ಕನ್ನಡಪ್ರಭ ವಾರ್ತೆ ದಾವಣಗೆರೆ
ಈ ವೇಳೆ ಮಾತನಾಡಿದ ಅಖಿಲ ಭಾರತೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು, ಶಾಮನೂರು ಶಿವಶಂಕರಪ್ಪನವರು ಕೇವಲ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಂತಿರಲಿಲ್ಲ. ದೇಶದ ರಾಜಕಾರಣದಲ್ಲಿ ಅಚ್ಚಳಿಯದ ಹೆಸರು. ಅಭಿವೃದ್ಧಿ ಕಾರ್ಯಗಳು ಅಜರಾಮರ. ಮುಂದಿನ ಪೀಳಿಗೆಯೂ ಮಾತನಾಡುವಂತ ವ್ಯಕ್ತಿತ್ವ, ಬದುಕಿದ ರೀತಿ, ಆದರ್ಶಗಳು, ಸಾಮಾಜಿಕ ಕಳಕಳಿ, ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದ ಅಪ್ರತಿಮ ನಾಯಕ. ಅವರನ್ನು ಕಳೆದುಕೊಂಡ ದೇಶ ಮತ್ತು ಕರ್ನಾಟಕ ರಾಜ್ಯ ಬಡವಾಗಿದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದೇ ಶಾಮನೂರು ಶಿವಶಂಕರಪ್ಪರ ಅಭಿವೃದ್ಧಿ, ದೂರದೃಷ್ಟಿತ್ವದ ಕಾರ್ಯಕ್ರಮಗಳು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಶಾಮನೂರು ಶಿವಶಂಕರಪ್ಪ ಅವರು ಕಟ್ಟಿದ ಸಾಮ್ರಾಜ್ಯವನ್ನು ಮತ್ತೆ ಯಾರೂ ಕಟ್ಟಲು ಸಾಧ್ಯವಿಲ್ಲ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದವರಿಗೂ ನ್ಯಾಯ ಕೊಟ್ಟ ಧೀಮಂತ ನಾಯಕ ಎಂದು ತಿಳಿಸಿದರು.ಎಲ್ಲರಿಗೂ ಆದರ್ಶ ವ್ಯಕ್ತಿ:
ಶಾಮನೂರು ಶಿವಶಂಕರಪ್ಪರ ರಾಜಕೀಯ, ಬದುಕು ನಮಗೆಲ್ಲರಿಗೂ ಆದರ್ಶ. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯೋಣ. ಎಲ್ಲ ಪಕ್ಷದವರನ್ನು ಸಮಾನವಾಗಿ ಕಾಣುವ ಮೂಲಕ ಅಜಾತಶತ್ರುವೆನಿಸಿಕೊಂಡಿದ್ದರು. ಎಸ್. ಎಸ್. ಅವರ ಸಾವು ಬರಸಿಡಿಲು ಬಡಿದಂತಾಗಿದೆ. ದೇಶದಲ್ಲಿಯೇ ಅತಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆ ಹೊಂದಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಯಾರೂ ಸಾಟಿ ಇಲ್ಲ. ರಾಜಕಾರಣದಲ್ಲಿ ಎಂದಿಗೂ ಅಧಿಕಾರ ಹುಡುಕಿಕೊಂಡು ಹೋದವರಲ್ಲ. ಅವಕಾಶಗಳು ಅವರನ್ನೇ ಅರಸಿ ಬಂದಿದ್ದವು ಎಂದು ಹೇಳಿದರು.ನೂರಾರು ಕೋಟಿ ರು.ಗಳ ಯೋಜನೆ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿ ಯೋಜನೆಗಳನ್ನು ತಂದು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದವರು. ಸ್ಮಾರ್ಟ್ ಯೋಜನೆಯಡಿ ನೂರಾರು ಕೋಟಿ ರೂಪಾಯಿ ಯೋಜನೆ ಕೈಗೊಂಡು ಸಾಕಾರಗೊಳಿಸಿದ ಧೀಮಂತ ನಾಯಕ. ಇಂದು ಅವರ ಅಗಲಿಕೆಯಿಂದ ಇಡೀ ದಾವಣಗೆರೆಯೇ ಕಂಬನಿ ಮಿಡಿಯುತ್ತಿದೆ. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಅಶ್ರುತರ್ಪಣ ಸಲ್ಲಿಸಿದ್ದಾರೆ. ಇಂಥ ನಾಯಕ ಮತ್ತೆ ಹುಟ್ಟಿ ಬರುವುದಿಲ್ಲ. ಅಷ್ಟು ಸಾಧನೆ ಮಾಡಿದವರು ಎಂದ ಅವರು, ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.ಈ ವೇಳೆ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿವೇಕ್ ಯಾವಗಲ್, ರಂಜಿತ್, ರಾಜ್ಯ ಕಾರ್ಯದರ್ಶಿಗಳು ಮತ್ತು ಇತರರು ಹಾಜರಿದ್ದರು.