ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸುದರ್ಶನ 600ಕ್ಕೆ 594 ಹಾಗೂ ವೈ.ಎಂ.ಮೇಘನಾ 59 ಅಂಕ ಪಡೆದಿದ್ದಾರೆ. ಸುದರ್ಶನ ವಿಜ್ಞಾನ ವಿಷಯಗಳಲ್ಲಿ 100ಕ್ಕೆ ನೂರು ಅಂಕ ಪಡೆಯುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನದೊಂದಿಗೆ ದಾಖಲೆ ನಿರ್ಮಿಸಿದ್ದಾನೆ. ಮೇಘನಾ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅರ್‌ಹಮ್ ಜೈನ್ 589 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷವೂ ಜಿಲ್ಲೆಗೆ ಅಗ್ರ ಸ್ಥಾನವನ್ನು ಪಡೆಯುವುದರೊಂದಿಗೆ ನೆರೆಯ ಜಿಲ್ಲೆಗಳಲ್ಲೇ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ. ಕೆ.ಎಸ್.ಪ್ರಮೋದ್ ಹೆಬ್ಬಾಳ್ (588), ಹರ್ಷಿತ ವಿ. (584), ನಮಿತಾ ರಾಜ್ (584) ನೂರ್ ಸಬಾ (582) ಹಾಗೂ ಎಂ.ಯಶವಂತ (582) ಅಂಕ ಪಡೆದು ಕಾಲೇಜಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.ಕಾಲೇಜಿನ ಒಟ್ಟು 545 ವಿದ್ಯಾರ್ಥಿಗಳಲ್ಲಿ 395 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಕಾಲೇಜಿನ ಒಟ್ಟು 133 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಒಟ್ಟು 100ಕ್ಕೆ 100 ಅಂಕಗಳನ್ನು ಪಡೆದಿರುವುದು ವಿಶೇಷವಾಗಿದೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್.ಅಮೋಘ್, ಆಡಳಿತಾಧಿಕಾರಿ ಡಾ.ರವಿ ಅಭಿನಿಂದಿಸಿದ್ದಾರೆ. ಶುಕ್ರವಾರ ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳ ಅಭಿನಂದಿಸಲಾಯಿತು.
ರಾಜ್ಯಕ್ಕೆ 6ನೇ ರ್‍ಯಾಂಕ್ ಪಡೆದ ಸುದರ್ಶನ್ ಹಾಗೂ 9ನೇ ರ್‍ಯಾಂಕ್ ಪಡೆದ ವೈ.ಎಂ.ಮೇಘನಾ ಇಬ್ಬರೂ ಭವಿಷ್ಯದಲ್ಲಿ ವೈದ್ಯರಾಗುವ ಹೊಂಗನಸು ಹೊತ್ತಿದ್ದಾರೆ. ಅಚ್ಚರಿ ಎಂದರೆ ಇವರಿಬ್ಬರೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಹತ್ತನೇ ತರಗತಿ ಅಭ್ಯಾಸ ಮಾಡಿ ನಂತರ ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜಿಗೆ ಪಿಯುಗೆ ಸೇರ್ಪಡೆಯಾಗಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.91ರಷ್ಟು ಅಂಕ ಪಡೆದಿದ್ದೆ. ಪಿಯುಸಿಯಲ್ಲಿ ಶೇ.100ರಷ್ಟು ಅಂಕ ಪಡೆವ ಗುರಿ ಇಟ್ಟುಕೊಂಡಿದ್ದೆ. ಆದರೆ ಶೇ.99 ರಷ್ಟು ಬಂದಿದೆ. ವಿಜ್ಞಾನದ ನಾಲ್ಕು ವಿಷಯಗಳಲ್ಲಿ 100ಕ್ಕೆ ನೂರು ತೆಗೆದಿದ್ದೇನೆ. ಆದರೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ನಿರೀಕ್ಷಿಸದಷ್ಟು ಅಂಕ ಬಾರದಿರುವ ಕಾರಣ ತುಸು ಹಿನ್ನಡೆ ಆಗಿದೆ ಎನ್ನುತ್ತಾರೆ ಸುದರ್ಶನ. ಈತನ ಸಹೋದರ ಇದೇ ಎಸ್ಆರ್‌ಎಸ್ ಕಾಲೇಜಿನಲ್ಲಿ ಪಿಯುಸಿ ಅಭ್ಯಾಸ ಮಾಡಿದ್ದು ಇದೀಗ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮೂರನೇ ವರ್ಷದ ವೈದ್ಯಕೀಯ ಪದವಿ ಅಭ್ಯಾಸ ಮಾಡುತ್ತಿದ್ದಾನೆ. ನನ್ನ ಈ ಸಾಧನೆಗೆ ಸಹೋದರ ಮಧುಸೂಧನನೇ ಪ್ರೇರಣೆ ಎನ್ನುತ್ತಾನೆ ಸುದರ್ಶನ.