ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ಖರ್ಚು ಮಾಡಿದ 12 ವಿಧಾನ ಸಭಾ ಕ್ಷೇತ್ರದಲ್ಲಿ ಶೃಂಗೇರಿ ಕ್ಷೇತ್ರವೂ ಸೇರಿದೆ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.ಶನಿವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ರಂಗಮಂದಿರದಲ್ಲಿ ನಡೆದ ಗುರು ಸ್ಪಂದನ, ಶಿಕ್ಷಣ ಅದಾಲತ್, ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶೃಂಗೇರಿ ಕ್ಷೇತ್ರದಲ್ಲಿ ಎಲ್ಲಾ ಶಾಲೆಗಳ ಶೇ.90ರಷ್ಟು ಸಮಸ್ಯೆ ಬಗೆಹರಿಸಿ ದ್ದೇನೆ. ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 6 ಕೊಠಡಿ ಮಂಜೂರು, ಹೈಟೆಕ್ ಶೌಚಾಲಯ ನಿರ್ಮಿಸಿ, ಕುಡಿಯುವ ನೀರಿಗೆ ಕ್ಷೇತ್ರದಲ್ಲಿ 1 ಕೋಟಿ ರು. ಖರ್ಚು ಮಾಡಿದ್ದೇನೆ. ಬಹುತೇಕ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಪ್ರತಿಯೊಂದು ಶಾಲೆಗೂ ಇಂಟರ್ ಲಾಕ್, ರಸ್ತೆ, ಕಾಂಪೌಂಡು ನಿರ್ಮಾಣಕ್ಕೆ ಅನುದಾನ, ಸರ್ಕಾರಿ ಹಾಗೂ ಖಾಸಗಿ ಶಾಲೆಗೂ ಅನುದಾನ ನೀಡಿದ್ದೇನೆ ಎಂದರು. ಇಂದು ಸಂವಾದದಲ್ಲಿ 11 ಶಾಲೆಗಳು ಬೇಡಿಕೆ ಇಟ್ಟಿದ್ದಾರೆ. ಆದ್ಯತೆ ಮೇಲೆ ನಿಮ್ಮ ಬೇಡಿಕೆ ಈಡೇರಿಸುತ್ತೇನೆ. ಮುಂದಿನ 5 ವರ್ಷಗಳಲ್ಲಿ ಎಲ್ಲಾ ಬೇಡಿಕೆ ಈಡೇರಿಸಲಾಗುವುದು. ಗುರುಭವನಕ್ಕೆ ಡೈನಿಂಗ್ ಹಾಲ್ ಕಿಚನ್ ರೂಂ ಕೇಳಿದ್ದು ಮುಂದಿನ 1 ವರ್ಷದೊಳಗೆ ಅನುದಾನ ನೀಡುತ್ತೇನೆ. ಬಾಳೆಹೊನ್ನೂರು, ಮುತ್ತಿನಕೊಪ್ಪ ಎರಡೂ ಕಡೆ ಕೆಪಿಎಸ್ ಗೆ ಬೇಡಿಕೆ ಇದೆ. ಬಾಳೆಹೊನ್ನೂರು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಮೊದಲು ಬಾಳೆಹೊನ್ನೂರಿಗೆ ನೀಡಲಾಗುವುದು. ಮುಂದಿನ ವರ್ಷ ಮುತ್ತಿನಕೊಪ್ಪ ಶಾಲೆಗೆ ಕೆಪಿಎಸ್ ಮಂಜೂರು ಮಾಡುವ ಭರವಸೆ ನೀಡಿದರು. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದಿಂದ ಹಲವು ಬೇಡಿಕೆಗಳಿವೆ. ಇದರಲ್ಲಿ ಶಿಕ್ಷಕರಿಗೆ ಹೊಸ ಪಿಂಚಣಿ ಬದಲಾಗಿ ನಿಶ್ಚಿತ ಪಿಂಚಣಿ ಜಾರಿಗೆ ತರಬೇಕು ಎಂದರು. ಇದು ನ್ಯಾಯವಾದ ಬೇಡಿಕೆ. ಶಿಕ್ಷಕರು ದುಡಿದ ಹಣ ಶಿಕ್ಷಕರಿಗೆ ನೀಡಬೇಕು. ಈ ಬಗ್ಗೆ ವಿಧಾನ ಸಭೆಯಲ್ಲೂ ನಾನು ಒತ್ತಾಯಿಸಿದ್ದೇನೆ. ಶಿಕ್ಷಕರ ಕೊರತೆ ಇರುವ ಈ ಸಂದರ್ಭದಲ್ಲಿ ಚುನಾವಣೆಗೆ, ಜನ ಗಣತಿ, ಮತದಾನದ ಪಟ್ಟಿ ತಯಾರಿಸಲು ಬಳಸಿಕೊಳ್ಳ ಲಾಗುತ್ತಿದೆ. ಇದರಿಂದ ಶಿಕ್ಷರಿಗೆ ಒತ್ತಡ ಜಾಸ್ತಿಯಾಗುತ್ತದೆ. ಶಿಕ್ಷಕರ ಬೇಡಿಕೆಗಳನ್ನು ಸರ್ಕಾರ ಗಮನಿಸಿದೆ ಎಂದರು. ಶಾಲೆಗಳಲ್ಲಿ ಧರ್ಮದ ವಿಚಾರ ಬೇಡ. ಯಾವುದೇ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಧರ್ಮದ ವಿಚಾರ ಇಟ್ಟುಕೊಂಡು ವಿಷಬೀಜ ಬಿತ್ತಬಾರದು ಎಂದು ಶಾಸಕ ಟಿ.ಡಿ.ರಾಜೇಗೌಡ ಶಿಕ್ಷಕರಿಗೆ ಕಿವಿ ಮಾತು ಹೇಳಿದರು. ಧರ್ಮ ಕಾಪಾಡಲು ಮಠಾಧೀಶರರು ಇದ್ದಾರೆ. ಧರ್ಮದ ವಿಷಯ ಇಟ್ಟುಕೊಂಡು ಮನಸ್ಸುಗಳನ್ನು ಒಡೆಯಬಾರದು. ಹಿಂದೂ, ಮುಸ್ಲಿಂ, ಕ್ರೈಸ್ತರಲ್ಲಿ ಅವರವರ ಗುರುಗಳು ಧರ್ಮದ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಈಗಾಗಲೇ ಧರ್ಮದ ಆಧಾರದ ಸರ್ಕಾರ ನಡೆಸುತ್ತಿರುವ ಪಾಕಿಸ್ತಾನ, ಅಪಘಾನಿಸ್ತಾನ ದೇಶದ ಪರಿಸ್ಥಿತಿ ನೋಡಿದರೆ ಗೊತ್ತಾಗಲಿದೆ ಎಂದು ಹೇಳಿದರು. ಅತಿಥಿಯಾಗಿದ್ದ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ, ಕೊಪ್ಪ, ನರಸಿಂಹರಾಜಪುರ ತಾಲೂಕಿನ ಶಾಲೆಗಳಿಗೆ ಕುಡಿಯುವ ನೀರಿಗೆ 25 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.ಸಂವಾದದಲ್ಲಿ 12 ಶಾಲೆಗಳ ಮುಖ್ಯೋಪಾಧ್ಯಾಯರು ಶಾಲೆಗಳ ಸಮಸ್ಯೆ ಹೇಳಿದರು. ಇದೇ ಸಂದರ್ಭದಲ್ಲಿ ಶೇ.100 ರಷ್ಟು ಸಾಧನೆ ಮಾಡಿದ ಶಾಲೆ ಎಂದು ಗುರುತಿಸಿ ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. 2022-23 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಶಾಲಾ ಶಿಕ್ಷಕಿಯರಾದ ಶಿಲ್ಪ ಕುಮಾರಿ, ದೀಪ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ,ತಾಲೂಕು ಪ್ರಾ.ಶಾ.ಶಿ.ಸಂಘದಿಂದ ಶಾಸಕರಿಗೆ ಮನವಿ ನೀಡಲಾಯಿತು. ಅತಿಥಿಗಳಾಗಿ ಕೆಪಿಎಸ್ ಶಾಲೆ ಕಾರ್ಯಾಧ್ಯಕ್ಷ ಲಕ್ಷ್ಮಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಧನಂಜಯ ಮೇಧೂರ, ಶಿಕ್ಷಣ ಇಲಾಖೆ ಸೇವ್ಯಾನಾಯ್ಕ್, ಶಂಕರಪ್ಪ ಮತ್ತಿತರರು ಇದ್ದರು. ತಿಮ್ಮೇಶ್ , ನಟರಾಜ್ , ನಾಗರಾಜ್ ಇದ್ದರು.--- ಬಾಕ್ಸ್--- ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಮುಂದೆ ಗ್ರಾಮೀಣ ಭಾಗದಲ್ಲೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಪಂಚಾಯಿತಿ ಮಟ್ಟದಲ್ಲಿ ಒಂದೇ ಪಬ್ಲಿಕ್ ಸ್ಕೂಲ್ ತೆರೆಯುವ ಚಿಂತನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಸಚಿವ ಮಧು ಬಂಗಾರಪ್ಪ ಹೊಂದಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಸಮ್ಮಿಶ್ರ ಸರ್ಕಾರ ಇದ್ದಾಗಲೂ ಈ ಚಿಂತನೆ ಇತ್ತು. ಗ್ರಾಮೀಣ ಭಾಗದ ಕೆಲವು ಶಾಲೆಗಳಲ್ಲಿ 4-5 ಮಕ್ಕಳು ಇದ್ದು ಇಬ್ಬರು ಶಿಕ್ಷರನ್ನು ನೀಡಬೇಕಾಗಿದೆ. ಆ ಭಾಗದ ಎಲ್ಲಾ ಶಾಲೆಗಳನ್ನು ಸೇರಿಸಿದರೆ ನೀರು, ಕೊಠಡಿ, ಆಟದ ಮೈದಾನ ಸೇರಿದಂತೆ ಮೂಲ ಭೂತ ಸೌಕರ್ಯ ನೀಡಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.