ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯದೆಲ್ಲೆಡೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ವ್ಯಸನ ಮುಕ್ತ ಸಮಾಜಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶ್ರಮಿಸುತ್ತಿದೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಶ್ಲಾಘಿಸಿದರು.ತಾಲೂಕಿನ ಬೂಕನಕೆರೆ ಗ್ರಾಮದ ಸರ್ಕಾರಿ ಸಮುದಾಯಭವನದಲ್ಲಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ), ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಚನ್ನರಾಯಪಟ್ಟಣ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಉಜಿರೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ 1887 ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದುಶ್ಚಟಗಳಿಂದ ಗ್ರಾಮೀಣ ಪ್ರದೇಶದ ಯುವ ಸಮುದಾಯ ಹಾಳಾಗುತ್ತಿದೆ. ಕುಡಿತದ ಚಟಕ್ಕೆ ಬಲಿಯಾದವರ ಕುಟಂಬ ಸಾಮಾಜಿಕವಾಗಿ ತಲೆತಗ್ಗಿಸುತ್ತಿದೆ. ಕುಡಿತದ ಚಟಕ್ಕೆ ಒಳಗಾದ ವ್ಯಕ್ತಿ ತನ್ನ ಕೌಟುಂಬಿಕ ಜವಾಬ್ದಾರಿಯಿಂದ ದೂರವಾಗಿ ಕುಟುಂಬಕ್ಕೆ ಹೊರೆಯಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಸಂಸ್ಥೆ ರಾಜ್ಯಾದ್ಯಂತ ಮದ್ಯ ವರ್ಜನ ಶಿಬಿರ ಆಯೋಜಿಸಿ ದುಶ್ಚಟ ಮುಕ್ತ ಸಮಾಜಕ್ಕೆ ಶ್ರಮಿಸುತ್ತಿದೆ. ಹಲವರು ಇದರ ಪ್ರಯೋಜನ ಪಡೆದು ಮದ್ಯಪಾನ ತ್ಯಜಿಸಿ ಕುಟುಂಬದ ಸದಸ್ಯರ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರು.
ಸಂಸ್ಥೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತಾಲೂಕಿನಲ್ಲಿ ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮಗೊಳಿಸಿ ಸ್ವಾವಲಂಬನೆ ಜೀವನ ನೆಡೆಸಲು ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಬಿ.ಆರ್.ಶ್ಯಾಮ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಿ.ಟಿ.ವೆಂಕಟೇಶ್, ಬಿ. ಜವರಾಯಿಗೌಡ, ಹುಲ್ಲೇಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಶೀಳನೆರೆ ಅಂಬರೀಷ್, ಯೋಜನಾಧಿಕಾರಿಗಳಾದ ತಿಲಕ್ ರಾಜ್, ಡಾ.ವೆಂಕಟೇಶ್, ವೇದಿಕೆ ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ರಾಜೇಶ್, ಸದಸ್ಯೆ ಪದ್ಮ, ಪಿಡಿಒ ಡಾ.ಟಿ. ನರಸಿಂಹರಾಜು, ಕೆ.ಎಸ್.ಸತೀಶ್, ಪ್ರಕಾಶ್ ಆಚಾರ್ಯ, ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಗ್ರಾಮಸ್ಥರು ಇದ್ದರು.