ಶಿರಸಿ: ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಶಿರಸಿ ಜೀವಜಲ ಕಾರ್ಯಪಡೆಯ ಮೂಲಕ ಕೆರೆ ಅಭಿವೃದ್ಧಿಗೊಳಿಸಿದ ಶ್ರೀನಿವಾಸ ಹೆಬ್ಬಾರ್ ಇದೀಗ ಶಿರಸಿ ನಗರವನ್ನು ಸ್ವಚ್ಛವಾಗಿಡಲು ಪಣತೊಟ್ಟಿದ್ದಾರೆ.
ನಾಮಫಲಕ್ಕೆ ಮಾತ್ರ ಸೀಮಿತವಾಗಿಯೇ ಸ್ವಚ್ಛ ಶಿರಸಿ?: ಸಹ್ಯಾದ್ರಿ ಶೃಂಗ ಶಿರಸಿ ನಗರಕ್ಕೆ ಸ್ವಾಗತ ಎಂದು ನಗರದ ಮುಖ್ಯದ್ವಾರಗಳಲ್ಲಿ ನಾಮಫಲಕಗಳನ್ನು ನಗರಸಭೆಯಿಂದ ಅಳವಡಿಸಲಾಗಿದೆ. ಆದರೆ ಎಲ್ಲಿ ನೋಡಿದರೂ ಕಸದ ರಾಶಿಯೇ ರಾರಾಜಿಸುತ್ತದೆ. ನಗರದಂಚಿನ ಪ್ರದೇಶಗಳಲ್ಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಚೀಲದಲ್ಲಿ ತ್ಯಾಜ್ಯಗಳನ್ನು ತುಂಬಿ ಬಿಸಾಕುತ್ತಿದ್ದಾರೆ. ಇದರಿಂದ ನಗರದ ಸೌಂದರ್ಯವೇ ಹಾಳಾಗುತ್ತಿದೆ. ಆದರೂ ನಗರಸಭೆಯು ಕಣ್ಮುಚ್ಚಿಕುಳಿತಿರುವುದಕ್ಕೆ ಸಾರ್ವಜನಿಕರು ತೀವ್ರ ಆರೋಪಿಸಿದ್ದಾರೆ.
ಮೀನು-ಮಟನ್ ಅಂಗಡಿಯವರು ಹೆಚ್ಚುಳಿದ ತ್ಯಾಜ್ಯವನ್ನು ತಂದು ಎಸೆಯುತ್ತಿದ್ದು, ನಾಯಿಗಳಿಗೂ ಈ ಸ್ಥಳ ನೆಚ್ಚಿನ ತಾಣವಾಗಿದೆ. ಈ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರು ಭಯಪಡುವಂತಾಗಿದೆ. ಅಲ್ಲದೇ ಗಲೀಜಿನಿಂದ ಗಬ್ಬು ನಾರುವಂತಾಗಿದೆ.ಸ್ವಚ್ಛತೆಗೆ ಪಣ ತೊಟ್ಟ ಕೆರೆ ಹೆಬ್ಬಾರ್: ಚಿಪಗಿ ಗ್ರಾಪಂ ವ್ಯಾಪ್ತಿಯ ಕಾಲೇಜು ಬಳಿಯ ಶಿರಸಿ-ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿ ದಿನನಿತ್ಯದ ನಗರದ ಜನತೆ ವಾಯುವಿಹಾರಕ್ಕೆ ತೆರಳುತ್ತಾರೆ. ಆದರೆ ಈ ಪ್ರದೇಶ ವ್ಯಸನಿಗಳ ನೆಚ್ಚಿನ ತಾಟವಾಗಿ ಮಾರ್ಪಟ್ಟಿತ್ತು. ಎಲ್ಲಿ ನೋಡಿದರೂ ಬಿಯರ್ ಬಾಟಲಿ, ಬಟ್ಟೆ ಹಾಗೂ ಪಾದರಕ್ಷೆಯ ರಾಶಿಯಿಂದ ತುಂಬಿ ತುಳುಕುತ್ತಿತ್ತು. ಇದನ್ನು ಗಮನಿಸಿದ ಶ್ರೀನಿವಾಸ ಹೆಬ್ಬಾರ್ ತಮ್ಮ ಸ್ವಂತ ಖರ್ಚಿನಲ್ಲಿ ಕಸದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛ ಶಿರಸಿಗೆ ಕಾರ್ಯೋನ್ಮುಖರಾಗಿದ್ದಾರೆ.
ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಸ್ವಂತ ಖರ್ಚಿನಲ್ಲಿ ಸ್ವಚ್ಛತೆ ಮಾಡಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆ ವರೆಗೆ ಶ್ರಮ ವಹಿಸಿ, ಸ್ವಚ್ಛತೆ ಮಾಡಿದಾಗ ರಾತ್ರಿಯ ವೇಳೆ ಆ ಜಾಗದಲ್ಲಿ ಮತ್ತೆ ಕಸ ತಂದು ಎಸೆಯುತ್ತಿದ್ದಾರೆ. ಸೋಲಾರ್ ಸಿಸಿ ಕ್ಯಾಮೆರಾ ಅಳವಡಿಸಿಕೊಡಲು ಶ್ರೀನಿವಾಸ ಹೆಬ್ಬಾರ್ ಬಳಿ ವಿನಂತಿಸಿದ್ದೇವೆ. ಅವರ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಇನ್ನು ಮುಂದೆ ಕಸ ಎಸೆದರೆ ಗ್ರಾಪಂನಿಂದ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಚಿಪಗಿ ಗ್ರಾಪಂ ಸದಸ್ಯ ನವೀನ ಶೆಟ್ಟಿ ಹೇಳಿದರು.