ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
2023-24 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜಮಖಂಡಿ ಬ್ಲಾಕ್‌ನ ಎಲ್ಲ 24 ಕೇಂದ್ರಗಳಲ್ಲಿ ಸುಸೂತ್ರವಾಗಿ ಜರುಗಿದವು ಎಂದು ನೋಡಲ್ ಅಧಿಕಾರಿ ಸಂತೋಷ ತಳಕೇರಿ ಹೇಳಿದರು.ಶನಿವಾರ ಪಟ್ಟಣದ ಸಿದ್ದೇಶ್ವರ ಹಾಗೂ ಎಸ್‌ಪಿ ಪಿಯು ಹಾಗೂ ಎಸ್‌ಎಂ ಪ್ರೌಢಶಾಲೆ ಮೂರು ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ವೆಬ್‌ಕಾಸ್ಟಿಂಗ್ ವ್ಯವಸ್ಥೆಯಿಂದ ಪರೀಕ್ಷೆಗಳು ನಿರ್ಭಯದಿಂದ ಸಾಗಿದವು. ಪಟ್ಟಣದಲ್ಲಿ ಮೂರು ಕೇಂದ್ರಗಳಲ್ಲಿ ಪರೀಕ್ಷೆ ಜರುಗಿದೆ. ಜಮಖಂಡಿ ಬ್ಲಾಕ್‌ನಾದ್ಯಂತ ಎಲ್ಲ 24 ಕೇಂದ್ರಗಳಲ್ಲಿ ಎಲ್ಲಿಯೂ ಯಾವುದೆ ಅಹಿತಕರ ಘಟನೆಗಳು ನಡೆದಿಲ್ಲ. ಶನಿವಾರ ನಡೆದ ಪರೀಕ್ಷೆಗೆ ಎಲ್ಲ ಮಾಧ್ಯಮಗಳ ಪುನರಾವರ್ತಿತರು ಸೇರಿದಂತೆ ನಿಯೋಜಿತ 8093 ವಿದ್ಯಾರ್ಥಿಗಳಲ್ಲಿ 89 ವಿದ್ಯಾರ್ಥಿಗಳು ಗೈರಾಗಿದ್ದು, ಒಟ್ಟು 8004 ವಿದ್ಯಾರ್ಥಿಗಳು ಹಾಜರಿದ್ದರು ಎಂದರು.
ಪಟ್ಟಣದ ಸಿದ್ದೇಶ್ವರ ಶಾಲೆ ಪರೀಕ್ಷೆ ಕೇಂದ್ರದಲ್ಲಿ 17 ಬ್ಲಾಕ್‌ಗಳ 390 ವಿದ್ಯಾರ್ಥಿಗಳ ಪೈಕಿ 383 ಹಾಜರಾಗಿ 7 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಕೇಂದ್ರ ಅಧೀಕ್ಷಕ ಬಿ.ಎಸ್. ಕಡಕೋಳ, ಉಪ ಅಧೀಕ್ಷಕ ಎಂ.ಆರ್. ನದಾಫ ತಿಳಿಸಿದ್ದಾರೆ. ಮಾರ್ಗಾಧಿಕಾರಿಯಾಗಿ ಎಚ್.ವೈ. ಆಲಮೇಲ ಕಾರ್ಯ ನಿರ್ವಹಿಸಿದರು. ಎಸ್.ಎಂ. ಪ್ರೌಢಶಾಲೆ ಪರೀಕ್ಷೆ ಕೇಂದ್ರದಲ್ಲಿ 305 ವಿದ್ಯಾರ್ಥಿಗಳಲ್ಲಿ ಒಟ್ಟು 301 ವಿದ್ಯಾರ್ಥಿಗಳು ಹಾಜರಾಗಿದ್ದರು. 4 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಮುಖ್ಯ ಅಧೀಕ್ಷಕ ಡಿ.ಬಿ. ಪಾಟೀಲ ತಿಳಿಸಿದ್ದಾರೆ. ಪ್ರಭುಲಿಂಗ ಪದವಿ ಪೂರ್ವ ಮಹಾವಿದ್ಯಾಲಯ ಕೇಂದ್ರದಲ್ಲಿ 14 ಬ್ಲಾಕ್‌ಗಳ 313 ವಿದ್ಯಾರ್ಥಿಗಳ ಪೈಕಿ 309 ವಿದ್ಯಾರ್ಥಿಗಳು ಹಾಜರಾಗಿ 4 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಕೇಂದ್ರ ಮುಖ್ಯ ಅಧೀಕ್ಷಕ ಎಸ್.ಎನ್. ಹತ್ತಿ ತಿಳಿಸಿದ್ದಾರೆ.ಸಿಆರ್‌ಪಿಗಳಾದ ಭರತೇಶ ಯಲ್ಲಟ್ಟಿ, ಅನಂತರಾಜು ಮುಧೋಳ, ಮಹೇಶ ಸೋರಗಾಂವಿ ಮೊಬೈಲ್ ಸ್ವಾಧಿನಾಧಿಕಾರಿಗಳಾಗಿ ಕರ್ತವ್ಯ ನಿಭಾಯಿಸಿದರು. ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಮೂರೂ ಕೇಂದ್ರಗಳಲ್ಲಿದ್ದರು. ಠಾಣಾಧಿಕಾರಿ ಅಪ್ಪಣ್ಣ ಐಗಳಿ ಸಿಬ್ಬಂದಿಯೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು.