ಕನ್ನಡಪ್ರಭ ವಾರ್ತೆ ಕುಣಿಗಲ್
ಪಾರಂಪರಿಕ ಕುದುರೆ ಫಾರಂ ಉಳಿವಿಗಾಗಿ ಹೋರಾಟ ಮಾಡಲು ಪ್ರತಿ ಗ್ರಾಮದಲ್ಲೂ ಸಂಘಟನೆ ಮಾಡುವುದಾಗಿ ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ. ಕುಣಿಗಲ್ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಂಘ ಸಂಸ್ಥೆಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಕರ್ನಾಟಕ ಸರ್ಕಾರ ಕುಣಿಗಲ್ ಕುದುರೆ ಫಾರಂ ಜಾಗಕ್ಕೆ ಬೆಂಗಳೂರಿನ ರೇಸ್ ಕೋರ್ಸ್ ಅನ್ನು ಸ್ಥಳಾಂತರ ಮಾಡಲು 110 ಎಕರೆ ಕುದುರೆ ತಳಿ ಸಂವಧನೆ ಜಾಗವನ್ನು ಬಾಡಿಗೆ ನೀಡುವ ಬಗ್ಗೆ ಸಚಿವ ಸಂಪುಟದ ನಿರ್ಧಾರವನ್ನು ಖಂಡಿಸಿ ಸಭೆ ನಡೆಸಿದರು.ಶ್ರೀಮಂತರ ಐಷಾರಾಮಿ ಮೋಜಿನ ಆಟವಾದ ಕುದುರೆ ಜೂಜನ್ನು ನಮ್ಮ ಕುಣಿಗಲ್ ಪಟ್ಟಣಕ್ಕೆ ತಂದರೆ, ಈ ಭಾಗದ ರೈತಾಪಿ ಜನರು, ಮತ್ತು ಯುವ ಜನಾಂಗ ಜೂಜಿನ ಚಟಕ್ಕೆ ಬಿದ್ದು ಆರ್ಥಿಕ ದಿವಾಳಿಗಳಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ಬೇಕಿದ್ದರೆ ಬೇರೆ ಕಡೆ ಜಮೀನು ಕೊಡಲಿ. ನಮ್ಮ ಐತಿಹಾಸಿಕ ತಾಣವಾದ ಕುದುರೆ ಪಾರಂನಲ್ಲಿ ಕುದುರೆ ಜೂಜು ಕಂಪನಿ ಸ್ಥಾಪಿಸಬಾರದು ಎಂದು ವಿರೋಧ ವ್ಯಕ್ತಪಡಿಸಿದರು.
ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ. ರಂಗನಾಥ್ ಅವರು ತಮ್ಮ ರಿಯಲ್ ಎಸ್ಟೇಟ್ ದಂಧೆ ನಡೆಸಲು ಈ ಜಾಗದಲ್ಲಿ ತುಂಬಾ ದಿನದಿಂದ ಕಾಯುತ್ತಿದ್ದಾರೆ. ರೇಸ್ ಕೋರ್ಸ್ ಹೆಸರಿನಲ್ಲಿ ರಂಗನಾಥ್ ಅವರು ಐಷಾರಾಮಿ ರೆಸಾರ್ಟ್, ಗಾಲ್ಫ್ ಮುಂತಾದ ಚಟುವಟಿಕೆಗಳನ್ನು ಮಾಡಲು ಯೋಜನೆ ರೂಪಿಸಿದ್ದಾರೆ. ಪಶುಸಂಗೋಪನೆ ಇಲಾಖೆಯ ಅಧೀನದಲ್ಲಿರುವ ಕುಣಿಗಲ್ ಕುದುರೆ ಫಾರಂ ನ ಜಾಗವನ್ನು 1964 ಭೂ ಕಂದಾಯ ಅಧಿನಿಯಮದ ಪ್ರಕಾರ ಪಶುಸಂಗೋಪನೆಗೆ ಮಾತ್ರ ಬಳಸಬೇಕು. ಈ ಕಾನೂನನ್ನು ಗಾಳಿಗೆ ತೂರಿ ಇಡೀ ಕುದುರೆ ಫಾರಂ ಜಾಗವನ್ನು ವಾಣಿಜ್ಯ ಉದ್ದೇಶದ ಕಾನೂನು ಬಾಹಿರವಾಗಿ ನೀಲ ನಕ್ಷೆ ತಯಾರಿ ಮಾಡಿಕೊಂಡಿರುವುದು ತಿಳಿದು ಬಂದಿದೆ ಇದನ್ನು ನಮ್ಮ ಹೋರಾಟ ಸಮಿತಿ ಖಂಡಿಸುತ್ತದೆ ಎಂದರು.ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಅವರು ಕುಣಿಗಲ್ ಕುದುರೆ ಫಾರಂ ರೇಸ್ ಕೊರ್ಸ್ ಬರುವುದನ್ನು ಸ್ವಾಗತ ಮಾಡುತ್ತಾ ಇದರಿಂದ ಇಲ್ಲಿನ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂದು ಸುಳ್ಳು ಪ್ರಚಾರ ಮಾಡುವ ಮೂಲಕ ಕುಣಿಗಲ್ ತಾಲೂಕಿನ ಜನರಿಗೆ ದ್ರೋಹ ಮಾಡುತ್ತಿದ್ದಾರೆ.ಈ ರೇಸ್ ಕೊರ್ಸ್ ನಿಂದ ಯಾವುದೇ ಹೊಸ ಉದ್ಯೊಗ ಸೃಷ್ಟಿಯಾಗುವುದಿಲ್ಲ ಬದಲಿಗೆ ಯುವ ಜನಾಂಗ ಜೂಜಿನ ಕೂಪಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ.ಆದ್ದರಿಂದ ಯಾವುದೇ ಕಾರಣಕ್ಕೂ ಇಲ್ಲಿ ರೇಸ್ ಕೋರ್ಸ್ ಸ್ಥಾಪಿಸಲು ನಾವು ಅವಕಾಶ ಕೊಡುವುದಿಲ್ಲ. ಹೈದರಾಲಿ, ಟಿಪ್ಪು ಸುಲ್ತಾನ್ ಅಭಿವೃದ್ಧಿ ಪಡಿಸಿದ ಸುಮಾರು 300 ವರ್ಷಗಳ ಇತಿಹಾಸ ಇರುವ ಈ ಐತಿಹಾಸಿಕ ತಳಿ ಸಂವರ್ಧನಾ ಕೇಂದ್ರವನ್ನು ಯಾವುದೇ ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡಬಾರದು ಇದನ್ನು ಪಾರಂಪರಿಕ ತಾಣವೆಂದು ಘೋಷಣೆ ಮಾಡಬೇಕು. ಕರ್ನಾಟಕ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಕೂಡಲೇ ವಾಪಸ್ ಪಡೆಯಬೇಕು. ಈ ನಿಟ್ಟಿನಲ್ಲಿ ಪಾರಂಪರಿಕ ಕುಣಿಗಲ್ ಕುದುರೆ ಫಾರಂ ಹೋರಾಟ ಸಮಿತಿ ವತಿಯಿಂದ ತಾಲೂಕಿನ ಎಲ್ಲಾ ನಾಗರಿಕರ ಜೊತೆಗೂಡಿ ಪ್ರತಿ ಗ್ರಾಮಕ್ಕೆ ತೆರಳಿ ಜಾಗೃತಿ ಮೂಡಿಸಿ ನಿರಂತರವಾಗಿ ಸಂಘಟಿತ ಹೋರಾಟ ಮಾಡಲಾಗುವುದು ಎಂಬ ನಿರ್ಣಯವನ್ನು ತೆಗೆದುಕೊಂಡರು.ಈ ಸಭೆಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ಬಿ.ಎನ್ ಜಗದೀಶ್, ನಾಗಣ್ಣ ಜಿ.ಕೆ ರೈತ ಸಂಘದ ಆನಂದ್ ಪಟೇಲ್, ಕೆ.ಆರ್ ಎಸ್ ಪಕ್ಷದ ರಘು ಜಾಣಗೆರೆ, ದಲಿತ ಮುಖಂಡರಾದ ರಾಮಲಿಂಗಯ್ಯ , ಸಿದ್ದರಾಜು, ರೈತ ಸಂಘದ ಕರೀಗೌಡ , ವಕೀಲರ ಸಂಘದ ಅಧ್ಯಕ್ಷ ಸಿಂಗಯ್ಯ, ಬಿಜೆಪಿಯ ಸಂತೋಷ್, ಸುರೇಶ್ ದೇವರಾಜು, ಜೆಡಿಎಸ್ ಪಕ್ಷದ ಕೆ.ಎಲ್ ಹರೀಶ್, ಹರೀಶ್ ನಾಯಕ್, ಮಡಿವಾಳ ಸಂಘದ ರಾಜಣ್ಣ , ಸಿಳ್ಳೆ ಖ್ಯಾತ ಸಂಘದ ಲಕ್ಷ್ಮಿ ನರಸಿಂಹಯ್ಯ, ಕಾಡುಗೊಲ್ಲ ಸಂಘದ ಜಯಣ್ಣ , ವಿಜಯ್ ನಿಶಾಂತ್ ವಕೀಲ ಶಿವರಾಮು ಇದ್ದರು.