ಶ್ರೀಕೃಷ್ಣರಾಜ ಪರಿಷನ್ಮಂದಿರ, ಅಕ್ಕಮಹಾದೇವಿ ಸಭಾಂಗಣ ಬಾಡಿಗೆ ಇಳಿಕೆ

KannadaprabhaNewsNetwork | Published : Mar 31, 2024 2:04 AM

ಸಾರಾಂಶ

ಸಾಹಿತ್ಯ ಮತ್ತು ಸಾರ್ವಜನಿಕ ವಲಯದಿಂದ ಸಭಾಂಗಣಗಳ ಬಾಡಿಗೆ ದರ ದುಬಾರಿಯಾಗಿವೆ ಎಂಬ ಆರೋಪಗಳು ಹೇಳಿ ಬಂದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಎರಡು ಸಭಾಂಗಣಗಳ ಬಾಡಿಗೆ ದರವನ್ನು ಇಳಿಕೆ ಮಾಡಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಸಾಹಿತ್ಯ ಮತ್ತು ಸಾರ್ವಜನಿಕ ವಲಯದಿಂದ ಸಭಾಂಗಣಗಳ ಬಾಡಿಗೆ ದರ ದುಬಾರಿಯಾಗಿವೆ ಎಂಬ ಆರೋಪಗಳು ಹೇಳಿ ಬಂದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಎರಡು ಸಭಾಂಗಣಗಳ ಬಾಡಿಗೆ ದರವನ್ನು ಇಳಿಕೆ ಮಾಡಿದೆ.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಕಚೇರಿ ಆವರಣದ ಶ್ರೀಕೃಷ್ಣರಾಜ ಪರಿಷತ್ತು ಮಂದಿರ ಬಾಡಿಗೆಯನ್ನು ಶನಿವಾರ ಮತ್ತು ಭಾನುವಾರ ಹೊರತುಪಡಿಸಿ, ವಾರದ ಉಳಿದ ಐದು ದಿನಗಳಲ್ಲಿ ಪೂರ್ಣ ದಿನಕ್ಕೆ ಇದ್ದಂತ 20 ಸಾವಿರ ರು. ಬಾಡಿಗೆಯನ್ನು 15 ಸಾವಿರಕ್ಕೆ ಮತ್ತು ಅರ್ಧ ದಿನಕ್ಕೆ 10 ಸಾವಿರದಿಂದ 7 ಸಾವಿರ ರು.ಗಳಿಗೆ ಇಳಿಕೆ ಮಾಡಲಾಗಿದೆ.

ಅಕ್ಕಮಹಾದೇವಿ ಸಭಾಂಗಣದ ಬಾಡಿಕೆಯನ್ನು ಪೂರ್ಣ ದಿನಕ್ಕೆ 5,500 ರು.ಗಳಿಂದ 4 ಸಾವಿರಕ್ಕೆ ಮತ್ತು ಅರ್ಧ ದಿನಕ್ಕೆ 3ರಿಂದ 2 ಸಾವಿರ ರು.ಗಳಿಗೆ ತಗ್ಗಿಸಲಾಗಿದೆ. ಜನಸಾಮಾನ್ಯರನ್ನು ಒಳಗೊಂಡ ಕನ್ನಡ ಕಾರ್ಯಕ್ರಮಗಳು ಹೆಚ್ಚಾಗಲು, ಎಲ್ಲಾ ಕನ್ನಡಿಗರೂ ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗಲು ಎರಡು ಸಭಾಂಗಣಗಳ ದರವನ್ನು ಇಳಿಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುವೆಂಪು ಸಭಾಂಗಣ ನವೀಕರಣ ಪೂರ್ಣ:

ಕುವೆಂಪು ಸಭಾಂಗಣವು ಸಂಪೂರ್ಣ ನವೀಕರಣಗೊಂಡಿದ್ದು ಉತ್ತಮವಾದ ಧ್ವನಿವರ್ಧಕ, ಗಾಳಿ-ಬೆಳಕು ಮತ್ತು ಸುಸಜ್ಜಿತ ವೇದಿಕೆ ಹೊಂದಿರುವ ಸಭಾಂಗಣ ಇದೆ. ಮೂರನೇ ಮಹಡಿಯಲ್ಲಿರುವ ಈ ಸಭಾಂಗಣಕ್ಕೆ ಹೋಗಿ ಬರಲು ಅನುಕೂಲವಾಗುವಂತೆ ಲಿಫ್ಟ್‌ ವ್ಯವಸ್ಥೆಯೂ ಇದೆ.

ನವೀಕೃತ ಕುವೆಂಪು ಸಭಾಂಗಣವನ್ನು ವಾರದ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿಯು ಇಲ್ಲಿಯೇ ಕಾರ್ಯ ನಿರ್ವಹಿಸುವುದರಿಂದ ಸಂಜೆ 5.50ರಿಂದ ರಾತ್ರಿ 9 ಗಂಟೆಯವರೆಗೂ ಬಾಡಿಗೆಗೆ ನೀಡಲಾಗುವುದು. ಈ ದಿನಗಳಲ್ಲಿ ಬಾಡಿಗೆಯು 3 ಸಾವಿರ ರು. ಇದ್ದು ಜೊತೆಗೆ 500 ರು.ಗಳನ್ನು ಠೇವಣಿಯನ್ನಾಗಿ ಪಡೆದು ನಂತರ ಹಿಂದಿರುಗಿಸಲಾಗುವುದು. ರಜಾದಿನ ಮತ್ತು ಭಾನುವಾರಗಳಂದು ಅರ್ಧ ದಿನಕ್ಕೆ 4 ಸಾವಿರ ರು. (ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಅಥವಾ ಮಧ್ಯಾಹ್ನ 3 ರಿಂದ ರಾತ್ರಿ 8) ಮತ್ತು ಪೂರ್ಣದಿನಕ್ಕೆ 7 ಸಾವಿರ ರು. (ಬೆಳಿಗ್ಗೆ 9 ರಿಂದ ರಾತ್ರಿ 8ರವರೆಗೆ) ಇದರ ಜೊತೆಗೆ ಪಡೆಯುವ 500 ರು. ಠೇವಣಿಯನ್ನು ಕಾರ್ಯಕ್ರಮದ ನಂತರ ಹಿಂದಿರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸುಸಜ್ಜಿತ ಸ್ಟುಡಿಯೋ:

ಕುವೆಂಪು ಸಭಾಂಗಣದ ಆವರಣದಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರ ತಂದ ಹರ್ಮನ್ ಮೊಗ್ಲಿಂಗ್ ಹೆಸರಿನಲ್ಲಿ ಸುಸಜ್ಜಿತ ಸ್ಟುಡಿಯೋ ಸ್ಥಾಪಿಸಲಾಗಿದೆ. ಇಲ್ಲಿ ಆನ್‌ಲೈನ್ ಕಾರ್ಯಕ್ರಮಗಳು, ಪತ್ರಿಕಾಗೋಷ್ಠಿ ಮತ್ತು ಸಭೆಗಳನ್ನು ನಡೆಸಬಹುದಾಗಿದೆ. ಈ ಸಭಾಂಗಣಕ್ಕೆ ಅರ್ಧದಿನಕ್ಕೆ 2 ಸಾವಿರ ರು. ಬಾಡಿಗೆ ದರ ನಿಗದಿ ಮಾಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬಹುದು ಎಂದು ಕಸಾಪ ತಿಳಿಸಿದೆ.

Share this article