ಸಾತನೂರಿನಲ್ಲಿ ಶ್ರೀಮಸಣಮ್ಮ ದೇವಿ ಹಬ್ಬ ಅದ್ಧೂರಿ ಆಚರಣೆ

KannadaprabhaNewsNetwork |  
Published : Sep 22, 2025, 01:00 AM IST
೨೧ಕೆಎಂಎನ್‌ಡಿ-೧ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಮಸಣಮ್ಮ ದೇವಿಗೆ ಮಾಡಿರುವ ಭವ್ಯ ಅಲಂಕಾರ. | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಸಾತನೂರು ಗ್ರಾಮದಲ್ಲಿ ಪ್ರಾಣಿಗಳ ಬಲಿ ನೀಡಿ ಗ್ರಾಮಸ್ಥರು ವಿಜೃಂಭಣೆಯಿಂದ ಶ್ರೀಮಸಣಮ್ಮ ದೇವಿ ಹಬ್ಬ ಆಚರಿಸಿದರು. ಮಹಾಲಯ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಬೆಳಗ್ಗೆ ಶ್ರೀಮಸಣಮ್ಮ ದೇವಾಲಯದಲ್ಲಿ ಸಹಸ್ರಾರು ಭಕ್ತರಿಗೆ ಪ್ರಸಾದದ ರೂಪದಲ್ಲಿ ಬೇಯಿಸಿದ ಮಾಂಸ ಮತ್ತು ಅನ್ನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸಾತನೂರು ಗ್ರಾಮದಲ್ಲಿ ಪ್ರಾಣಿಗಳ ಬಲಿ ನೀಡಿ ಗ್ರಾಮಸ್ಥರು ವಿಜೃಂಭಣೆಯಿಂದ ಶ್ರೀಮಸಣಮ್ಮ ದೇವಿ ಹಬ್ಬ ಆಚರಿಸಿದರು. ಮಹಾಲಯ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಬೆಳಗ್ಗೆ ಶ್ರೀಮಸಣಮ್ಮ ದೇವಾಲಯದಲ್ಲಿ ಸಹಸ್ರಾರು ಭಕ್ತರಿಗೆ ಪ್ರಸಾದದ ರೂಪದಲ್ಲಿ ಬೇಯಿಸಿದ ಮಾಂಸ ಮತ್ತು ಅನ್ನ ವಿತರಿಸಲಾಯಿತು.

ಶತಮಾನದಿಂದ ಈ ಪದ್ಧತಿ ಅನುಚಾನವಾಗಿ ನಡೆದುಬಂದಿದೆ. ಗ್ರಾಮದಲ್ಲಿ ಹೊಸ ಗುಡಿ ಮತ್ತು ಹಳೇ ಗುಡಿ ಎಂಬ ಎರಡು ಮಸಣಮ್ಮ ದೇವಾಲಯಗಳಿವೆ. ಹೊಸಗುಡಿಯ ದೇವಿಯನ್ನು ಹಬ್ಬದ ಹಿಂದಿನ ದಿನದ ರಾತ್ರಿ ೧೦ರಿಂದ ಮಧ್ಯರಾತ್ರಿವರೆಗೆ ಮೆರವಣಿಗೆ ಮಾಡಿದರೆ, ನಂತರ ಬೆಳಗಿನ ಜಾವದವರೆಗೆ ಹಳೇಗುಡಿ ದೇವಿಯನ್ನು ಮೆರವಣಿಗೆ ನಡೆಯುವುದು ಇಲ್ಲಿನ ವಿಶೇಷ.

ಅದರಂತೆ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸಾತನೂರಿನಲ್ಲಿ ಶನಿವಾರ ರಾತ್ರಿ ಶ್ರೀಮಸಣಮ್ಮ ದೇವತೆಯ ಕರಗ ಮಹೋತ್ಸವ ಹಾಗೂ ಭಾನುವಾರ ಪಿತೃಪಕ್ಷ ಹಬ್ಬವು ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಹಳೇಗುಡಿ ಹಾಗೂ ಹೊಸಗುಡಿ ದೇವಸ್ಥಾನಗಳಲ್ಲಿ ಮಸಣಮ್ಮನ ಹಬ್ಬವನ್ನು ಆಚರಿಸಲಾಯಿತು. ಶನಿವಾರ ರಾತ್ರಿ ೯ಕ್ಕೆ ಗ್ರಾಮದ ಹೊರವಲಯದ ಕೆರೆ ಬಳಿ ಸೇರಿದ ನೂರಾರು ಭಕ್ತರ ಸಮ್ಮುಖದಲ್ಲಿ ಮಸಣಮ್ಮ ದೇವಿಯ ಕರಗ ಉತ್ಸವಕ್ಕೆ ಚಾಲನೆ ನೀಡಲಾಯಿತು.

ತೆಂಗಿನ ಹೊಂಬಾಳೆ:

ಶ್ರೀಮಸಣಮ್ಮ ದೇವಿಯ ಕರಗವು ತೆಂಗಿನ ಹೊಂಬಾಳೆಯಿಂದ ಕೂಡಿರುವುದು ಇಲ್ಲಿನ ವಿಶೇಷ. ಸಾಮಾನ್ಯವಾಗಿ ದೇವರ ಕರಗಗಳಿಗೆ ಅಡಿಕೆ ಹೊಂಬಾಳೆಗಳನ್ನು ಬಳಸುವುದು ಸಂಪ್ರದಾಯ. ಆದರಿಲ್ಲಿ ಮಸಣಮ್ಮ ದೇವಿಗೆ ತೆಂಗಿನ ಹೊಂಬಾಳೆ ಉಪಯೋಗಿಸುವುದು ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಅದೇ ರೀತಿ ಶನಿವಾರ ರಾತ್ರಿ ವಿಜೃಂಭಣೆಯಿಂದ ತೆಂಗಿನ ಹೊಂಬಾಳೆ ಉತ್ಸವ ಜರುಗಿತು. ಗ್ರಾಮದ ಕೆರೆಯ ಬಳಿ ದೇವಿಯ ಪೂಜೆ ನೆರವೇರಿಸಿ, ಪೂಜಾರಿ ತಲೆಯ ಮೇಲೆ ತೆಂಗಿನ ಹೊಂಬಾಳೆಯ ಕರಗವನ್ನು ಹೊತ್ತು ತರಲಾಯಿತು. ನೋಡುಗರಿಗಂತೂ ಈ ದೃಶ್ಯ ರೋಮಾಂಚನಕಾರಿಯಾಗಿತ್ತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗದ ಮೆರವಣಿಗೆ ನಡೆಸಿ, ಮಧ್ಯರಾತ್ರಿ ೧೨ಕ್ಕೆ ಪೂರ್ಣಗೊಳಿಸಲಾಯಿತು. ಆ ನಂತರ ಹಳೇ ಗುಡಿಯಲ್ಲಿ ಪೂಜೆ ನೆರವೇರಿಸಿ ಮತ್ತೊಂದು ಕರಗ ಉತ್ಸವ ನಡೆಸಲಾಯಿತು. ಕರಗ ಉತ್ಸವ ವೇಳೆ ನೂರಾರು ಕುರಿ-ಮೇಕೆಗಳನ್ನು ಬಲಿ ಕೊಡಲಾಯಿತು ಎಂದು ತಿಳಿದುಬಂದಿದೆ.

ಉತ್ಸವ ವೇಳೆ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಭಾನುವಾರ ಬೆಳಗ್ಗೆ ೮ರಿಂದ ಮಧ್ಯಾಹ್ನದವರೆಗೆ ಕೆರೆ ಬಳಿ ಬಾಯಿಬೀಗ ಮತ್ತು ದೇವರ ಉತ್ಸವ ನಡೆಯಿತು. ಎರಡೂ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಾಂಸದ ಪ್ರಸಾದ:

ಕರಗ ತರುವ ವೇಳೆ ದೇವಿಗೆ ಬಲಿ ನೀಡುವ ಕುರಿ-ಮೇಕೆಗಳ ಮಾಂಸದಿಂದ ಆಹಾರ ತಯಾರಿಸಿ ಭಕ್ತರಿಗೆ ಪ್ರಸಾದ ಹಂಚುವುದು ಇಲ್ಲಿನ ಮತ್ತೊಂದು ವಿಶೇಷ ಸಂಪ್ರದಾಯ. ದೇವರಿಗೆ ಹರಕೆ ಹೊತ್ತ ಭಕ್ತರು ಪ್ರತಿ ವರ್ಷ ಕುರಿ-ಮೇಕೆಗಳನ್ನು ಒಪ್ಪಿಸುತ್ತಾರೆ. ಮಹಾಲಯ ಅಮಾವಾಸ್ಯೆ ಹಬ್ಬದ ವೇಳೆ ಅವುಗಳನ್ನು ಬಲಿ ನೀಡಿ, ಆ ಮಾಂಸವನ್ನು ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.

ಶ್ರೀಮಸಣಮ್ಮ ದೇವಿಯ ಹಳೆ ಮತ್ತು ಹೊಸ ದೇವಸ್ಥಾನದ ಬೀದಿಗಳನ್ನು ಹೂವಿನ ಹಾರದ ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಹೂವಿನ ತೋರಣಗಳ ಮಧ್ಯಭಾಗದಲ್ಲಿ ದ್ರಾಕ್ಷಿ, ಸೇಬು, ಮೂಸಂಬಿ, ಕ್ಯಾರೆಟ್, ಬದನೆಕಾಯಿ, ದಾಳಿಂಬೆ ಹಣ್ಣುಗಳನ್ನು ಕಟ್ಟಿ ಅಲಂಕಾರ ಮಾಡಲಾಗಿತ್ತು. ಎಲ್ಲರ ಮನೆಗಳಲ್ಲೂ ಸಡಗರ-ಸಂಭ್ರಮ ಮನೆ ಮಾಡಿತ್ತು. ಪ್ರತಿ ಮನೆಯ ಬಾಡೂಟದ ಘಮಲು ಹರಡಿತ್ತು. ಬಂಧುಗಳು, ಸ್ನೇಹಿತರು, ಹಿತೈಷಿಗಳನ್ನು ಊಟಕ್ಕೆ ಆಹ್ವಾನಿಸಿ ಹಬ್ಬ ಆಚರಿಸಿದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ