ವಿಶ್ವಹಿಂದು ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಮಾ.26ರಿಂದ 29ರವರೆಗೆ ನಗರದ ಕದ್ರಿ ಮೈದಾನದಲ್ಲಿ 25ನೇ ವರ್ಷದ ಶ್ರೀ ರಾಮೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ನಗರದ ಶರವು ದೇವಸ್ಥಾನದಲ್ಲಿ ಸೋಮವಾರ ಬಿಡುಗಡೆ
ಮಂಗಳೂರು: ವಿಶ್ವಹಿಂದು ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಮಾ.26ರಿಂದ 29ರವರೆಗೆ ನಗರದ ಕದ್ರಿ ಮೈದಾನದಲ್ಲಿ 25ನೇ ವರ್ಷದ ಶ್ರೀ ರಾಮೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ನಗರದ ಶರವು ದೇವಸ್ಥಾನದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.
ಮಾ.26ರಂದು ಸಂಜೆ 4.30ಕ್ಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಕದ್ರಿ ಮೈದಾನಕ್ಕೆ ಶ್ರೀರಾಮ, ಸೀತಾ, ಲಕ್ಷ್ಮಣ, ಹನುಮಂತ ದೇವರ ರಜತ ಮೂರ್ತಿಗಳ ಭವ್ಯ ಶೋಭಾಯಾತ್ರೆ ನಡೆಯಲಿದೆ. ಮಾ.27ರಂದು ಬೆಳಗ್ಗೆ 8ಕ್ಕೆ ದೇವರ ಪ್ರತಿಷ್ಠೆ, 9ಕ್ಕೆ ಧ್ವಜಾರೋಹಣ, 9.30ಕ್ಕೆ ಶ್ರೀರಾಮ ತಾರಕ ಮಂತ್ರ ಹೋಮ, ಮಧ್ಯಾಹ್ನ 12ಕ್ಕೆ ಹೋಮ ಪೂರ್ಣಾಹುತಿ, ಸಂಜೆ 6ಕ್ಕೆ ಧಾರ್ಮಿಕ ಸಭೆ, ರಾತ್ರಿ 8ಕ್ಕೆ ಮಹಾಪೂಜೆ, 28ರಂದು ಬೆಳಗ್ಗೆ 9ಕ್ಕೆ ನರಸಿಂಹ ಹೋಮ, ಸಂಜೆ 6ಕ್ಕೆ ಧಾರ್ಮಿಕ ಸಭೆ, 7.30ಕ್ಕೆ ರಂಗಪೂಜೆ, 29ರಂದು ಸಂಜೆ 6ಕ್ಕೆ ಧಾರ್ಮಿಕ ಸಭೆ, 8ಕ್ಕೆ ಮಹಾಪೂಜೆ, 8.30ಕ್ಕೆ ರಾವಣ ದಹನ, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದು ರಾಮೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸುದರ್ಶನ್ ಮೂಡುಬಿದರೆ ಮಾಹಿತಿ ನೀಡಿದರು.ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಶರವು ದೇವಸ್ಥಾನದ ಶಿಲಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಶ್ರೀರಾಮನ ಆದರ್ಶ ನಮಗೆಲ್ಲರಿಗೂ ಪ್ರೇರಣೆ. ವಿಶ್ವ ಹಿಂದೂ ಪರಿಷತ್ ಜನರ ಸಹಭಾಗಿತ್ವದಲ್ಲಿ ಆಚರಿಸುತ್ತಿರುವ ರಾಮೋತ್ಸವಕ್ಕೆ ಸರ್ವರೂ ಸಹಕಾರ ನೀಡಬೇಕು. ರಾಮೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಹಿಂದು ಧರ್ಮ ಮುನ್ನಡೆಯಲಿ ಎಂದರು.
ರಾಮೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಮಾತನಾಡಿ, ಹಿಂದು ಧರ್ಮಕ್ಕೆ ಅನ್ಯಮತೀಯರಿಂದ ತೊಂದರೆ ಇರುವ ಜತೆಗೆ ಸ್ವಧರ್ಮೀಯರಿಂದಲೂ ತೊಂದರೆಗೆ ಒಳಗಾಗಿದೆ. ಶ್ರದ್ಧಾ ಕೇಂದ್ರಗಳನ್ನು ಹಾಳುಮಾಡಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಇಂಥ ಪರಿಸ್ಥಿತಿಯಲ್ಲಿ ಜನರ ನಂಬಿಕೆ ಉಳಿಸಲು ರಾಮೋತ್ಸವದಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ರಾಮೋತ್ಸವ ಸಮಿತಿ ಅಧ್ಯಕ್ಷ ಸುನೀಲ್ ಆಚಾರ್, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ರಾಮೋತ್ಸವ ಸಮಿತಿ ಗೌರವ ಸಲಹೆಗಾರರಾದ ಮೋನಪ್ಪ ಭಂಡಾರಿ, ಶರಣ್ ಪಂಪ್‌ವೆಲ್, ಶಿವಾನಂದ ಮೆಂಡನ್, ರತ್ನಾಕರ ಜೈನ್, ರಾಜಗೋಪಾಲ ರೈ, ಸಂದೇಶ್ ಶೆಟ್ಟಿ ಅಗ್ರಜ, ವೈದಿಕ ಸಮಿತಿಯ ಪೊಳಲಿ ಗಿರಿಪ್ರಕಾಶ್ ತಂತ್ರಿ, ಉಪಾಧ್ಯಕ್ಷೆ ಪುಷ್ಪಲತಾ ಗಟ್ಟಿ, ಪ್ರಧಾನ ಕಾರ್ಯದರ್ಶಿ ಭುಜಂಗ ಕುಲಾಲ್, ಪ್ರಧಾನ ಸಂಚಾಲಕ ಗೋಪಾಲ್ ಕುತ್ತಾರ್, ಕಾರ್ಯದರ್ಶಿಗಳಾದ ಮನೋಹರ ಸುವರ್ಣ, ರವಿ ಅಸೈಗೋಳಿ, ಕೋಶಾಧಿಕಾರಿ ವಸಂತ ಶೇಟ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.