ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ, ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಗೆ ವಿವಿಧ ನೋಟಗಳ ಸಂಗ್ರಹಿಸಿ ಅಲಂಕರಿಸಲಾಯಿತು. ನೋಟುಗಳಿಂದ ಅಲಂಕೃತಗೊಂಡ ಚಾಮುಂಡೇಶ್ವರಿ ದೇವಿಯನ್ನು ನೋಡಿ ಕಣ್ತುಂಬಿಕೊಂಡರು.
ದೇವಾಲಯದ ಮುಖ್ಯ ಅರ್ಚಕ ಲಕ್ಮೀಶ್ ನೇತೃತ್ವದಲ್ಲಿ ಇತರ ಅರ್ಚಕ ವೃಂದ ಸೇರಿ ಗುರುವಾರ ಸಂಜೆಯಿಂದಲೆ ದೇವಾಲಯದ ಗರ್ಭಗುಡಿಯ ದೇವಿ ಸೇರಿದಂತೆ ಗೋಡೆಗಳ ಸುತ್ತಲೂ ಅಲಂಕಾರ ಮಾಡಲಾಗಿತ್ತು.ಗರ್ಭಗುಡಿಯ ಸುತ್ತಲೂ 10,20, 50, 100, 200, 500 ರು. ನೋಟುಗಳನ್ನು ಅಂಟಿಸಿ, ದೇವಿ ಅಲಂಕಾರಕ್ಕೆ ನೋಟುಗಳ ಬಳಕೆ ಮಾಡಲಾಗಿತ್ತು. ಅಲಂಕಾರ ಮಾಡಿದ್ದರಿಂದ ಧನ ಲಕ್ಷ್ಮಿ ಅವತಾರದಂತೆ ದೇವಿ ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಪಟ್ಟಣ ಮಾತ್ರವಲ್ಲದೆ ತಾಲೂಕಿನ ಗ್ರಾಮಗಳಿಂದ ನೂರಾರು ಭಕ್ತರು ಶ್ರದ್ದೆ ಭಕ್ತಿಯಿಂದ ದೇವಾಲಯಕ್ಕೆ ಆಗಮಿಸಿ ಚಾಮುಂಡೇಶ್ವರಿ ದೇವಿಯ ಧನ ಲಕ್ಷ್ಮಿ ಅವತಾರದ ದರ್ಶನ ಪಡೆದು ಪುನೀತರಾಗಿದ್ದಾರೆ.ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ
ಪಟ್ಟಣದ ಮುಖ್ಯ ಬೀದಿಯ ಶ್ರೀ ಲಕ್ಷ್ಮಿ ದೇವಾಲಯದಲ್ಲಿ ದೇವರ ವಿಗ್ರಹಕ್ಕೆ ಅರ್ಚಕ ಕೃಷ್ಣ ಭಟ್ ನೇತೃತ್ವದಲ್ಲಿ ವಿಶೇಷ ಅಲಂಕಾರ ಮಾಡಿ ಭಕ್ತರ ಗಮನ ಸೆಳೆಯಿತು.ಪ್ರಸಿದ್ದ ಗಂಜಾಂ ಶ್ರೀ ನಿಮಿಷಾಂಬ ದೇವಾಲಯದಲ್ಲಿ ಮುಖ್ಯ ಅರ್ಚಕ ಸೂರ್ಯನಾರಾಯಣಭಟ್ ನೇತೃತ್ವದಲ್ಲಿ ಅರ್ಚಕರ ತಂಡ ಲಕ್ಷ್ಮಿ ದೇವಿ ವ್ರತ ಪೂಜೆಗಳ ನೆರವೇರಿಸಿ ಬಂದ ಭಕ್ತರಿಗೆ ವಿಶೇಷ ಪ್ರಸಾದ ಅನ್ನ ಸಂತರ್ಪಣೆ ಕಾರ್ಯ ನೆರವೇರಿಸಿದರು.