ಕನ್ನಡಪ್ರಭ ವಾರ್ತೆ ಬೀಳಗಿಪಟ್ಟಣದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ವೃದ್ಧೆಯ ಭೀಕರ ಕೊಲೆ ನಡೆದು 4 ತಿಂಗಳು ಕಳೆದರೂ ಹಂತಕರನ್ನು ಪತ್ತೆಹಚ್ಚದ ತಾಲೂಕು ಪೊಲೀಸ್ ಇಲಾಖೆಯ ತನಿಖಾ ವೈಫಲ್ಯ ಖಂಡಿಸಿ ಬೀರೇಶ್ವರ ಜಾತ್ರಾ ಕಮಿಟಿ ಸದಸ್ಯರು ಹಾಗೂ ಸಾರ್ವಜನಿಕರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಪಟ್ಟಣದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ವೃದ್ಧೆಯ ಭೀಕರ ಕೊಲೆ ನಡೆದು 4 ತಿಂಗಳು ಕಳೆದರೂ ಹಂತಕರನ್ನು ಪತ್ತೆಹಚ್ಚದ ತಾಲೂಕು ಪೊಲೀಸ್ ಇಲಾಖೆಯ ತನಿಖಾ ವೈಫಲ್ಯ ಖಂಡಿಸಿ ಬೀರೇಶ್ವರ ಜಾತ್ರಾ ಕಮಿಟಿ ಸದಸ್ಯರು ಹಾಗೂ ಸಾರ್ವಜನಿಕರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ತಾಲೂಕಿನ ಪ್ರಸಿದ್ಧ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ವೃದ್ಧೆಯೊಬ್ಬರ ಭೀಕರ ಕೊಲೆ ನಡೆದು ನಾಲ್ಕು ತಿಂಗಳಾದರೂ, ಪೊಲೀಸರು ಇದುವರೆಗೆ ಯಾವುದೇ ಆರೋಪಿಯನ್ನು ಬಂಧಿಸದೆ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಬೀರೇಶ್ವರ ಜಾತ್ರಾ ಕಮಿಟಿ ಹಾಗೂ ಕಾಟಕರ ಓಣಿಯ ಹಿರಿಯರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ಮನವಿ ಸಲ್ಲಿಸಿದರು.
ಕಳೆದ 2 ವರ್ಷಗಳಿಂದ ಬೀರೇಶ್ವರ ದೇವಸ್ಥಾನದಲ್ಲಿ ರಾತ್ರಿ ಮಲಗುತ್ತಿದ್ದ ಗೌರವ್ವ ಅಯ್ಯಪ್ಪ ಕೊಡೇಕಲ್ ಎಂಬ ವೃದ್ಧೆಯನ್ನು, ಮಾರ್ಚ್ 17ರಂದು ರಾತ್ರಿ ಕಿಡಿಗೇಡಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದರು. ಮರುದಿನ ಅಂದರೆ 18-03-2026ರ ಯುಗಾದಿ ಪಾಡ್ಯದಂದು ಬೆಳಗ್ಗೆ 6ಗಂಟೆಗೆ ಪೂಜಾರಿ ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿತ್ತು. ತಕ್ಷಣವೇ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದರು.ಕೊಲೆ ನಡೆದು 4 ತಿಂಗಲಾದರೂ ಬೀಳಗಿ ಪೊಲೀಸರು ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ಇಲಾಖೆಯ ಈ ಮಂದಗತಿ ಹಾಗೂ ಬೇಜವಾಬ್ದಾರಿತನದಿಂದಾಗಿ ಬೀಳಗಿಯ ಸಾರ್ವಜನಿಕರಲ್ಲಿ ಹಾಗೂ ಭಕ್ತರಲ್ಲಿ ಭೀತಿ ಮತ್ತು ಅಭದ್ರತೆಯ ವಾತಾವರಣ ನಿರ್ಮಾಣವಾಗಿದೆ.
ಇಷ್ಟು ದಿನ ಕಳೆದರೂ ಒಬ್ಬನೇ ಒಬ್ಬ ಅಪರಾಧಿಯನ್ನು ಬಂಧಿಸಲು ಸಾಧ್ಯವಾಗದಿರುವುದು ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಎಸ್ಪಿ, ಡಿವೈಎಸ್ಪಿ ಅವರ ಗಮನಕ್ಕೆ ಹಲವು ಬಾರಿ ತಂದರೂ ಸಹ ಕೆಳಹಂತದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ತನಿಖೆ ಚುರುಕುಗೊಳಿಸದೇ ಇರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ.ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮುಂಬರುವ 15 ದಿನಗಳೊಳಗಾಗಿ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಬಾಗಲಕೋಟೆ ಎಸ್ಪಿ ಕಚೇರಿ ಎದುರು ಬೃಹತ್ ಹೋರಾಟ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಎಚ್ಚರಿಸಿದೆ.
ಈ ವೇಳೆ ಹಿರಿಯರಾದ ಪುಡಿಯನ್ನು ಕರಿಗಾರ, ಕರಿಯಪ್ಪ ಬಿದರಿ, ರಾಜು ಬಿದರಿ, ಕಲ್ಲಪ್ಪ ಬಿದರಿ, ಪರಶುರಾಮ್ ಪೂಜಾರಿ, ಶಿವಾನಂದ ಮಾದರ, ಹನುಮಂತ್ ಯಡಹಳ್ಳಿ, ವಿಠ್ಠಲ ಗಡ್ಡದ, ಕರಿಯಪ್ಪ ದಂದರಗಿ, ದರಿಯಪ್ಪ ಬಿದರಿ, ಬೀರೇಶ್ ಪೂಜಾರಿ, ಹಾಗೂ ಊರಿನ ಮುಖಂಡರು ಇದ್ದರು.