ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಳ್ಳಕೆರೆ ತಾಲೂಕಿನಲ್ಲಿ 20 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, 5,472 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಚಿತ್ರದುರ್ಗ ತಾಲೂಕಿನಲ್ಲಿ 22 ಪರೀಕ್ಷಾ ಕೇಂದ್ರಗಳಿದ್ದು, 6,635 ವಿದ್ಯಾರ್ಥಿಗಳು, ಹಿರಿಯೂರಿನ 13 ಕೇಂದ್ರಗಳಲ್ಲಿ 3,677 ವಿದ್ಯಾರ್ಥಿಗಳು, ಹೊಳಲ್ಕೆರೆ ತಾಲೂಕಿನಲ್ಲಿ 8 ಕೇಂದ್ರಗಳಲ್ಲಿ 854 ವಿದ್ಯಾರ್ಥಿಗಳು. ಹೊಸದುರ್ಗ ತಾಲೂಕಿನಲ್ಲಿ 11 ಪರೀಕ್ಷಾ ಕೇಂದ್ರಗಳಲ್ಲಿ 3,195 ವಿದ್ಯಾರ್ಥಿಗಳು ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 8 ಕೇಂದ್ರಗಳಲ್ಲಿ 2,583 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷೆಯ ಪಾವಿತ್ರತೆ ಕಾಪಾಡಲು ಚಿತ್ರದುರ್ಗ ಜಿಪಂ ಕಚೇರಿಯಲ್ಲಿ ಕೇಂದ್ರೀಕೃತ ವೀಕ್ಷಣಾ ಘಟಕ ಸ್ಥಾಪಿಸಿದ್ದು, ಒಟ್ಟು 24 ಅಧಿಕಾರಿ, ಸಿಬ್ಬಂದಿ ಒಳಗೊಂಡ ನೋಡಲ್ ಅಧಿಕಾರಿಗಳು ಮತ್ತು ವೀಕ್ಷಕರ ತಂಡ ರಚಿಸಲಾಗಿದೆ. ಇದರ ಜೊತೆಗೆ ತಾಂತ್ರಿಕ ಸಹಾಯಕರನ್ನು ಕೂಡ ನಿಯೋಜಿಸಲಾಗಿದೆ. ಜಿಪಂ ಸಿಇಒ ಅವರನ್ನು ಕೇಂದ್ರೀಕೃತ ವೀಕ್ಷಣಾ ಘಟಕಕಕ್ಕೆ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.ಒಟ್ಟು 82 ಪರೀಕ್ಷಾ ಕೇಂದ್ರಗಳಲ್ಲಿನ 1,135 ಕೊಠಡಿಗಳಿಗೆ ವೆಬ್ ಕಾಸ್ಟಿಂಗ್‍ಗಾಗಿ ಸಿಸಿಟಿವಿ ಅಳವಡಿಸಲಾಗಿದೆ. ಈ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ವಿತರಿಸಲು ಹಾಗೂ ಉತ್ತರ ಪತ್ರಿಕೆಗಳನ್ನು ಹಿಂಪಡೆದು ಸಂಬಂಧಪಟ್ಟ ಹಂತಕ್ಕೆ ತಲುಪಿಸಲು 35 ಮಾರ್ಗಾಧಿಕಾರಿಗಳನ್ನು ಈಗಾಗಲೆ ನೇಮಕ ಮಾಡಿಕೊಳ್ಳಲಾಗಿದ್ದು, ಈ ತಂಡಕ್ಕೆ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಿಸಿ ಟಿವಿ, ವೆಬ್‍ಕಾಸ್ಟಿಂಗ್ ಸೇರಿದಂತೆ ಅನ್ಯ ವಿಷಯಗಳ ಬಗ್ಗೆ ಅನಗತ್ಯ ಆಲೋಚನೆ ಮಾಡದೆ, ಅಭ್ಯಾಸದ ಕಡೆ, ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯುವತ್ತ ತಮ್ಮ ಗಮನ ಕೇಂದ್ರೀಕರಿಸಬೇಕು. ಯಾವುದೇ ಊಹಾಪೋಹ ಹಾಗೂ ವದಂತಿಗಳಿಗೆ ಕಿವಿಗೊಡದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು, ಜಿಲ್ಲೆಗೆ ಉತ್ತಮ ಫಲಿತಾಂಶ ತರಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಶುಭಕೋರಿದ ಜಿಲ್ಲಾಧಿಕಾರಿ
ಪರೀಕ್ಷೆ ಸಮೀಪಿಸಿತೆಂದು ಆತಂಕ ಬೇಡ, ನಿಮ್ಮಗಳ ದಿನನಿತ್ಯ ಕಾರ್ಯಗಳ ಜೊತೆಗೆ ಓದುವ ಅವಧಿ ಹೆಚ್ಚಿಸಿಕೊಳ್ಳಿ. ಶಿಕ್ಷಣ ಇಲಾಖೆ ನಡೆಸಿರುವ ಅನೇಕ ವಿಷಯ ಸಾಮರ್ಥ್ಯ ಬೆಳೆಸಿಕೊಳ್ಳುವ ಕಾರ್ಯಾಗಾರಗಳು ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳು ನಿಮ್ಮನ್ನು ಸಬಲರನ್ನಾಗಿಸಿವೆ. ನೀವು ಸುಲಭವಾಗಿ ಪರೀಕ್ಷೆಯನ್ನು ಬರೆಯಲು ಸಮರ್ಥರಾಗಿದ್ದೀರಾ ಎಂದು ನಂಬಿದ್ದೇವೆ.