ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳವರ್ಷ ಪೂರ್ತಿ ಕಷ್ಟಪಟ್ಟು ಓದಿ, ಟ್ಯೂಷನ್‌ಗೆ ಹೋಗಿ ಶಾಲೆಯ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ಬರೆದರೂ ಎಸ್ಸೆಸ್ಸೆಲ್ಸಿಯಲ್ಲಿ ಶೇ.80-90 ಅಂಕ ಪಡೆಯಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಆದರೆ ಈ ಪರೀಕ್ಷಾ ಕೇಂದ್ರಗಳಲ್ಲಿ ಕೇವಲ ಪರೀಕ್ಷೆಗೆ ಹಾಜರಾದರೆ ಸಾಕು ಶೇ.95 ರಿಂದ ಶೇ.99 ರಷ್ಟು ಅಂಕ ಗ್ಯಾರಂಟಿ. ಅದೂ ಓದದೆ, ಕಷ್ಟಪಡದೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಇದೇ ರೀತಿ ಅತ್ಯಧಿಕ ಅಂಕ ಪಡೆದು ಪರೀಕ್ಷೆಯಲ್ಲಿ ತೇರ್ಗಡೆ ಆಗುತ್ತಿದ್ದಾರೆ!
ಕೊಪ್ಪಳ ನಗರ ಠಾಣೆಯಲ್ಲಿ ನ್ಯಾಯಾಧೀಶರ ವರದಿಯನ್ನಾಧರಿಸಿ ಓದಲು ಬರೆಯಲು ಬಾರದಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಶೇ. 99.52 ಅಂಕ ಪಡೆದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರ ಜಾಡು ಹಿಡಿದು ಪರಿಶೀಲಿಸಿದಾಗ ಆಘಾತಕಾರಿ ಅಂಶಗಳು ಪತ್ತೆಯಾಗುತ್ತಿವೆ.ನೂರಾರು ವಿದ್ಯಾರ್ಥಿಗಳು ಪಾಸ್: ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಸ್ಕ್ಯಾವೆಂಜರ್ ಆಗಿ ಕೆಲಸ ಮಾಡುತ್ತಿರುವ ಪ್ರಭು ಲಕ್ಷ್ಮೀಕಾಂತ್ ಎಂಬಾತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.99.52 ಅಂಕ ಪಡೆದ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ತೋರಿಸಿ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಜವಾನನಾಗಿ ಆಯ್ಕೆಯಾಗಿದ್ದಾನೆ. ಇದರಿಂದ ಅನುಮಾನಗೊಂಡು ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಧೀಶರು ನೀಡಿದ ವರದಿ ಆಧರಿಸಿ ಕೇಸ್ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಪ್ರಭು ಶೇ.99.58 ರಷ್ಟು ಅಂಕ ಪಡೆದ್ದಾನೆ. ಈ ಪ್ರಕರಣದ ಜಾಡು ಹಿಡಿದು ಹೊರಟಾಗ ಆ ಪರೀಕ್ಷಾ ಕೇಂದ್ರದಲ್ಲಿ ಇದೇ ರೀತಿ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಅಂಶವೂ ಬೆಳಕಿಗೆ ಬಂದಿದೆ. ಇಲ್ಲಿ ಪರೀಕ್ಷೆ ಬರೆದವರಿಗೆ ದೆಹಲಿ ಎಜುಕೇಶನ್ ಬೋರ್ಡ್ ಹೆಸರಿನಲ್ಲಿ ಅಂಕಪಟ್ಟಿ ನೀಡಲಾಗುತ್ತದೆ.ಈ ವಿಚಾರವಾಗಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಪ್ರಭು, ನ್ಯಾಯಾಧೀಶರು ಯಾಕೆ ನನ್ನ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೋ ಗೊತ್ತಿಲ್ಲ. ಆದರೆ ನನ್ನಂತೆಯೇ ಅನೇಕರು ನನ್ನ ಜೊತೆಯಲ್ಲೇ ಪರೀಕ್ಷೆ ಬರೆದಿದ್ದಾರೆ ಮತ್ತು ಅಂಕಪಟ್ಟಿ ಪಡೆದು, ನ್ಯಾಯಾಲಯಗಳಲ್ಲಿ ಜವಾನರಾಗಿ ನೇಮಕವಾಗಿದ್ದಾರೆ. ಈಗ ನಾನೂ ನೇಮಕವಾಗಿದ್ದೇನೆ. ಅದರಲ್ಲಿ ತಪ್ಪೇನು? ನನಗೆ ಓದಲು ಬರುತ್ತದೆ ಮತ್ತು ಬರೆಯಲೂ ಬರುತ್ತದೆ. ನಾನು ಪರೀಕ್ಷೆ ಬರೆದೇ ಪಾಸಾಗಿದ್ದೇನೆ. 2018ನೇ ಸಾಲಿನಲ್ಲಿಯೇ ಪಾಸಾಗಿದ್ದೇನೆ ಎನ್ನುತ್ತಾನೆ.
ಈತನಷ್ಟೇ ಅಲ್ಲ, ಈ ಹಿಂದೆಯೂ ರಾಜ್ಯದ ನಾನಾ ಕೋರ್ಟ್‌ಗಳಲ್ಲಿ, ಅಷ್ಟೇ ಯಾಕೆ, ಹೈಕೋರ್ಟ್‌ನಲ್ಲಿಯೂ ನೇಮಕವಾಗಿರುವ ಜವಾನರು ಇದೇ ಬೋರ್ಡ್‌ನಲ್ಲಿ ಅಂಕ ಪಟ್ಟಿ ಪಡೆದಿದ್ದಾರೆ ಎನ್ನಲಾಗಿದೆ.-ಬಾಕ್ಸ್ -
ಸಮಗ್ರ ತನಿಖೆ ಅಗತ್ಯರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಮಗ್ರ ತನಿಖೆ ನಡೆಸಬೇಕು. ಅಂದಾಗಲೇ ಸತ್ಯ ಬೆಳಕಿಗೆ ಬರಲು ಸಾಧ್ಯ ಎಂದು ಅನೇಕರು ಒತ್ತಾಯಿಸಿದ್ದಾರೆ. ಬನಹಟ್ಟಿ ಸೇರಿ ರಾಜ್ಯಾದ್ಯಂತ ಈ ರೀತಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಕೇಂದ್ರಗಳು ಕಾರ್ಯಾಚರಣೆ ನಡೆಸುತ್ತಿವೆ ಎನ್ನಲಾಗುತ್ತದೆ. ಎಲ್ಲ ಕಡೆ ದೆಹಲಿ ಬೋರ್ಡ್ ಆಫ್ ಎಜುಕೇಶನ್ ಎನ್ನುವ ಹೆಸರಿನಲ್ಲಿಯೇ ಅಂಕಪಟ್ಟಿ ನೀಡಲಾಗುತ್ತದೆಯಂತೆ.
-ಕೋಟ್-ನಾನು ಪರೀಕ್ಷೆ ಬರೆದೇ ಪಾಸಾಗಿದ್ದೇನೆ, ನ್ಯಾಯಾಧೀಶರು ಯಾಕೆ ಕೇಸ್ ಮಾಡಿದ್ದಾರೋ ಗೊತ್ತಿಲ್ಲ. ನಾನಷ್ಟೇ ಅಲ್ಲ, ಅನೇಕರು ಬನಹಟ್ಟಿ ಪರೀಕ್ಷಾ ಕೇಂದ್ರದ ಮೂಲಕವೇ ತೇರ್ಗಡೆಯಾಗಿದ್ದಾರೆ.
- ಪ್ರಭು ಲಕ್ಷ್ಮಿಕಾಂತ ಲೋಕರೆ