆಯೇ ಪೊರ್ಶೆ ಕಾರನ್ನು ನಿಲ್ಲಿಸಿ ಅದರೊಳಗೆ ಕುಳಿತು ಸಿಗರೆಟ್ ಸೇದಿ ಸಿನಿಮಾ ಶೈಲಿಯಲ್ಲಿ ಸಿಬ್ಬಂದಿಗೆ ಕಿಚಾಯಿಸಿದ್ದಾನೆ ಎಂದು ವಿಶ್ವನೀಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ತುಮಕೂರಿನ ಯೂನಿಕಾರ್ನ್ ಕಂಪನಿಯಲ್ಲಿ ದೋಚಿದ್ದ 60 ಬಿಟ್ ಕಾಯಿನ್‌ಗಳ ಪೈಕಿ ಕೆಲ ಕಾಯಿನ್‌ಗಳನ್ನು ಪೊರ್ಶೆ ಕಾರು ಖರೀದಿಗೆ ಶ್ರೀಕಿ ಬಳಸಿದ್ದು ತನಿಖೆ ವೇಳೆ ಪತ್ತೆಯಾಗಿದೆ. ಈ ಸಂಬಂಧ ದಸ್ತಾವೇಜು ಸಿಕ್ಕಿವೆ. ವಿಚಾರಣೆ ವೇಳೆ ಪೊರ್ಶೆ ಕಾರು ಖರೀದಿ ಪ್ರಸಂಗವನ್ನು ಶ್ರೀಕಿ ಬಾಯ್ಬಿಟ್ಟಿದ್ದ ಎಂದು ಮೂಲಗಳು ಹೇಳಿವೆ.ನಿವೃತ್ತ ಐಪಿಎಸ್ ಪುತ್ರನ ಬಳಿ ಕಾರು:
ಪೊರ್ಶೆ ಖರೀದಿಸಿದ ಬಳಿಕ ಶ್ರೀಕಿ ನೋಂದಣಿ ಮಾಡಿಸಿರಲಿಲ್ಲ. ಆ ಕಾರು ತನ್ನ ಗೆಳೆಯ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಪುತ್ರನಿಗೆ ಕೊಟ್ಟಿದ್ದ. ಈ ಹಗರಣದಲ್ಲಿ ಅಧಿಕಾರಿ ಮಗನನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ ಎಂದು ಎಸ್‌ಐಟಿ ಹೇಳಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.