- ರೈತ ಮುಖಂಡರ ಆರೋಪಗಳ ಮೇರೆಗೆ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ । ಶಿಸ್ತುಕ್ರಮ ನಿಶ್ಚಿತ ಎಂದು ಎಚ್ಚರಿಕೆ
ಕಳೆದ ಮಳೆಗಾಲದ ಹಂಗಾಮಿನ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಮಾರಾಟಕ್ಕೆ ನೋಂದಾಯಿಸಿ 3 ತಿಂಗಳಾದರೂ ಖರೀದಿ ಪ್ರಕ್ರಿಯೆ ಕೈಗೊಂಡಿಲ್ಲ ಎಂಬ ದೂರುಗಳ ಮೇರೆಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ರೈತರೊಂದಿಗೆ ಬುಧವಾರ ನಗರದ ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದರು. ಈ ಸಂದರ್ಭ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಗರದ ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ ಬಗ್ಗೆ ರೈತ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಮೆಳ್ಳೆಕಟ್ಟೆ ಎ.ಈ. ನಾಗರಾಜ ಇತರರು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ, ಬೆಳೆಗಾರರ ಸಂಕಷ್ಟದ ಬಗ್ಗೆ ವಿವರಿಸಿದ್ದರು. ಆಗ ರಾಗಿ ಖರೀದಿ ನಡೆಯುತ್ತಿದೆಯೆಲ್ಲಾ ಎಂಬುದಾಗಿ ಡಿಸಿ ಪ್ರಶ್ನಿಸಿದ್ದಾರೆ. ಡಿಸಿ ಮಾತಿಗೆ ರೈತರು ನೀವೇ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿ ಸರ್ ಎಂಬ ಮನವಿಗೆ ತಕ್ಷಣವೇ ಡಿಸಿ ಸ್ಪಂದಿಸಿದರು. ಖರೀದಿ ಕೇಂದ್ರಕ್ಕೆ ಹೊರಟೇಬಿಟ್ಟರು. ಕೇಂದ್ರದ ಬಳಿ ಬಂದಾಗಲೇ ಅಲ್ಲಿನ ಅವ್ಯವಸ್ಥೆಗಳ ಕಂಡು ಕೆಂಡಾಮಂಡಲರಾದರು.ಜಿಲ್ಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹4290 ನಂತೆ ₹8363 ಕ್ವಿಂ. ರಾಗಿ ಮಾರಾಟಕ್ಕೆ 457 ರೈತರು ನೋಂದಾಯಿಸಿದ್ದಾರೆ. ಆದರೂ, ಖರೀದಿ ಪ್ರಕ್ರಿಯೆ ಕೈಗೊಳ್ಳದ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮರಿಯಾಳ, ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಪಾಟೀಲ, ಖರೀದಿ ಕೇಂದ್ರದ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.
ನಾಳೆ (ಗುರುವಾರ)ಯಿಂದಲೇ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿ ಪ್ರಕ್ರಿಯೆ ಶುರುವಾಗಬೇಕು. ಕೇಂದ್ರದಲ್ಲಿ ರೈತರಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ರೈತರನ್ನು ಅಲೆದಾಡಿಸಬೇಡಿ ಎಂದ ಅವರು, ಸುಳ್ಳು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತಪ್ಪಿದ್ದಲ್ಲ ಎಂದೂ ಜಿಲ್ಲಾಧಿಕಾರಿ ಎಚ್ಚರಿಸಿಯೇ ತಮ್ಮ ವಾಹವದಲ್ಲಿ ತೆರಳಿದರು.
- - - -19ಕೆಡಿವಿಜಿ6, 7.ಜೆಪಿಜಿ:
ದಾವಣಗೆರೆಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಜತೆಗೆ ರೈತ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಮೆಳ್ಳೆಕಟ್ಟೆ ಎ.ಈ.ನಾಗರಾಜ ಇತರರು ಆಗಮಿಸಿದ್ದರು.