ಕನ್ನಡಪ್ರಭ ವಾರ್ತೆ ಬೇಲೂರು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬೇಲೂರು ತಾಲೂಕು ಹಾಸನ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದೆ. ಶೇ ೧೦೦ ರಷ್ಟು ಫಲಿತಾಂಶವನ್ನು ೧೩ ಪ್ರೌಢಶಾಲೆಗಳು ಪಡೆದುಕೊಂಡಿದ್ದು, ಪಟ್ಟಣದ ಸರ್ವೋದಯ ವಿದ್ಯಾಸಂಸ್ಥೆಯ ಅನನ್ಯಗೌಡ ೬೨೫ ಕ್ಕೆ ೬೨೩ ಅಂಕಗಳನ್ನು ಪಡೆದು ಬೇಲೂರು ತಾಲೂಕಿಗೆ ಪ್ರಥಮ ಸ್ಥಾನ ತಂದಿದ್ದಾರೆ. ಅಲ್ಲದೇ ಬೇಲೂರು ತಾಲೂಕು ಶೇ. ೮೬.೬೦ ಫಲಿತಾಂಶ ಪಡೆದಿದೆ ಎಂದು ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ತಿಳಿಸಿದ್ದಾರೆ.ತಾಲೂಕಿನ ೫೭ ಪ್ರೌಢಶಾಲೆಗಳಿಂದ ೧೯೪೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇಂದು ಪ್ರಕಟವಾದ ಫಲಿತಾಂಶದಲ್ಲಿ ೧೯೧೯ ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ. ೫೭ ಶಾಲೆಗಳಲ್ಲಿ ಶೇ. ೧೩ ಶಾಲೆಗಳು, ಶೇ ೧೦೦ ರಷ್ಟು ಫಲಿತಾಂಶವನ್ನು ಪಡೆದಿವೆ. ತಾಲೂಕಿಗೆ ಸರ್ವೋದಯ ಶಾಲೆಯ ಅನನ್ಯಗೌಡ ೬೨೫ ಕ್ಕೆ ೬೨೩ ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಪೂರ್ಣಪ್ರಜ್ಞ ಶಾಲೆಯ ಕವನ ೬೨೫ ಕ್ಕೆ ೬೨೦ ಅಂಕಗಳ ಮೂಲಕ ಪಡೆದಿದ್ದಾಳೆ, ಇನ್ನು ತೃತೀಯ ಸ್ಥಾನವನ್ನು ಇದೇ ಶಾಲೆಯ ಅಮನ್ ಮತ್ತು ಪದ್ಮನಿ ವಿದ್ಯಾರ್ಥಿಗಳು ೬೨೫ ಕ್ಕೆ ೬೧೮ ಅಂಕಗಳ ಮೂಲಕ ಪಡೆದಿದ್ದಾರೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿ ವರ್ಗ ಮತ್ತು ಮುಖ್ಯಶಿಕ್ಷಕರು, ಸಹಶಿಕ್ಷಕರು ಮತ್ತು ಪೋಷಕರಿಗೆ ವಿಶೇಷವಾಗಿ ಅಭಿನಂದನೆಗಳನ್ನು ತಿಳಿಸಲಾಗುತ್ತದೆ ಎಂದರು.
೨೦೨೩-೨೪ ನೇ ಸಾಲಿನಲ್ಲಿ ಉತ್ತಮ ಫಲಿತಾಂಶಕ್ಕೆ ಗುರಿ ೪೦ ಎಂಬ ಎರಡು ಸರಣಿ ಪುಸ್ತಕ ಬಿಡುಗಡೆ, ಪ್ರತಿ ಪರೀಕ್ಷೆಯಲ್ಲಿ ಟಾಪ್ ಟೆನ್ ಪ್ರೋತ್ಸಾಹದಾಯಕ ಬಹುಮಾನ, ತಾಲೂಕು ಹಂತದಲ್ಲಿ ಸರಣಿ ಪರೀಕ್ಷೆಗಳು, ರಾತ್ರಿ ವೇಳೆ ವಿದ್ಯಾರ್ಥಿಗಳ ಮನೆ-ಮನೆಗೆ ಭೇಟಿ ನೀಡಿ ಅವರ ವ್ಯಾಸಂಗ ಪರಿಶೀಲನೆ ಮತ್ತು ಮಾಗದರ್ಶನ, ವಿಜ್ಞಾನ ಚಿತ್ರಗಳು ಮತ್ತು ಗಣಿತದ ಸೂತ್ರಗಳನ್ನು ಒಳಗೊಂಡ ಪುಸ್ತಕಗಳು ಹೀಗೆ ಹತ್ತಾರು ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಅರಿವು ಉಪಯುಕ್ತವಾಗಿದೆ. ಜನಪ್ರತಿನಿಧಿಗಳು, ದಾನಿಗಳು, ಬೇಲೂರಿನ ಶಾಸಕರು ಸೇರಿ ಸರ್ವರಿಗೆ ಅಭಿನಂದನೆ ಸಲ್ಲಿಸಿದರು.