ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು: ಶರಣಬಸಪ್ಪ

KannadaprabhaNewsNetwork | Published : May 11, 2025 11:47 PM
Follow Us

ಸಾರಾಂಶ

ಉತ್ತಮ ಜ್ಞಾನದೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಪಾಲಕರಿಗೆ, ಶಿಕ್ಷಕರಿಗೆ, ಸಮಾಜಕ್ಕೆ ಹಾಗೂ ದೇಶಕ್ಕೆ ಒಳ್ಳೆಯ ಹೆಸರನ್ನು ತರುವಂತವರಾಗಬೇಕು.

ಜಮೀಯತ್-ಏ-ಆಹ್ಲೆ ಹದೀಸ್ ಸಂಸ್ಥೆ ವತಿಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಸಂಡೂರು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು. ಅದನ್ನು ಯಶಸ್ವಿಯಾಗಿ ಪೂರೈಸಿರುವ ವಿದ್ಯಾರ್ಥಿಗಳು ಮುಂದಿನ ಹಂತಗಳಲ್ಲಿಯೂ ಉತ್ತಮ ಸಾಧನೆ ತೋರಿ, ಉತ್ತಮ ಜ್ಞಾನದೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಪಾಲಕರಿಗೆ, ಶಿಕ್ಷಕರಿಗೆ, ಸಮಾಜಕ್ಕೆ ಹಾಗೂ ದೇಶಕ್ಕೆ ಒಳ್ಳೆಯ ಹೆಸರನ್ನು ತರುವಂತವರಾಗಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕೆ ಅವರು ತಿಳಿಸಿದರು.

ಪಟ್ಟಣದ ಮಸ್ಜೀದ್-ಏ-ಹಜರತ್ ಬಿಲಾಲ್ ಬಳಿಯಲ್ಲಿ ಗುರುವಾರ ಜಮೀಯತ್-ಏ-ಆಹ್ಲೆ ಹದೀಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಪಟ್ಟಣದ ವಿವಿಧ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಜಮೀಯತ್-ಏ-ಅಹ್ಲೆ ಹದೀಸ್ ಸಂಸ್ಥೆಯವರು ಪಟ್ಟಣದ ಎಲ್ಲಾ ಶಾಲೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸ್ಯುತ್ಯಾರ್ಹ. ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಅವರನ್ನು ಇನ್ನು ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡಲಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜ್ಞಾನ, ಶಿಕ್ಷಣದಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಹಜರತ್ ಮಹಮ್ಮದ್ ಅಮೀನ್ ಮಾತನಾಡಿ, ಮಕ್ಕಳು ದೇಶದ ಆಸ್ತಿ. ಶಿಕ್ಷಣವೇ ಶಕ್ತಿ. ಮಕ್ಕಳಿಗೆ ಜೀವನದಲ್ಲಿ ಉದಾತ್ತವಾದ ಗುರಿ ಇರಬೇಕು. ಗುರಿ ಸಾಧನೆಗಾಗಿ ಮಕ್ಕಳು ಶ್ರಮಿಸಬೇಕು. ಉತ್ತಮ ಸಾಧನೆಯ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

ಹಜರತ್ ಅತಾವುಲ್ಲಾ, ವಕೀಲ ಉಮರ್ ಫಾರುಕ್ ಮಾತನಾಡಿದರು. ಮುಖ್ಯ ಶಿಕ್ಷಕರಾದ ಬಿ.ಎಂ. ಮಹಾಂತೇಶ್, ಬಾಷ, ಮೆಹಬೂಬ್ ಸಾಬ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಡಾ. ರಹಮತ್‌ಉಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಭಾನ್ ಸ್ವಾಗತಿಸಿದರು. ಮಹಮ್ಮದ್ ಜಾವೀದ್ ಕಾರ್ಯಕ್ರಮ ನಿರೂಪಿಸಿದರು. ಮುಖಂಡರಾದ ಇರ್ಫಾನ್, ಫಕೃದ್ಧೀನ್, ಎನ್. ಬಸವರಾಜ್, ವಿದ್ಯಾರ್ಥಿಗಳ ಪಾಲಕರು, ಜಮೀಯತ್-ಏ-ಅಹ್ಲೇ ಹದೀಸ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.