ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ತಾಲೂಕಿನಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ 14 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಆರಂಭವಾಗಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆಗೆ 27 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪ್ರಥಮ ಭಾಷೆ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 3,256 ವಿದ್ಯಾರ್ಥಿಗಳ ಪೈಕಿ 3,229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.ತಾಲೂಕಿನ ಪ್ರೌಢಶಾಲೆಗಳಿಂದ ಹೊಸದಾಗಿ ಬಾಲಕರು 1921 ಮತ್ತು ಬಾಲಕಿಯರು 1879 ಸೇರಿ ಈ ಬಾರಿ 3800 ವಿದ್ಯಾರ್ಥಿಗಳು ತಾಲೂಕಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಖಾಸಗಿಯಾಗಿ 24 ಬಾಲಕರು, 20 ಬಾಲಕಿಯರು ಸೇರಿ ಒಟ್ಟು 44 ಹಾಗೂ ಪುನಾವರ್ತಿತ 75 ಬಾಲಕರು, 24 ಬಾಲಕಿಯರು ಸೇರಿ 99 ಸೇರಿದಂತೆ ಒಟ್ಟಾರೆಯಾಗಿ 2020 ಬಾಲಕರು, 1923 ಬಾಲಕಿಯರು ಪರೀಕ್ಷೆ ಬರೆಯುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದು, ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ನಗರ ವ್ಯಾಪ್ತಿಯಲ್ಲಿ 5, ಗ್ರಾಮೀಣ ಪ್ರದೇಶದಲ್ಲಿ 9 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲಾ 14 ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಪಂಚಾಯತ್ ಸಿಇಒ ಕಚೇರಿಯಲ್ಲಿನ ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗುತ್ತಿದೆ. ಪರೀಕ್ಷೆ ನಡೆಯುವ ಕೇಂದ್ರದ 200ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಜೊತೆಗೆ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಪರೀಕ್ಷಾ ದಿನಗಳಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಯಾವುದೇ ರೀತಿಯ ಎಸ್.ಟಿ.ಡಿ, ಜೆರಾಕ್ಸ್ ಟೈಪಿಂಗ್ ಮುಂತಾದವುಗಳನ್ನು ತೆರೆಯಲು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳಿಗೆ ಅನಧಿಕೃತ ವ್ಯಕ್ತಿಗಳ ಅಥವಾ ಗುಂಪು ಸೇರದಂತೆ ಪೊಲೀಸ್ ರಕ್ಷಣೆ ಪಡೆಯಲಾಗಿತ್ತು.ಪರೀಕ್ಷೆ ಸುಗಮವಾಗಿ ನಡೆಯಲು ಬೆಸ್ಕಾಂ, ಪೊಲೀಸ್, ಆರೋಗ್ಯ, ಖಜಾನೆ, ಕಂದಾಯ, ಸಾರಿಗೆ ಸೇರಿದಂತೆ ಇತರೆ ಇಲಾಖೆಗಳ ಸಹಾಯ ಪಡೆಯಲಾಗಿತ್ತು. ಪರೀಕ್ಷಾ ಕಾರ್ಯಕ್ಕಾಗಿ ಮಾರ್ಗಾಧಿಕಾರಿಗಳು, ಮೊಬೈಲ್ ಸ್ವಾಧೀನಾಧಿಕಾರಿಗಳು, ಸ್ಥಾನಿಕ ಜಾಗೃತದಳ, ವಿಚಕ್ಷಣ ದಳಗಳಿಗೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ನೇಮಿಸಲಾಗಿತ್ತು.
ಸಿಸಿಟಿವಿ ಕಿತ್ತೆಸೆದ ಕಿಡಿಗೇಡಿಗಳು:ಎಸ್ ಎಸ್ ಎಲ್ ಸಿ ಪರೀಕ್ಷೆ ದಿನವೇ ಕಿಡಿಗೇಡಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಕಿತ್ತೆಸೆಯುವ ಮೂಲಕ ಅವಾಂತರ ಸೃಷ್ಟಿಸಿದ ಘಟನೆ ತಾಲೂಕಿನ ತೂಬಗೆರೆ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಸರ್ಕಾರದ ಆದೇಶದಂತೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ ಕಳೆದ ರಾತ್ರಿ ಕಿಡಿಗೇಡಿಗಳು ಕೊಠಡಿಗಳ ಬಾಗಿಲು ಮುರಿದು ಆರು ಸಿಸಿಟಿವಿ ಕ್ಯಾಮರಾಗಳನ್ನು ಕಿತ್ತೆಸೆದಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಎಬಿ ಬಸವರಾಜ್, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.