ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲೆಯ 129 ಕೇಂದ್ರಗಳಲ್ಲಿ ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೊಠಡಿಗೂ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಪರೀಕ್ಷಾ ಕೊಠಡಿಗೆ 24 ವಿದ್ಯಾರ್ಥಿಗಳಂತೆ ಪ್ರತಿ ವಿದ್ಯಾರ್ಥಿಗೂ ಡೆಸ್ಕ್ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಅಕ್ರ ಮಗಳನ್ನು ತಡೆಗಟ್ಟಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಮುಖ್ಯ ಅಧಿಕ್ಷಕರು, ಕಸ್ಟೋಡಿಯನ್, ಜಾಗೃತ ದಳ, ಪೊಲೀಸ್ ಎಸ್ಕಾರ್ಟ್, ಕೊಠಡಿ ಮೇಲ್ವಿಚಾರಕರು ಹಾಗೂ ಡಿ.ದರ್ಜೆ ನೌಕರರನ್ನು ನಿಯೋಜಿಸಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾ ಹಂತ ಹಾಗೂ ತಾಲೂಕು ಹಂತದಲ್ಲಿ ಜಾಗೃತದಳ ಹಾಗೂ ಸ್ಥಾನಿಕ ಜಾಗೃತ ದಳ ಸಿಬ್ಬಂದಿ ನೇಮಿಸಬೇಕೆಂದರಲ್ಲದೆ, ಪೊಲೀಸ್ ರಕ್ಷಣೆಯೊಂದಿಗೆ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಬಂಡಲ್‌ಗ ಳನ್ನು ಸಾಗಿಸಬೇಕು ಎಂದು ನಿರ್ದೇಶಿಸಿದರು.ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುವಾಗುವಂತೆ ಕೊಠಡಿಗಳಲ್ಲಿ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ ಇರಬೇಕು. ಯಾವು ದೇ ಗೊಂದಲ, ಭಯ ಉಂಟಾಗದಂತೆ ಪರೀಕ್ಷಾ ಆತಂಕವನ್ನು ದೂರ ಮಾಡಬೇಕು. ಯಾವುದೇ ಲೋಪದೋಷ ವಿಲ್ಲದೆ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದರಲ್ಲದೆ, ಪರೀಕ್ಷೆ ಸಂದರ್ಭದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಬೇಕೆಂದು ಬೆಸ್ಕಾಂ ಇಲಾಖೆಗೆ ಸೂಚನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ತುಮಕೂರು ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ರಂಗಧಾಮಯ್ಯ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಅವರು ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಸರ್ಕಾರಿ, ವಸತಿ ಶಾಲೆ, ಅನುದಾನಿತ, ಅನುದಾನರಹಿತ ಸೇರಿದಂತೆ ಒಟ್ಟು 752 ಶಾಲೆಗಳಿದ್ದು, 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 36642 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ನಿಗಧಿತ ಸಮಯದೊಳಗಾಗಿ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ೪೮ ಮಾರ್ಗಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮರಿಯಪ್ಪ, ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮುತ್ತ ನಿಷೇದಾಜ್ಞೆ ಜಾರಿ:ಪರೀಕ್ಷೆಗಳನ್ನು ಸುಸೂತ್ರವಾಗಿ, ಲೋಪದೋಷವಿಲ್ಲದಂತೆ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಮತ್ತ 200 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಆದೇಶಿಸಿದ್ದಾರೆ.
ನಿಷೇಧಾಜ್ಞೆಯು ಮಾರ್ಚ್ 25ರಿಂದ ಏಪ್ರಿಲ್ 6ರ ವರೆಗೆ ಪರೀಕ್ಷಾ ವೇಳಾಪಟ್ಟಿಗೆ ಅನುಗುಣವಾಗಿ ಬೆಳಗ್ಗೆ ೯ರಿಂದ ಸಂಜೆ ೫-೩೦ ಗಂಟೆವರೆಗೆ ಜಾರಿಯಲ್ಲಿರುತ್ತದೆ. ನಿಷೇಧಾಜ್ಞೆಯನ್ವಯ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಮತ್ತು ಬೆರಳಚ್ಚು ಕೇಂದ್ರಗಳನ್ನು ಮುಚ್ಚಬೇಕು. ನಿಷೇಧಾಜ್ಞೆಯು ಜಾರಿಯಲ್ಲಿರುವ ಅವಧಿಯಲ್ಲಿ ಅನಧಿಕೃತ ವ್ಯಕ್ತಿಗಳು ಯಾರೂ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವ ಅನಧಿಕೃತ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳು ಎಂದು ಕಂಡು ಬಂದಲ್ಲಿ ದಂಡಪ್ರಕ್ರಿಯಾ ಸಂಹಿತೆ ೧೯೭೩ರ ಸೆಕ್ಷನ್ ೧೦೭ ಮತ್ತು ೧೧೦ರಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸೂಚಿಸಿದ್ದಾರೆ.