ಕೂಡ್ಲಿಗಿ ಕ್ಷೇತ್ರದತ್ತ ಮುಖಮಾಡಿದ ಶ್ರೀರಾಮುಲು, ಸ್ಥಳೀಯರ ವಿರೋಧ

KannadaprabhaNewsNetwork |  
Published : Feb 02, 2025, 01:01 AM IST
 ಶ್ರೀರಾಮುಲು ಪೋಟೋ ಬಳಸಿಕೊಳ್ಳಿ | Kannada Prabha

ಸಾರಾಂಶ

ಶ್ರೀರಾಮುಲು ಕೂಡ್ಲಗಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವಿಚಾರ ಸ್ಥಳೀಯ ಆಕಾಂಕ್ಷಿಗಳ ವಿರೋಧಕ್ಕೆ ಕಾರಣವಾಗಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: 2028ರ ಚುನಾವಣೆಗೆ ಈಗಲೇ ತಯಾರಿ ಮಾಡಿಕೊಳ್ಳಲು ಕೂಡ್ಲಿಗಿ ಕ್ಷೇತ್ರದ ಗುಡೇಕೋಟೆ, ಹೊಸಹಳ್ಳಿ ಭಾಗದ ಜಾತ್ರೆ, ಹಬ್ಬಕ್ಕೆ ಶ್ರೀರಾಮುಲು ಬರುತ್ತಿದ್ದಾರೆ. ಜನಸಾಮಾನ್ಯರು, ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಈ ಮೂಲಕ ಶ್ರೀರಾಮುಲು ಕೂಡ್ಲಿಗಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಶ್ರೀರಾಮುಲು ಕೂಡ್ಲಗಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವಿಚಾರ ಸ್ಥಳೀಯ ಆಕಾಂಕ್ಷಿಗಳ ವಿರೋಧಕ್ಕೆ ಕಾರಣವಾಗಿದೆ. ಪಕ್ಷ ಸಂಘಟನೆಗೆ ನಾವು ಬೇಕು, ಸ್ಪರ್ಧೆಗೆ ಪ್ರತಿ ಬಾರಿಯೂ ಹೊರಗಿನ ಅಭ್ಯರ್ಥಿಗಳನ್ನೇ ಕರೆದು ತರುತ್ತಿದ್ದಾರೆ. ಕೂಡ್ಲಿಗಿ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಸ್ಥಳೀಯರಿಗೆ ಬಿಜೆಪಿ ಟಿಕೆಟ್‌ ನೀಡಿಲ್ಲ. ಈ ಬಾರಿ ನೀಡಲೇ ಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಕೂಡ್ಲಿಗಿ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿ ಸೂರ್ಯಪಾಪಣ್ಣ, ಶ್ರೀರಾಮುಲುಗೆ "ನೀನು ನಿನ್ನ ಸ್ವಕ್ಷೇತ್ರ ಬಳ್ಳಾರಿ ಗ್ರಾಮಾಂತರದಲ್ಲಿ ಗೆದ್ದು ತೋರಿಸಬೇಕು. ನನಗೆ ಪಕ್ಷ ಟಿಕೆಟ್ ನೀಡಿದರೆ ಕೂಡ್ಲಿಗಿ ಕ್ಷೇತ್ರದಲ್ಲಿ ಗೆದ್ದು ತೋರಿಸುತ್ತೇನೆ " ಎಂದು ಗುಡುಗಿದ್ದಾರೆ. ಅಲ್ಲದೇ ಬಿಜೆಪಿ ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ಸಿ.ಎಸ್.ಪುರದ ಮಾರುತಿ ನಾಯಕ ಸಹ ಶ್ರೀರಾಮುಲು ನಡೆಯ ವಿರುದ್ಧ ಸಿಡಿದೆದ್ದಿದ್ದಾರೆ. ಶ್ರೀರಾಮಲು ಅವರೇ ನೀವು ರಾಜ್ಯ ನಾಯಕರಲ್ಲವೇ? ನಿಮ್ಮ ಸ್ವಕ್ಷೇತ್ರ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದ ನಾಗೇಂದ್ರ ವಿರುದ್ಧ ಗೆದ್ದು ತೋರಿಸಿ. ಅದನ್ನು ಬಿಟ್ಟು 20 ವರ್ಷಗಳಿಂದ ಟಿಕೆಟ್ ವಂಚಿತರಾದ ಸ್ಥಳೀಯ ಎಸ್.ಟಿ. ಮುಖಂಡರನ್ನು ಟಿಕೆಟ್ ನೀಡದೇ ತುಳಿಯಲು ಹೊರಟಿರುವುದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಯಲ್ಲಿ ಸ್ಥಳೀಯ ಆಕಾಂಕ್ಷಿಗಳು, ಶ್ರೀರಾಮುಲು ಮಧ್ಯೆ ನಡೆಯುತ್ತಿರುವ ವಾರ್‌ನಿಂದ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಧರ್ಮಸಂಕಟವಾಗಿದೆ. ರಾಮುಲು ಜತೆ ಗುರುತಿಸಿಕೊಂಡರೆ ಸ್ಥಳೀಯ ಬಿಜೆಪಿ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಸ್ಥಳೀಯ ಬಿಜೆಪಿ ಆಕಾಂಕ್ಷಿಗಳ ಜೊತೆ ಗುರುತಿಸಿಕೊಂಡರೆ ರಾಮುಲು ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕದಲ್ಲಿದ್ದಾರೆ.

ಸ್ಥಳೀಯರಿಗೆ ಟಿಕೆಟ್‌ ನೀಡಿಲ್ಲ:

ಕಳೆದ ಎಂಪಿ ಚುನಾವಣೆಯ ಸಭೆಯೊಂದರಲ್ಲಿ "ಈ ಬಾರಿ ಸ್ಥಳೀಯರಿಗೆ ಟಿಕೆಟ್ ಕೈ ತಪ್ಪಿದೆ. 2028ರ ವಿಧಾನಸಭಾ ಚುನಾವಣೆಗೆ ಸ್ಥಳೀಯರಿಗೆ ಟಿಕೆಟ್ ನೀಡುತ್ತೇನೆ " ಎಂದು ಶ್ರೀರಾಮುಲು ಮಾತು ಕೊಟ್ಟಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ. ಅದನ್ನು ಬಿಟ್ಟು ಕೂಡ್ಲಿಗಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀನಿ ಎಂದು ರಾಮುಲು ಹೇಳಿಕೆ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ? 20 ವರ್ಷಗಳಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಬಿಜೆಪಿಯಿಂದ ಟಿಕೆಟ್ ನೀಡಿಲ್ಲ ಎನ್ನುತ್ತಾರೆ ಸ್ಥಳೀಯ ಬಿಜೆಪಿ ಆಕಾಂಕ್ಷಿ ಸೂರ್ಯಪಾಪಣ್ಣ.

ಶ್ರೀರಾಮುಲುಗೆ ಬಳ್ಳಾರಿ ಜಿಲ್ಲೆಯಲ್ಲಿ 4 ಎಸ್ಟಿ ಮೀಸಲು ಕ್ಷೇತ್ರಗಳಿವೆ. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಲಿ, ವಿಜಯನಗರ ಜಿಲ್ಲೆಯಲ್ಲಿ ಒಂದೇ ಒಂದು ಎಸ್ಟಿ ಮೀಸಲು ಕ್ಷೇತ್ರವಿದೆ. ಇಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡದಿದ್ದರೆ ಹೇಗೆ? ಶ್ರೀರಾಮುಲು ಕೂಡ್ಲಿಗಿ ತಾಲೂಕಿನಲ್ಲಿ ಜಾತ್ರೆ, ಮದುವೆಗೆ ಬರಲಿ, ನಮ್ಮ ಅಭ್ಯಂತರವಿಲ್ಲ. ಆದರೆ ಟಿಕೆಟ್ ಆಕಾಂಕ್ಷಿ ಎಂದು ಕ್ಷೇತ್ರಕ್ಕೆ ಬಂದರೆ ನಮ್ಮದು ವಿರೋಧವಿದೆ ಎನ್ನುತ್ತಾರೆ ಸ್ಥಳೀಯ ಬಿಜೆಪಿ ಆಕಾಂಕ್ಷಿ ಸೂರ್ಯಪಾಪಣ್ಣ.

ಕೂಡ್ಲಿಗಿ ಕ್ಷೇತ್ರದಲ್ಲಿ ಎಸ್ಟಿ ಸಮುದಾಯ ಬಹುಸಂಖ್ಯಾತರಿದ್ದೇವೆ. ಅವರ ಸ್ವಕ್ಷೇತ್ರದಲ್ಲಿ ಶ್ರೀರಾಮುಲು ಗೆದ್ದು ತೋರಿಸಲಿ. ಕೂಡ್ಲಿಗಿ ಕ್ಷೇತ್ರದಲ್ಲಿ ಯಾವ ಎಸ್ಟಿ ಸಮುದಾಯದ ಮುಖಂಡರನ್ನು ಇವರು ಬೆಳೆಸಿಲ್ಲ. ಅವರ ಕುಟುಂಬದವರಾದ ಶಾಂತಮ್ಮ, ಫಕ್ಕೀರಪ್ಪ, ಸುರೇಶಬಾಬು ಅವರನ್ನು ಎಂಪಿ, ಎಂಎಲ್‌ಎ ಮಾಡಿರುವುದನ್ನು ಬಿಟ್ಟರೆ ಬೇರೆ ಯಾರನ್ನೂ ಬೆಳೆಸಿಲ್ಲ ಎನ್ನುತ್ತಾರೆ ಬಿಜೆಪಿ ತಾಲೂಕು ಯುವಮೋರ್ಚಾ ಉಪಾಧ್ಯಕ್ಷ ಸಿ.ಎಸ್.ಪುರ ಮಾರುತಿ ನಾಯಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ