ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಿಂದುಳಿದ ಸಮುದಾಯ ಎಸ್ಎಸ್‌ಕೆ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಮಾಡಬೇಕು ಎಂದು ಸಮಾಜದ ಅಧ್ಯಕ್ಷ ಗಣಪತಿಸಾ ದಾನಿ ಒತ್ತಾಯಿಸಿದ್ದಾರೆ.ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 10 ರಿಂದ 12 ಲಕ್ಷ ಜನಸಂಖ್ಯೆ ಇರುವ ನಮ್ಮ ಸಮಾಜದವರು, ಸಾವಜಿ ಹೋಟೆಲ್, ಇಡ್ಲಿ ಸೆಂಟರ್, ಮುದ್ರಣ, ಬುಕ್ ಬೈಂಡಿಂಗ್, ಬಟ್ಟೆ ವ್ಯಾಪಾರ ಸೇರಿದಂತೆ ಇತರ ವ್ಯಾಪಾರ ವಹಿವಾಟು ಮಾಡುತ್ತಾ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದಾರೆ. ಹಿಂದುಳಿದ ಸಮಾಜದ ಆಗಿದ್ದರಿಂದ ಆರ್ಥಿಕವಾಗಿ ಹಿಂದೆ ಉಳಿದಿದ್ದಾರೆ .ಈ ಹಿನ್ನೆಲೆಯಲ್ಲಿ ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಮಾಡುವಂತೆ ಸರ್ಕಾರವನ್ನು ಒತ್ತಾಯ ಮಾಡಲಾಗಿದೆ ಎಂದರು.
ನಾಗರಾಜ ನಗರಿ ಮಾತನಾಡಿ, ಈಗಾಗಲೇ ನಿಗಮ ಮಂಡಳಿ ಸೇರಿ ಇತರ ಸಮಸ್ಯೆ ಬಗೆ ಹರಿಸುವಂತೆ ಸಿಎಂಗೆ ಹಾಗೂ ಇತರೆ ಜನಪ್ರತಿನಿಧಿಗೆ ಮನವಿ ಸಲ್ಲಿಸಲಾಗಿದೆ. ಬೆಳಗಾವಿ ಅಧಿವೇಶನ ಸಮಯದಲ್ಲಿ ಹೋರಾಟ ಸಹ ಮಾಡಲಾಗಿದೆ. ಆದರೂ ಸರ್ಕಾರ ಗಮನ ಹರಿಸುತ್ತಿಲ್ಲ ಎಂದರು. ಗುಳೇದಗುಡ್ಡ ಅಧ್ಯಕ್ಷ ಪರಶುರಾಮಸಾ ಪವಾರ ಮಾತನಾಡಿ, ಸಮಾಜ ಅಭಿವೃದ್ಧಿ ಪಡಿಸಲು ರಾಜ್ಯದ್ಯಂತ ಸಂಚಾರ ಮಾಡಿ, ಸಂಘಟನೆ ಮಾಡಲಾಗಿದೆ. ಜ.20ರಂದು ಗುಳೇದಗುಡ್ಡ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಮಾಜದ ಮುಖಂಡರು ಹಾಗೂ ಪ್ರಮುಖರು ಭಾಗವಹಿಸಲಿದ್ದು, ಹೋರಾಟದ ಮುಂದಿನ ರೂಪುರೇಷೆಗಳನ್ನು ಚಿಂತನೆ ಮಾಡಲಾಗುವುದು. ಸರ್ಕಾರ ನಮ್ಮ ಸಮಾಜದ ಅಭಿವೃದ್ಧಿ ನಿಗಮ ಸೇರಿದಂತೆ ಇತರ ಯೋಜನೆಯನ್ನು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.ಇಡೀ ರಾಜ್ಯದ್ಯಂತ ಸಮಾಜದ ಸಂಘಟನೆ ಮಾಡುತ್ತಿದ್ದು, ಸರ್ಕಾರ ನಮ್ಮ ಸಮಾಜದ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಜೀವ ಖಟವಟೆ, ರವಿ ದಾಮಜಿ, ತುಳಜಣಸಾ ದಾನಿ ಸೇರಿದಂತೆ ಇತರ ಪ್ರಮುಖರು ಇದ್ದರು.