ಕನ್ನಡಪ್ರಭ ವಾರ್ತೆ ಮೈಸೂರುವೈಜ್ಞಾನಿಕ ಚಿಂತನೆ ಬದುಕಿನ ಭಾಗವಾಗಿರಬೇಕು ಎಂದು ಮಂಡ್ಯ ಜಿಪಂ ಸಿಇಒ ಕೆ.ಆರ್. ನಂದಿನಿ ಅಭಿಪ್ರಾಯಪಟ್ಟರು.ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ವಿಜ್ಞಾನ ವಿಭಾಗ ಆಯೋಜಿಸಿದ್ದ ರಾಜ್ಯಮಟ್ಟದ ವಿಸ್ತಾರ 2026 ಫೆಸ್ಟ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ವೈಜ್ಞಾನಿಕ ಚಿಂತನೆ ಬದುಕಿನ ಭಾಗವಾಗಿರಬೇಕು. ಸಮಾಜದಲ್ಲಿ ಅವೈಜ್ಞಾನಿಕವಾದ ನಂಬಿಕೆಗಳನ್ನು ನಿವಾರಿಸಲು ವಿಜ್ಞಾನ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಕಂಡುಕೊಳ್ಳಿ. ಮಾನವನ ಜೀವನದ ಅನುಭವವನ್ನು ತಂತ್ರಜ್ಞಾನ ತುಂಬಲು ಸಾಧ್ಯವಿಲ್ಲ ಎಂದು ತಿಳಿಸಿದರು.ಬಹುಮಾನ ವಿತರಿಸಿದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಮಾತನಾಡಿ, ಇಂತಹ ಉತ್ಸವಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ದೃಷ್ಟಿ ಬೆಳೆಸುತ್ತವೆ. ಫಲಿತಾಂಶಗಳನ್ನು ನಿರೀಕ್ಷಿಸದೆ ಶ್ರದ್ಧೆಯಿಂದ ಭಾಗವಹಿಸಬೇಕು. ರಾಜ್ಯಮಟ್ಟದ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಕೆ. ಮಂಟೇಲಿಂಗು ಮಾತನಾಡಿ, ಜೀವನ ಉತ್ತಮಗೊಳ್ಳಲು ವಿಜ್ಞಾನ ಮತ್ತು ತಂತ್ರಜ್ಞಾನದ ಗುರುತರ ಪಾತ್ರವಿದೆ ಎಂದರು.ವಿಜ್ಞಾನವಿಲ್ಲದೆ ಯಾವುದಕ್ಕೂ ಅರ್ಥವಿಲ್ಲ. ವಿದ್ಯಾರ್ಥಿಗಳ ಜೀವನದಲ್ಲಿ ಕುತೂಹಲ ಬಹಳ ಮುಖ್ಯ ಎಂಬುದನ್ನು ಈ ಫೆಸ್ಟ್ ಸಾಧಿಸಿದೆ ಎಂದು ತಿಳಿಸಿದರು.ವೇದಿಕೆಯಲ್ಲಿ ಪ್ರಾಂಶುಪಾಲ ಡಾ. ರೇಚಣ್ಣ, ವಿಸ್ತಾರ ಫೆಸ್ಟ್ಸಂಚಾಲಕ ಡಿ. ಬಿ. ಯಶ್ವಂತ್, ಸಹ ಸಂಚಾಲಕಿ ರಾಜೇಶ್ವರಿ ಇದ್ದರು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ವಂದನಾ ವಿವೇಕ್ ವಿಸ್ತಾರ -2026 ಫೆಸ್ಟ್ ನ ವರದಿ ಮಂಡಿಸಿದರು.ದಿಶಾ ಮತ್ತು ತಂಡದವರು ಪ್ರಾರ್ಥಿಸಿದರು. ತೃಪ್ತಿ ಸ್ವಾಗತಿಸಿದರು. ಕೆ.ಎ. ಇಂಚರ ವಂದಿಸಿದರು. ಎಸ್. ಅಪರಂಜಿ ಮತ್ತು ಚರಿಷ್ಮ ನಿರೂಪಿಸಿಸಿದರು.