ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಸಮರ್ಪಿಸಿರುವ ವಜ್ರಖಚಿತ ಶ್ರೀಕೃಷ್ಣರಾಜಮುಡಿ ಕಿರೀಟ ಮತ್ತು ರಾಜಲಾಂಛನ ಗಂಡುಬೇರುಂಡ ಪದಕ ಆಗಸ್ಟ್ 3 ರಂದು ರಾತ್ರಿ ನಡೆದ ಕೃಷ್ಣರಾಜಮುಡಿ ಉತ್ಸವ ನಂತರ ಪ್ರಹ್ಮಾದಪರಿಪಾಲನ, ಗಜೇಂದ್ರಮೋಕ್ಷ, ರಥೋತ್ಸವದ ಸಾಂಕೇತಿಕ ಉತ್ಸವ ಅಂತಿಮವಾಗಿ ಶನಿವಾರ ತೀರ್ಥಸ್ನಾನ, ಪಟ್ಟಾಭಿಷೇಕ ಮಹೋತ್ಸವದಲ್ಲಿ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿತ್ತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿಯವರ ಐತಿಹಾಸಿಕ ಶ್ರೀಕೃಷ್ಣರಾಜಮುಡಿ ಬ್ರಹ್ಮೋತ್ಸವ ಮಹಾವಿಷ್ಣುವಿನ ಆರಾಧನೆಗೆ ಪ್ರಶಸ್ತವಾದ ಶನಿವಾರ ರೋಹಿಣಿ ನಕ್ಷತ್ರದಂದು ಅವಭೃತ ತೀರ್ಥಸ್ನಾನ ಮತ್ತು ಪಟ್ಟಾಭಿಷೇಕದೊಂದಿಗೆ ಸಂಪನ್ನವಾಯಿತು.
ಕಳೆದ 9 ದಿನಗಳಿಂದ ನಡೆಯುತ್ತಿದ್ದ ಮಹಾರಾಜರ ಹೆಸರಿನ ಕೃಷ್ಣರಾಜಮುಡಿ ಜಾತ್ರಾಮಹೋತ್ಸವ ಲೋಕಕಲ್ಯಾಣದ ಪ್ರಾರ್ಥನೆಯೊಂದಿಗೆ ಮುಕ್ತಾಯವಾಗಿದೆ.
ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಸಮರ್ಪಿಸಿರುವ ವಜ್ರಖಚಿತ ಶ್ರೀಕೃಷ್ಣರಾಜಮುಡಿ ಕಿರೀಟ ಮತ್ತು ರಾಜಲಾಂಛನ ಗಂಡುಬೇರುಂಡ ಪದಕ ಆಗಸ್ಟ್ 3 ರಂದು ರಾತ್ರಿ ನಡೆದ ಕೃಷ್ಣರಾಜಮುಡಿ ಉತ್ಸವ ನಂತರ ಪ್ರಹ್ಮಾದಪರಿಪಾಲನ, ಗಜೇಂದ್ರಮೋಕ್ಷ, ರಥೋತ್ಸವದ ಸಾಂಕೇತಿಕ ಉತ್ಸವ ಅಂತಿಮವಾಗಿ ಶನಿವಾರ ತೀರ್ಥಸ್ನಾನ, ಪಟ್ಟಾಭಿಷೇಕ ಮಹೋತ್ಸವದಲ್ಲಿ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿತ್ತು. ಸಹಸ್ರಾರು ಭಕ್ತರು ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡು ಶ್ರೀಕೃಷ್ಣರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿ ದರ್ಶನಮಾಡಿ ಧನ್ಯತಾಭಾವ ಅನುಭವಿಸಿದರು.
ಶನಿವಾರ ಬೆಳಗ್ಗೆ ಚೆಲುವನಾರಾಯಣಸ್ವಾಮಿಗೆ ಸಂಧಾನಸೇವೆ ನಡೆದ ನಂತರ ಮಧ್ಯಾಹ್ನ 1.30ರ ವೇಳೆಗೆ ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಹೋತ್ಸವ ನೆರವೇರಿತು. ಸಂಜೆ 5 ಗಂಟೆಗೆ ಕಲ್ಯಾಣಿ ತೀರದ ಪರಕಾಲಮಠದಲ್ಲಿ ಹೋಮ ಹವನಾದಿಗಳು ಶಾಸ್ತ್ರೋಕ್ತವಾಗಿ ನಡೆದು ಪಟ್ಟಾಭಿಷೇಕ ಮಹೋತ್ಸವ ನೆರವೇರಿತು. ನಂತರ ರಾಜಬೀದಿಯಲ್ಲಿ ಪಟ್ಟಾಭಿಷೇಕ ಉತ್ಸವ ಮಂಗಳವಾದ್ಯದೊಂದಿಗೆ ವೈಭವದಿಂದ ನೆರವೇರಿತು.
ಈ ವೇಳೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಾರುಪತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ, ಪಾರುಪತ್ತೇಗಾರ್ ಎಂ.ಎನ್ ಪಾರ್ಥಸಾರಥಿ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮೇಲುಕೋಟೆ ಪೊಲೀಸ್ ಇನ್ಸ್‌ಪೆಕ್ಟರ್ ಆನಂದಗೌಡ ನೇತೃತ್ವದಲ್ಲಿ ಜಾತ್ರಾಮಹೋತ್ಸವಕ್ಕೆ ಪೊಲೀಸ್ ಭದ್ರತೆ ಮಾಡಲಾಗಿತ್ತು. ಬ್ರಹ್ಮೋತ್ಸವ ಮುಕ್ತಾಯವಾದ ಮರುದಿನ ಭಾನುವಾರ ಪುಷ್ಪಯಾಗ ಮಹೋತ್ಸವ ನೆರವೇರಲಿದೆ.
ಸ್ಥಾನಾಚಾರ್ಯರಿಗೆ ಮಾಲೆ ಮರ್ಯಾಧೆ:
ಜಾತ್ರಾ ಮಹೋತ್ಸವ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುವ ಸ್ಥಾನಾಚಾರ್ಯರಾದ ಸ್ಥಾನೀಕರುಗಳಿಗೆ ದೇವಾಲಯದ ಪಾತಾಳಾಂಕಣದಲ್ಲಿ ಸಾಂಪ್ರದಾಯಿಕ ಪದ್ದತಿಯಂತೆ ಮಾಲೆಮರ್ಯಾದೆಗಳು ನಡೆದವು. ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಕರಗಂ ರಾಮಪ್ರಿಯ ಹಾಗೂ ಮೂರನೇ ಸ್ಥಾನೀಕರಿಗೆ ಈ ವರ್ಷ ಮಾಲೆ ಮರ್ಯಾಧೆಗಳು ನೆರವೇರಿದವು. ನಂತರ ಪಡಿಮಾಲೆ ಪೂರ್ಣಾಹುತಿ ನೆರವೇರಿತು. ಇದರೊಂದಿಗೆ ಕೃಷ್ಣರಾಜಮುಡಿ ಜಾತ್ರಾಮಹೋತ್ಸವ ಮುಕ್ತಾಯವಾಯಿತು.
ಆದರೆ, ವ್ಯವಸ್ಥಾಪನಾ ಸಮಿತಿ ಅಸ್ಥಿತ್ವದಲ್ಲಿದ್ದರೂ ಚೆಲುವನಾರಾಯಣನ ಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ಹೊಸತನದ ಆಕರ್ಷಣೆ ತಂದು ಕೊಡುವ ಯಾವ ಕಾರ್ಯವೂ ಈ ವರ್ಷವೂ ಕಂಡು ಬರಲಿಲ್ಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.