ಪಾಂಡವಪುರ ತಾಲೂಕಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

KannadaprabhaNewsNetwork |  
Published : Aug 22, 2026, 01:30 AM IST
21ಕೆಎಂಎನ್ ಡಿ18 | Kannada Prabha

ಸಾರಾಂಶ

ಲಕ್ಷ್ಮಿ ಪೂಜೆಗಾಗಿ ಹೂವು, ಹಣ್ಣು, ತರಕಾರಿಗಳಿಗೆ ಭಾರೀ ಬೆಲೆ ತೆತ್ತು ಕೊಂಡು ಮಹಿಳೆಯರು ಹಾಗೂ ಹೆಂಗೆಳೆಯರು ಹೊಸ ಬಟ್ಟೆಗಳನ್ನು ಧರಿಸಿಕೊಂಡು ವರಮಹಾಲಕ್ಷ್ಮಿ ಪೂಜೆ ಮಾಡುವ ಹಬ್ಬವನ್ನು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಲಕ್ಷ್ಮಿಯನ್ನು ಕುಟುಂಬದ ಅಭ್ಯುದಯ ಮತ್ತು ಪ್ರಗತಿಗಾಗಿ ಪೂಜಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವರಮಹಾಲಕ್ಷ್ಮಿ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಶುಭ ಶುಕ್ರವಾರದಂದು ನವ ವಿವಾಹಿತರು, ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಬಹಳ ಸಡಗರ-ಸಂಭ್ರಮದಿಂದ ಆಚರಣೆ ಮಾಡಿದರು.

ಹಬ್ಬವನ್ನು ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ ಪ್ರದೇಶಗಳಲ್ಲಿ ಹೆಚ್ಚು ಸಡಗರ-ಸಂಭ್ರಮ ಹಾಗೂ ವಿಜೃಂಭಣೆಯಿಂದ ನಡೆಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಆದರೆ, ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಲಕ್ಷ್ಮಿ ಪೂಜೆಗಾಗಿ ಹೂವು, ಹಣ್ಣು, ತರಕಾರಿಗಳಿಗೆ ಭಾರೀ ಬೆಲೆ ತೆತ್ತು ಕೊಂಡು ಮಹಿಳೆಯರು ಹಾಗೂ ಹೆಂಗೆಳೆಯರು ಹೊಸ ಬಟ್ಟೆಗಳನ್ನು ಧರಿಸಿಕೊಂಡು ವರಮಹಾಲಕ್ಷ್ಮಿ ಪೂಜೆ ಮಾಡುವ ಹಬ್ಬವನ್ನು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಲಕ್ಷ್ಮಿಯನ್ನು ಕುಟುಂಬದ ಅಭ್ಯುದಯ ಮತ್ತು ಪ್ರಗತಿಗಾಗಿ ಪೂಜಿಸಲಾಗುತ್ತದೆ. ಈ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತಿರುವ ಮಹಿಳೆಯರು ಶುಕ್ರವಾರದಂದು ವರಮಹಾಲಕ್ಷ್ಮಿ ದೇವತೆಯನ್ನು ಬಗೆಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸಿದರು.

ಬ್ರಾಹ್ಮೀ ಮೂಹರ್ತದಲ್ಲಿ ಎದ್ದು ಸ್ನಾನ ಮುಗಿಸಿ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿದ ಮಹಿಳೆಯರು, ಮನೆಯ ಮಧ್ಯಭಾಗದಲ್ಲಿ ಸುಂದರ ರಂಗೋಲಿ ಬಿಡಿಸಿ ಪೂಜೆಗೆ ಸಿದ್ಧತೆ ಮಾಡಿಕೊಂಡು ಬೆಳ್ಳಿ ಅಥವಾ ಹಿತ್ತಾಳೆಯಿಂದ ಕಲಶ ತಯಾರಿಸಿ ಅದರ ಸುತ್ತಲೂ ಗಂಧದಿಂದ ಸ್ವಸ್ತಿಕ ಚಿಹ್ನೆಯನ್ನು ಬರೆದು ಕಣ್ಮನ ಸೆಳೆಯುವಂತೆ ಅಲಂಕರಿಸಿ ಪೂಜೆ ಸಲ್ಲಿಸಿದರು.

ಕಲಶದಲ್ಲಿ ಅಕ್ಕಿ, ನೀರು, ನಾಣ್ಯ, ಪೂರ್ಣ ಲಿಂಬೆ, ಐದು ಪ್ರಕಾರದ ಎಲೆಗಳು, ಅಡಿಕೆಯನ್ನು ಇರಿಸುವುದು ವಾಡಿಕೆ. ಇನ್ನು ಕೆಲವರು ಅರಿಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಳೆಗಳು ಹಾಗೂ ಕಪ್ಪು ಮಣಿಗಳು, ನಂತರ ಅರಿಶಿನದ ಮಿಶ್ರಣವನ್ನು ತೆಂಗಿನ ಕಾಯಿಗೆ ಹಚ್ಚಿ ಕಲಶದ ಬಾಯಿಗೆ ಇರಿಸಿ, ಎಲೆಯಿಂದ ಅಮೃತ್ತವಾದ ಕುಂಭದ ಬಾಯಿಗೆ ತೆಂಗಿನಕಾಯಿ ಇಟ್ಟು ಲಕ್ಷ್ಮಿ ದೇವಿ ಪೂಜೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂಟೇಸ್ವಾಮಿ ಕ್ಷೇತ್ರದ ವರಮಹಾಲಕ್ಷ್ಮಿ ಹಬ್ಬಕ್ಕೆ ಧನ ಸಹಾಯ
ನರ್ತಕಿಯರ ಮೇಕಪ್‌ ಕೊಠಡಿಯಾದ ಸಾರ್ವಜನಿಕ ಆಸ್ಪತ್ರೆ..!