ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರೈತ ಹೋರಾಟಗಾರ ಕಿರಂಗೂರು ಪಾಪು ಅವರ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಸುರೇಶಬಾಬು ನೇತೃತ್ವದ ಅಧಿಕಾರಿಗಳ ತಂಡ ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಹಾಗೂ ಕಿರಂಗೂರು ಗ್ರಾಪಂ ಕಚೇರಿಗೆ ಪ್ರತ್ಯೇಕವಾಗಿ ಸೋಮವಾರ ಮತ್ತು ಮಂಗಳವಾರ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಿದರು.
ಕಿರಂಗೂರು ಗ್ರಾಮದ ಸರ್ವೇ ನಂ.1085/2 ರಲ್ಲಿ 0.29 ಗುಂಟೆ, 1080/1 ರಲ್ಲಿ 0.16 ಗುಂಟೆ, 1079/1ರಲ್ಲಿ 0.20 ಗುಂಟೆ, 1080/2 ರಲ್ಲಿ 1 ಎಕರೆ, 0.8 ಸೇರಿದಂತೆ ಒಟ್ಟು 2 ಎಕರೆ 0.33 ಗುಂಟೆ ಜಮೀನುಗಳನ್ನು ವಾಣಿಜ್ಯ ಉದ್ಧೇಶಕ್ಕೆ ಅನ್ಯ ಕ್ರಾಂತ ಮಾಡಿಸಿಕೊಂಡಿದ್ದು, ಇದರಲ್ಲಿ ಅಕ್ರಮವಾಗಿ ವಸತಿ ಬಡಾವಣೆ ಉದ್ದೇಶಕ್ಕೆ ನಕಲಿ ಬಹು ವಿನ್ಯಾಸ ನಕ್ಷೆ ತಯಾರಿಸಿದ್ದಾರೆ.ಜೊತೆಗೆ ಪ್ರತ್ಯೇಕ ನಿವೇಶಗಳಿಗೆ ಹಿಂದಿನ ತಾಪಂ ಇಒ ಎ.ಬಿ.ವೇಣು ಹಾಗೂ ಕಿರಂಗೂರು ಗ್ರಾಪಂ ಹಿಂದಿನ ಅಭಿವೃದ್ಧಿ ಅಧಿಕಾರಿ ಪಿ.ಎ.ಪ್ರಶಾಂತ್‌ಬಾಬು ಅಕ್ರಮವಾಗಿ ಇ-ಸ್ವತ್ತು ನೀಡಿದ್ದರು. ಅಲ್ಲದೆ ವಾಣಿಜ್ಯ ಉದ್ದೇಶಕ್ಕೆ ಎಂದು ಪರಿವರ್ತಿಸಿ ಅಕ್ರಮವಾಗಿ ವಸತಿ ಬಡಾವಣೆ ನಿರ್ಮಿಸಿರುವುದರಿಂದ ಸರ್ಕಾರಕ್ಕೆ ತೆರಿಗೆಯಲ್ಲಿ ಲಕ್ಷಾಂತರ ರು ನಷ್ಟ ಉಂಟಾಗಿದೆ ಎಂದು ಕಿರಂಗೂರು ಪಾಪು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ತಾಪಂ ಇಒ ಚಂದ್ರ ಅವರಿಂದ ಮಾಹಿತಿ ಪಡೆದುಕೊಂಡರು.