ಬೆಂಗಳೂರು : ಎಸ್ಸೆಸ್ಸೆಲ್ಸಿ ‘ಪರೀಕ್ಷೆ 2’ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 2,23,293 ವಿದ್ಯಾರ್ಥಿಗಳ ಪೈಕಿ 69,275 ಮಂದಿ ಉತ್ತೀರ್ಣರಾಗುವ ಮೂಲಕ ಶೇ.31.02 ರಷ್ಟು ಫಲಿತಾಂಶ ಬಂದಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಮಂಡಳಿಯು ಬುಧವಾರ ಬೆಳಗ್ಗೆ 11.30ಕ್ಕೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಹೇಳಿತ್ತಾದರೂ ತಾಂತ್ರಿಕ ಕಾರಣಗಳಿಂದ ಸುಮಾರು ಒಂದು ಗಂಟೆ ತಡವಾಗಿ ಫಲಿತಾಂಶ ಜಾಲತಾಣದಲ್ಲಿ ಲಭ್ಯವಾಯಿತು. ಫಲಿತಾಂಶದ ಅಂಕಿ ಅಂಶಗಳನ್ನು ಮಂಡಳಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಈ ಬಾರಿಯ ಪರೀಕ್ಷೆ-2ರಲ್ಲಿ ಗಂಡು ಮಕ್ಕಳು ಹಾಗೂ ಗ್ರಾಮೀಣ ಮಕ್ಕಳು ಮೇಲುಗೈ ಸಾಧಿಸಿದ್ದಾರೆ. ಉತ್ತೀರ್ಣರಾಗಿರುವ ಒಟ್ಟು 69,275 ವಿದ್ಯಾರ್ಥಿಗಳಲ್ಲಿ 38,820 ಮಂದಿ ಗಂಡು ಮಕ್ಕಳು ಮತ್ತು 30,455 ಹೆಣ್ಣು ಮಕ್ಕಳು ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ 27,955 ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ 41,320 ಮಕ್ಕಳು ಉತ್ತೀರ್ಣರಾಗಿದ್ದಾರೆ.
ಉಳಿದಂತೆ ಸರ್ಕಾರಿ ಶಾಲೆಗಳಲ್ಲಿನ ಶೇ.29.43, ಅನುದಾನಿತ ಶಾಲೆಗಳ ಶೇ.28.71 ಮತ್ತು ಅನುದಾನರಹಿತ ಖಾಸಗಿ ಶಾಲೆಗಳ ಶೇ. 38.21 ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಸ್ಕ್ಯಾನ್ ಕಾಪಿಗೆ ಅರ್ಜಿ ಜು.15 ಕೊನೆ ದಿನ:
ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಛಾಯಾ ಪ್ರತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜು.10ರಿಂದ 15ರವರೆಗೆ ಅವಕಾಶ ನೀಡಲಾಗಿದೆ. ಛಾಯಾ ಪ್ರತಿ ಪಡೆದ ಬಳಿಕ ಅಂಕ ಎಣಿಕೆಯಲ್ಲಿ ವ್ಯತ್ಯಾಸ ಅಥವಾ ಮೌಲ್ಯಮಾಪನದಲ್ಲಿ ಯಾವುದೇ ಲೋಪವಾಗಿರುವುದು ಕಂಡು ಬಂದರೆ ಅಂಕ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಜು.13ರಿಂದ 18 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರು ಶುಲ್ಕ ಪಾವತಿಸಲು ಜು.19 ಕೊನೆಯ ದಿನ ಎಂದು ಮಂಡಳಿ ತಿಳಿಸಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ-3ಕ್ಕೆ ನೋಂದಣಿ ಆರಂಭ
ಎಸ್ಸೆಸ್ಸೆಲ್ಸಿ ಪರೀಕ್ಷೆ 2ರ ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆ-3ರ ವೇಳಾಪಟ್ಟಿ ಪ್ರಕಟಿಸಿದ್ದು, ನೋಂದಣಿಗೆ ಜು.10ರಿಂದ 17ರವರೆಗೆ ಕಾಲಾವಕಾಶ ನೀಡಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ-3 ಅನ್ನು ಆಗಸ್ಟ್ 2ರಿಂದ 9ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ 1 ಮತ್ತು 2 ರಲ್ಲಿ ಅನುತ್ತೀರ್ಣಗೊಂಡಿರುವ, ಉತ್ತೀರ್ಣರಾಗಿದ್ದರೂ ಫಲಿತಾಂಶವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ-3ಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಪರೀಕ್ಷೆಯ ವಿಷಯವಾರು ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.