ಬಳ್ಳಾರಿ: ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು 64 ಕೇಂದ್ರಗಳಲ್ಲಿ ಶುಕ್ರವಾರ ಶುರುಗೊಂಡಿದ್ದು, ವಿದ್ಯಾರ್ಥಿಗಳು ಮೊದಲ ಭಾಷಾ ಪರೀಕ್ಷೆ ಎದುರಿಸಿದರು. ಯಾವುದೇ ಡಿಬಾರ್ ಪ್ರಕರಣಗಳು ನಡೆದಿಲ್ಲ ಎಂದು ಡಿಡಿಪಿಐ ಉಮಾದೇವಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಈ ಬಾರಿಯ ಪರೀಕ್ಷೆಗೆ ಜಿಲ್ಲೆಯ 320 ಪ್ರೌಢಶಾಲೆಗಳ 23,524 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಈ ಪೈಕಿ 411 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.ಕಳೆದ ಬಾರಿಯಂತೆ ಈ ಸಲವೂ ಸಹ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೇರಾ ಅಳವಡಿಸಲಾಗಿತ್ತು. ಬೇಸಿಗೆ ಹಿನ್ನೆಲೆಯಲ್ಲಿ ಎಲ್ಲ ಕೇಂದ್ರಗಳಲ್ಲೂ ಕುಡಿವನೀರು, ಫ್ಯಾನ್ ವ್ಯವಸ್ಥೆಯಿತ್ತು. ಕೇಂದ್ರಗಳ ಮುಂದೆ ಶಾಮಿಯಾನ ಹಾಕಲಾಗಿತ್ತು. ಪರೀಕ್ಷೆಯಲ್ಲಿ ನಕಲು ನಡೆಯದಂತೆ ನಿಗಾ ವಹಿಸಲು ಪರೀಕ್ಷಾ ಮೇಲ್ವಿಚಾರಣಾ ತಂಡ ರಚಿಸಲಾಗಿತ್ತು. ಕೇಂದ್ರಗಳ ಸುತ್ತಮುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಇತ್ತು. ಹೀಗಾಗಿ ಎಲ್ಲೂ ಸಮಸ್ಯೆಯಾಗಿಲ್ಲ. ಎಲ್ಲ ಕೇಂದ್ರಗಳಲ್ಲೂ ಪರೀಕ್ಷೆಗಳು ಸುಗಮವಾಗಿ ನಡೆದಿವೆ ಎಂದು ಡಿಡಿಪಿಐ ಉಮಾದೇವಿ ತಿಳಿಸಿದರು.
ವಿದ್ಯಾರ್ಥಿಗಳ ಉತ್ಸಾಹ:ಮೊದಲ ದಿನ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಪೋಷಕರ ಜತೆ ಪರೀಕ್ಷಾ ಕೇಂದ್ರಗಳಿಗೆ ತೆರಳಿದರು. ಕೆಲವು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಆತಂಕ ಕಂಡು ಬಂದರೆ ಬಹುತೇಕರು ಸಂಭ್ರಮದಿಂದಲೇ ಪರೀಕ್ಷಾ ಕೇಂದ್ರಗಳಿಗೆ ತೆರಳುವ ದೃಶ್ಯಗಳು ಕಂಡು ಬಂದವು. ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದಂತೆಯೇ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು. ಕೆಲವೆಡೆ ವಿದ್ಯಾರ್ಥಿಗಳಿಗೆ ಹೂಗುಚ್ಛನೀಡಿ ಪರೀಕ್ಷಾ ಕೇಂದ್ರಕ್ಕೆ ಬರ ಮಾಡಿಕೊಳ್ಳುವುದು ಕಂಡು ಬಂತು. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ಹಸನ್ಮುಖದಿಂದ ಪರೀಕ್ಷಾ ಕೇಂದ್ರದಿಂದ ಹೊರ ಬಂದರು.
ಮಕ್ಕಳನ್ನು ಮನೆಗೆ ಕರೆದೊಯ್ಯಲು ಪೋಷಕರು ಪರೀಕ್ಷಾ ಕೇಂದ್ರದ ಮುಂದೆ ಜಮಾಯಿಸಿದ್ದರು. ಪ್ರಶ್ನೆಪತ್ರಿಕೆ ಕಠಿಣವಾಗಿರಲಿಲ್ಲ. ಸುಲಭವಾಗಿತ್ತು. ಹೀಗಾಗಿ ನಿಗದಿ ತ ಸಮಯದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದೆವು ಎಂದು ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದರು.ಶುಕ್ರವಾರ ಜರುಗಿದ ಮೊದಲ ಭಾಷಾ ಪರೀಕ್ಷೆಯಲ್ಲಿ ಕನ್ನಡ, ಹಿಂದಿ, ಉರ್ದು, ಇಂಗ್ಲೀಷ್, ಸಂಸ್ಕೃತ ಪರೀಕ್ಷೆಗಳು ನಡೆದಿದ್ದು, ಈ ಪೈಕಿ ಭಾಗಶಃ ವಿದ್ಯಾರ್ಥಿಗಳು ಮೊದಲ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದವರಾಗಿದ್ದರು. ಮಾ. 24 ರಂದು ಗಣಿತ ಪರೀಕ್ಷೆ ಜರುಗಲಿದೆ.