ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಪೊಲೀಸ್ ವಸತಿ ಗೃಹಗಳಿಗೆ ಬುಧವಾರ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಅವರು ಅನಿರೀಕ್ಷಿತ ಭೇಟಿ ನೀಡಿ, ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರೊಂದಿಗೆ ಸಂವಾದ ನಡೆಸಿದರು.ಕ್ವಾರ್ಟರ್ಸ್ನ ಪ್ರತಿಯೊಂದು ಗಲ್ಲಿಯಲ್ಲೂ ಕಾಲ್ನಡಿಗೆಯಲ್ಲಿ ಸಂಚರಿಸಿದ ಐಜಿಪಿ ಅಲ್ಲಿ ಆಟವಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಮಕ್ಕಳ ಬಳಿ ತೆರಳಿ, ಯಾವ ತರಗತಿಯಲ್ಲಿ ಓದುತ್ತಿದ್ದೀರಿ ? ನಿಮ್ಮ ಅಭ್ಯಾಸ ಹೇಗಿದೆ ? ಎಂದು ವಿಚಾರಿಸಿದರು. ಅಲ್ಲದೆ, ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆಗಳ ಬಗ್ಗೆಯೂ ಕೆಲಕಾಲ ಮಕ್ಕಳೊಂದಿಗೆ ಬೆರೆತು ಮಾತುಕತೆ ನಡೆಸಿ ಈ ವೇಳೆ ವಸತಿ ಗೃಹಗಳ ದುಸ್ಥಿತಿ ಹಾಗೂ ಮೂಲಸೌಕರ್ಯಗಳ ಕೊರತೆ ಬಗ್ಗೆ ಮಾಹಿತಿ ಪಡೆದರು.
ವಸತಿ ಗೃಹಗಳ ನಿವಾಸಿಗಳು ಐಜಿಪಿ ಅವರ ಮುಂದೆ ತಮ್ಮ ಅಹವಾಲುಗಳನ್ನು ತೋಡಿಕೊಂಡರು. ಮನೆಗಳು ಸೋರುತ್ತಿರುವ ಬಗ್ಗೆ ಹಾಗೂ ವಸತಿಗೃಹದ ಆವರಣದ ರಸ್ತೆಗಳು ಸಂಪೂರ್ಣ ಹಾಳಾಗಿರುವ ಬಗ್ಗೆ ಗಮನ ಸೆಳೆದರು. ನಿವಾಸಿಗಳ ಅಳಲನ್ನು ತಾಳ್ಮೆಯಿಂದ ಆಲಿಸಿದ ಅವರು, ಕೂಡಲೇ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿ ನಗರದಲ್ಲಿ ಹೊಸದಾಗಿ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಪೊಲೀಸ್ ವಸತಿ ಗೃಹಗಳನ್ನು ಹಂತ ಹಂತವಾಗಿ ದುರಸ್ತಿಗೊಳಿಸಲು ಕ್ರಮ ವಹಿಸಲಾಗುವುದು ಎಂದರು. ಇದಕ್ಕೂ ಮುನ್ನ ನಗರದ ಗ್ರಾಮೀಣ ಠಾಣೆ ಪರಿಶೀಲಿಸಿದರು. ಡಿವೈಎಸ್‌ಪಿ ಸೈಯದ್ ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐಗಳಾದ ಅನಿಲ ಕುಂಬಾರ, ಗಂಗಾಧರ ಪೂಜಾರಿ ಸೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.