ದೇವನಹಳ್ಳಿ: ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿ ಉದ್ದೇಶದಿಂದ ೨೦೧೯ರಲ್ಲಿ ಆರಂಭಗೊಂಡ ಸೊಸ್ಯಟಿಯಲ್ಲಿ ಪ್ರಸ್ತುತ ೩೭೪ ಷೇರುದಾರರಿದ್ದು ೨೦೨೪-೨೫ನೇ ಸಾಲಿನಲ್ಲಿ ೧೩,೮೩,೩೬೧ ರು.ನಿವ್ವಳ ಲಾಭ ಬಂದಿದೆ ಎಂದು ಸಂಘದ ಅದ್ಯಕ್ಷ ಆರ್.ನಾಗಭೂಷಣ ಹೇಳಿದರು.
ಪಟ್ಟಣದ ೨ ನೇ ವಾರ್ಡಿನ ಕೋಡಿ ಮಂಚೇನಹಳ್ಳಿಯ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಶ್ರೀನಂದಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿ ಪ್ರಗತಿಗೆ ಸಮಾಜದ ಎಲ್ಲರೂ ಷೇರುದಾರರಾಗಬೇಕು. ವೈಯಕ್ತಿಕ ಸಾಲ, ವ್ಯಾಪಾರ ಸಾಲ ದೊರೆಯಲಿದೆ. ಈವರೆಗೂ ೩ ಕೋಟಿಗೂ ಅಧಿಕ ವ್ಯಾಪಾರ ಸಾಲ ನೀಡಲಾಗಿದೆ. ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿಸಿದರೆ ಇತರರಿಗೂ ಸಾಲ ನೀಡಬಹುದು. ಕಳೆದ ಸಾಲಿನ ಲಾಭದಲ್ಲಿ ಮುಂದಿನ ಅವಧಿಗೆ ೪೦ ಲಕ್ಷ ಲಾಭದ ಗುರಿ ಹೊಂದಲಾಗಿದೆ ಎಂದರು.ಆಡಳಿತ ಮಂಡಳಿ ನಿದೇರ್ಶಕ ಸಿ.ವಿರೂಪಾಕ್ಷಯ್ಯ ಮಾತನಾಡಿ, ಹಣ ಇದ್ದವರು ಸೊಸೈಟಿಯಲ್ಲಿ ನಿಶ್ಚಿತ ಠೇವಣಿ ಇಡಬಹುದು. ದಶಮಾನೋತ್ಸವದ ವೇಳೆಗೆ ಸೊಸೈಟಿಗೆ ಸ್ವಂತ ಕಟ್ಟಡದ ಗುರಿ ಹೊಂದಲಾಗಿದೆ. ಇದಕ್ಕಾಗಿ ಕಟ್ಟಡ ನಿರ್ಮಾಣ ನಿಧಿ ಸ್ಥಾಪಿಸಲಾಗುವುದು ಎಲ್ಲರ ಸಹಕಾರ ಅಗತ್ಯ ಎಂದರು.
ಸಿಇಒ ಮಮತಾ ವಾರ್ಷಿಕ ವರದಿ ಮಂಡಿಸಿ ೨೦೨೫-೨೬ನೇ ಅಂದಾಜು ಖರ್ಚಿನ ಬಜೆಟ್ ಮಂಡನೆ ಮಾಡಿ ಸರ್ವ ಸದಸ್ಯರ ಸಭೆಯ ಅನುಮೊದನೆ ಪಡೆದರು.ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಂ.ಎಸ್.ರಮೇಶ್ ಮಾತನಾಡಿ, ಎಲ್ಲಾ ನಿರ್ದೇಶಕರು ಷೇರುದಾರರು ಸಹಕರಿಸಿದರೆ ಮಾತ್ರ ಸಹಕಾರ ಸೊಸೈಟಿ ಬೆಳವಣಿಗೆ ಸಾಧ್ಯ. ಇಂದಿನ ಸಭೆಗೆ ಬಹಳಷ್ಟು ಜನ ಗೈರಾಗಿರುವುದು ಬೇಸರ ತಂದಿದೆ ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಅಧಿಕ ಅಂಕ ಪಡೆದ ಷೇರುದಾರ ೧೭ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಗದು ಬಹುಮಾನ ನೀಡಿ ಗೌರವಿಸಲಾಯಿತು.ಸಭೆಯಲ್ಲಿ ಪುರಸಭಾ ಸದಸ್ಯ ಎಸ್.ನಾಗೇಶ್, ವೀರಶೈವ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಸೊಸೈಟಿ ಉಪಾಧ್ಯಕ್ಷ ಎನ್.ಮೋಹನಬಾಬು, ನಿದೇರ್ಶಕರಾದ ಎಂ.ವೀರಭದ್ರಪ್ಪ, ಎಂ.ಎಸ್.ರಮೇಶ್, ಸಿ.ವಿರೂಪಾಕ್ಷಯ್ಯ, ಎಸ್.ವಿರೂಪಾಕ್ಷಯ್ಯ, ಶಶಿಕಲಾ, ಆರ್.ನಳಿನಕುಮಾರಿ, ಎಸ್.ಮಹೇಶ್, ಮಹದೇವಯ್ಯ ಉಪಸ್ಥಿತರಿದ್ದರು.
೨೧ ದೇವನಹಳ್ಳಿ ಚಿತ್ರಸುದ್ದಿ ೦೧ಶ್ರೀನಂದಿ ಸೌಹಾರ್ದ ಕೋಅಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.