ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಜ್ಯದಲ್ಲೇ ಕುಸ್ತಿ ಕಲೆಗೆ ಶ್ರೀರಂಗಪಟ್ಟಣ ಹೆಸರುವಾಸಿಯಾಗಿದೆ. ವಿಶೇಷವಾಗಿ ಹೆಚ್ಚಿನ ಕುಸ್ತಿ ಪಟುಗಳು ಮೈಸೂರು ಭಾಗದಲ್ಲಿ ಬೆಳೆದಿದ್ದಾರೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ಕುಸ್ತಿ ಬಳಗದಿಂದ ಹನುಮ ಜಯಂತಿ ಹಾಗೂ ಹನುಮಮಾಲ ಸಂಕೀರ್ತನೆ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಪುರುಷ ಹಾಗೂ ಮಹಿಳೆಯರ ವಿಭಾಗೀಯ ಮಟ್ಟದ ಮ್ಯಾಟ್ ಮೇಲಿನ ಪಾಯಿಂಟ್ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ, ಮಹರಾಜರ ಕಾಲದಿಂದಲೂ ಕುಸ್ತಿ ಕಲೆ ಹುಟ್ಟಿಕೊಂಡಿದೆ. ಅದರಲ್ಲೂ ಮೈಸೂರು ಭಾಗದ ಕುಸ್ತಿ ಕಲೆ ದೇಶದೆಲ್ಲಡೆ ಹೆಸರು ಮಾಡಿದೆ. ವಿಜಯನಗರ ಸಾಮ್ರಾಜ್ಯ ನಂತರ ಶ್ರೀರಂಗಪಟ್ಟಣ ಮೈಸೂರು ರಾಜ್ಯದ ರಾಜಧಾನಿಯಾಗಿತ್ತು. ಅಂದಿನಿಂದಲೂ ಈ ಭಾಗದ ಪ್ರತಿ ಹಳ್ಳಿಗಳಲ್ಲಿ ಗರಡಿಯ ಮನೆಗಳು ಸ್ಥಾಪಿತಗೊಂಡು ಮೈಸೂರು ತನಕ ಕುಸ್ತಿ ಕಲೆ ಬೆಳೆದು ಬಂದಿದೆ ಎಂದರು.ಶ್ರೀರಂಗಪಟ್ಟಣದಲ್ಲಿ ಇದೇ ಮೊದಲು ಇಷ್ಟು ದೊಡ್ಡ ಮಟ್ಟದಲ್ಲಿ ವಿಬಾಗೀಯ ಕುಸ್ತಿ ಪಂದ್ಯಾವಳಿಯನ್ನು ಇಲ್ಲಿನ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಆಯೋಜಿಸಿರುವುದು ಹೆಮ್ಮೆಯ ವಿಷಯ. ಇದರಿಂದ ಕುಸ್ತಿ ಕಲೆಗೆ ಇನ್ನಷ್ಟು ಬೆಳೆವಣಿಗೆ, ಮೆರಗು ಬಂದಂತಾಗಿದೆ. ನಾಡಿನ ಕುಸ್ತಿ ಕಲೆಯನ್ನು ಅಭಿಮಾನಿಗಳು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಪುರಸಭಾ ಪ್ರಭಾರ ಅಧ್ಯಕ್ಷ ಎಂ.ಎಲ್. ದಿನೇಶ್, ಹಿರಿಯ ಕುಸ್ತಿಪಟುಗಳಾದ ಪೈಲ್ವಾನ್ ಮುಕುಂದ, ಲಕ್ಷ್ಮಣ್ ಸಿಂಗ್, ಪೈಲ್ವಾನ್ ಶ್ರೀಕಂಠು, ಶ್ರೀನಿವಾಸ್ ಗೌಡ, ವಸ್ತಾದ್ ಸುರೇಶ್, ತರ ಹೆಸರಾಂತ ಪೈಲ್ವಾನರುಗಳನ್ನು ಅಭಿನಂದಿಸಲಾಯಿತು.ಮಲ್ಲುಸ್ವಾಮಿ, ಬಾಲ ಸುಬ್ರಮಣ್ಯ, ಕಿರಂಗೂರು ಸುರೇಸ್, ರವಿಪ್ರಸಾದ್ ಸೇರಿದಂತೆ ಇತರ ಪೈಲ್ವಾನರುಗಳು ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ ನೂರಾರು ವಿವಿಧ ತೂಕದ ಪೈಲ್ವಾನರುಗಳು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದರು. ಸಿಪಿಐ ಬಿ.ಜಿ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಲಾಗಿತ್ತು.
ಕುಸ್ತಿ ಅಭಿಮಾನಿಗಳು ವಿಶೇಷ ಗ್ಯಾಲರಿಯಲ್ಲಿ ಕುಳಿತು ಕುಸ್ತಿ ಪಟುಗಳಿಗೆ ಶಿಳ್ಳೆ ಹೊಡೆದು ಉರಿದುಂಬಿಸುತ್ತಿದ್ದರು.