ಕನ್ನಡಪ್ರಭ ವಾರ್ತೆ ಮಣಿಪಾಲವೇದಗಳಲ್ಲಿ ಉಲ್ಲೇಖಿಸಲ್ಪಟ್ಟ ಸರಸ್ವತಿ ನದಿ ಪಾತ್ರವು ಉಪಗ್ರಹ ಚಿತ್ರಗಳ ಮೂಲಕ ಲಭ್ಯವಿದ್ದು, ಅದರ ಪುನಃಶ್ಚೇತನದ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಜಗದೀಶ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಮತ್ತು ಮಣಿಪಾಲ ರೋಟರಿ ಜಂಟಿಯಾಗಿ ಆಯೋಜಿಸಿದ್ದ ಗೋಷ್ಠಿಯಲ್ಲಿ ‘ಸರಸ್ವತಿ ರಿವರ್ ವಾಟರ್ ಆ್ಯಂಡ್ ಎನ್ವಿರಾನ್ಮೆಂಟ್’ ವಿಷಯದ ಕುರಿತು ಮಾತನಾಡಿದರು.
ನಾಲ್ಕು ಸಾವಿರ ವರ್ಷಗಳ ಹಿಂದೆ, ಭೌಗೋಳಿಕ ಕಾರಣಗಳಿಗಾಗಿ ತನ್ನ ಪಾತ್ರವನ್ನು ಬದಲಾಯಿಸಿದ ಸರಸ್ವತಿ ನದಿಯು ಇಂದು ಗುಪ್ತಗಾಮಿನಿಯಾಗಿ ಹರಿದು ಪ್ರಯಾಗದ ತ್ರಿವೇಣಿ ಸಂಗಮವನ್ನು ಸೇರುತ್ತದೆ ಎಂದು ತಮ್ಮ ಸಂಶೋಧನೆಗಳನ್ನು ಉಲ್ಲೇಖಿಸಿ ಪ್ರತಿಪಾದಿಸಿದರು.ಇಂದು ಒಣಗಿದಂತೆ ಕಾಣುವ ಈ ಪ್ರಮುಖ ನದಿಯ ಪುನಃಶ್ಚೇತನವು, ರಾಜಸ್ಥಾನದ ಮರುಭೂಮಿಯಲ್ಲಿ ನೀರುಣಿಸುವುದಕ್ಕೆ ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಕಾರ್ಯಕ್ರಮವನ್ನು ಸಂಯೋಜಿಸಿದರು. ರೋಟರಿಯ ಸಿಎ ದೇವಾನಂದ್, ಡಾ ಮನೋಜ್ ನಾಗಸಂಪಿಗೆ, ಸಚ್ಚಿದಾನಂದ ನಾಯಕ್, ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.* ಹವಾಮಾನ ಬದಲಾವಣೆ: ಉಪನ್ಯಾಸಇತ್ತೀಚೆಗೆ ಜಿಸಿಪಿಎಎಸ್‌ನಲ್ಲಿ ‘ಕ್ಲೈಮೆಟ್ ಚೇಂಜ್ ಇನ್ ದ ಈಸ್ಟರ್ನ್ ಹೈಲ್ಯಾಂಡ್’ ಎಂಬ ಬಗ್ಗೆ ಮಾಹೆಯ ಪ್ರಾಧ್ಯಾಪಕಿ ಡಾ.ಮೈತ್ರೇಯಿ ಮಿಶ್ರಾ ಅವರಿಂದ ಉಪನ್ಯಾಸ ನಡೆಯಿತು. ಹವಾಮಾನ ಬದಲಾವಣೆಯ ವಿದ್ಯಮಾನವು, ಇತರ ವಿಪತ್ತು ಪರಿಣಾಮಗಳ ಜೊತೆಗೆ ಸಾಮಾಜಿಕ - ಆರ್ಥಿಕ ಅಸಮಾನತೆಗಳನ್ನು ಹೆಚ್ಚಿಸುತ್ತದೆ ಎಂದವರು ಹೇಳಿದರು.ಹವಾಮಾನ ಬದಲಾವಣೆಯು ಯಾವುದೇ ಭೇದ ಭಾವವಿಲ್ಲದೆ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಇದು ಆಹಾರ ಮತ್ತು ನೀರಿನಂತಹ ಜೀವನದ ಮೂಲಭೂತ ಅಗತ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರಿ, ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ವರ್ಧಿಸುತ್ತದೆ. ಈ ವಿದ್ಯಮಾನವನ್ನು ವಿಶೇಷವಾಗಿ ಒಡಿಸ್ಸಾದಲ್ಲಿ ಕಾಣಬಹುದಾಗಿದೆ ಎಂದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಕಾರ್ಯಕ್ರಮವನ್ನು ನಿರ್ವಹಿಸಿದರು. ತನಿಷ್ಕಾ ಕೋಟ್ಯಾನ್ ಕಾರ್ಯಕ್ರಮವನ್ನು ಸಂಯೋಜಿಸಿದರು.