ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕಿನ ಕಿರಂಗೂರು ಬಳಿಯ ಬನ್ನಿಮಂಟಪ ಹಾಗೂ ಪಟ್ಟಣದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಸಿದ್ಧಗೊಳ್ಳಲಿರುವ ವೇದಿಕೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದರು.ನಂತರ ಪಟ್ಟಣ ಪುರಸಭೆ ಸಭಾಂಗಣದಲ್ಲಿ ಡೀಸಿ ಡಾ.ಕುಮಾರ್ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಈ ಬಾರಿ ದಸರಾವನ್ನು ಅ.4 ರಿಂದ ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತಿದೆ. ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಕಳೆದ ದಸರಾ ವೇಳೆ ವೇದಿಕೆ ತುಂಬಾ ಚಿಕ್ಕದಿದ್ದ ಕಾರಣ ಸ್ವಲ್ಪ ತೊಂದರೆಯಾಗಿತ್ತು. ಈ ಬಾರಿ ಅಗತ್ಯತೆಗೆ ತಕ್ಕಂತೆ ದೊಡ್ಡದಾಗಿ ನಿರ್ಮಾಣ ಮಾಡಿಕೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು.ದಸರಾ ಆಚರಣೆ ಆಹ್ವಾನ ಪತ್ರಿಕೆಗಳನ್ನು ಆದಷ್ಟು ಬೇಗ ಸಿದ್ಧಪಡಿಸಬೇಕು. ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ, ಸಂಘ ಸಂಸ್ಥೆಗಳಿಗೆ ವಿತರಿಸಿ ಗೌರವ ಪೂರ್ವಕವಾಗಿ ಆಹ್ವಾನಿಸಬೇಕು. ಯಾವುದೇ ದೂರು ಬಾರದಂತೆ ಆಹ್ವಾನ ಪತ್ರಿಕೆಯೊಂದಿಗೆ ದಸರಾ ಕಾರ್ಯಕ್ರಮಗಳ ವಿವರ ನೀಡುವ 5 ದಸರಾ ಕರಪತ್ರಗಳನ್ನು ಸೇರಿಸಿ ಕೊಡಬೇಕು ಎಂದು ತಾಕೀತು ಮಾಡಿದರು.
ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಜನರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಎರಡು ಪಾಳಿಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಬೇಕು. ಆಹಾರ ಮೇಳದಲ್ಲಿ 40 ಮಳಿಗೆ (ಕೌಂಟರ್) ಗಳನ್ನು ತೆರೆಯಲಿದೆ. ಮಳಿಗೆಗಳನ್ನು ಪರವಾನಗಿ ಹೊಂದಿರುವವರಿಗೆ ಮಾತ್ರ ನೀಡಬೇಕು. ಗುಣಮಟ್ಟವನ್ನು ಪರಿಶೀಲಿಸಬೇಕು. ಶುಚಿತ್ವ ಕಾಪಾಡಬೇಕು. ಆಹಾರ ವಿತರಿಸುವವರು ಕೈಗೆ ಗ್ಲೌಸ್ ಹಾಗೂ ಡ್ರೆಸ್ ಕೋಡ್ ಅನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.ಸ್ವಚ್ಛತೆ ಕಾಪಾಡಲು ಅವಶ್ಯಕ ಪೌರಕಾರ್ಮಿಕ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ಅಗತ್ಯವಿರುವ ಕಡೆ ಕಸದತೊಟ್ಟಿಗಳನ್ನು ಇಡಬೇಕು. ಸಾರ್ವಜನಿಕರಿಗೆ ಸ್ವಚ್ಛತೆ ಕಾಪಾಡುವಂತೆ ಪ್ರೇರೇಪಿಸಬೇಕು. ಪ್ರತಿ ಗಂಟೆಗೊಮ್ಮೆ ಸುತ್ತಮುತ್ತಲು ಶುಚಿಪಡಿಸುವ ಕೆಲಸವಾಗಬೇಕು ಎಂದರು.
ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಎಎಸ್ಪಿ ತಿಮ್ಮಯ್ಯ, ಎಸಿ ಶಿವಮೂರ್ತಿ, ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿ ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳು ಹಾಜರಿದ್ದರು.