ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತವರು ಕ್ಷೇತ್ರವಾದ ಶಿವಮೊಗ್ಗ ಜಿಲ್ಲೆ ಈ ಬಾರಿ ಅಚ್ಚರಿಯ ಪ್ರಗತಿ ಸಾಧಿಸಿದ್ದು, ಕಳೆದ ಐದು ವರ್ಷದಲ್ಲಿ ತಳಮಟ್ಟ ಕಂಡಿದ್ದ ಶಿವಮೊಗ್ಗ ಜಿಲ್ಲೆ ಈ ಬಾರಿ 25 ಸ್ಥಾನಗಳ ಜಿಗಿತ ಕಂಡಿದ್ದು, ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದೆ.ಕಳೆದ ಬಾರಿ ಜಿಲ್ಲಾವಾರು ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 3ನೇ ಸ್ಥಾನಕ್ಕೆ ಜಿಗಿದಿದ್ದು, ಶೇ. 88.67 ಫಲಿತಾಂಶ ಪಡೆದಿದೆ. ಹೊಸದಾಗಿ ಪರೀಕ್ಷೆ ತೆಗೆದುಕೊಂಡಿದ್ದ 23028 ವಿದ್ಯಾರ್ಥಿಗಳ ಪೈಕಿ 20420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಲ್ಲದೆ, ಜಿಲ್ಲೆಯ 132 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಯಾವುದೇ ಶಾಲೆಯೂ ಈ ಬಾರಿ ಶೂನ್ಯ ಫಲಿತಾಂಶವನ್ನು ದಾಖಲಿಸಿಲ್ಲ. ಮೂವರು ವಿದ್ಯಾರ್ಥಿಗಳು 621 ಅಂಕ ಪಡೆದು ಜಿಲ್ಲೆಗೆ ಎರಡನೇ ಟಾಪರ್ ಆಗಿದ್ದು, ಶಿಕಾರಿಪುರದ ಶ್ರೀ ಕೊಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿ ಪಿ.ಬಿ.ಲತಾ, ಶಿವಮೊಗ್ಗದ ಕಸ್ತೂರ ಬಾ ಬಾಲಕಿಯರ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ಆಲಿಯಾ ಮೆಹರೋಷ್, ತೀರ್ಥಹಳ್ಳಿಯ ವಾಗ್ದೇವಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೆ.ಕೃತಿಕಾ ಜಿಲ್ಲೆಗೆ ಎರಡನೇ ಟಾಪರ್ ಆಗಿದ್ದಾರೆ.
ಹೊಸನಗರದ ಶ್ರೀ ಗುರುಜೀ ಇಂಟರ್ ನ್ಯಾಷನಲ್ ರೆಸಿಡೆನ್ಸಿ ಶಾಲೆ ಸಮೀಕ್ಷಾ ಆರ್. ನಾಯಕ್, ತೀರ್ಥಹಳ್ಳಿಯ ವಾಗ್ದೇವಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಸ್.ಛಾಯ, ಭದ್ರಾವತಿಯ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯ ಜಿ.ಎಸ್.ಮೊಹಿತ್, ಹೊಸನಗರದ ಸರ್ಕಾರಿ ಪ್ರೌಢ ಶಾಲೆಯ ಎಚ್.ಜಿ.ನಿಹಾಲ್, ಮಹಾವೀರ್ ವಿದ್ಯಾಲಯದ ಜಿಯಾ ಎಸ್ ಶೇಟ್ 620 ಅಂಕ ಗಳಿಸುವ ಮೂಲಕ ಜಿಲ್ಲೆಯ ಮೂರನೇ ಟಾಪರ್ ಆಗಿದ್ದಾರೆ.ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ:
ಜಿಲ್ಲೆಯಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದು, ಪರೀಕ್ಷೆ ತೆಗೆದುಕೊಂಡಿದ್ದ 11639 ಬಾಲಕಿಯರ ಪೈಕಿ, 10829 ಬಾಲಕಿಯರು ತೇರ್ಗಡೆ ಯಾಗಿದ್ದು, ಶೇ. 93.03 ಫಲಿತಾಂಶ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಇನ್ನು ಪರೀಕ್ಷೆಗೆ ಹಾಜರಾಗಿದ್ದ 11389 ಬಾಲಕರ ಪೈಕಿ 9592 ಬಾಲಕರು (ಶೇ 84.22) ತೇರ್ಗಡೆ ಹೊಂದಿದ್ದಾರೆ. ಪುನರಾವರ್ತಿತ ಮತ್ತು ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ ವಿದ್ಯಾರ್ಥಿಗಳು, ಮೊರಾರ್ಜಿ ವಸತಿ ದೇಸಾಯಿ ಮತ್ತು ಕಾರ್ಪೋರೇಷನ್ ಶಾಲೆಗಳು ಸೇರಿ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 16,579 ವಿದ್ಯಾರ್ಥಿಗಳು ಪರೀಕ್ಷೆ ತೆಗೆದು ಕೊಂಡಿದ್ದು, 13,476 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ.ಜಿಲ್ಲೆಯಲ್ಲಿ ತೀರ್ಥಹಳ್ಳಿಗೆ ಪ್ರಥಮ ಸ್ಥಾನ:
ಜಿಲ್ಲೆಯ ತಾಲೂಕುವಾರು ಫಲಿತಾಂಶ ಪಟ್ಟಿಯಲ್ಲಿ ತೀರ್ಥಹಳ್ಳಿ (ಶೇ.94.24) ಪ್ರಥಮ ಸ್ಥಾನ ಪಡೆದಿದ್ದು, ಭದ್ರಾವತಿ ತಾಲೂಕು (ಶೇ.88.67) ಕೊನೆ ಸ್ಥಾನದಲ್ಲಿದೆ. ಸೊರಬ ತಾಲೂಕು (ಶೇ.92.79) ದ್ವಿತೀಯ ಸ್ಥಾನ, ಹೊಸನಗರ( 92.66) ಮೂರನೇ ಸ್ಥಾನ, ಸಾಗರ(ಶೇ.92.37) ನಾಲ್ಕನೇ ಸ್ಥಾನ, ಶಿಕಾರಿಪುರ (ಶೇ.90.34) ಐದನೇ ಸ್ಥಾನ, ಶಿವಮೊಗ್ಗದಲ್ಲಿ (ಶೇ.85.56) 6ನೇ ಸ್ಥಾನ ಪಡೆದಿದೆ. ಕಳೆದ ಬಾರಿ ಜಿಲ್ಲೆ 28ನೇ ಸ್ಥಾನಕ್ಕೆ ಕುಸಿದಿತ್ತು. ದಶಕದ ಹಿಂದೆ 9ನೇ ಸ್ಥಾನ ಪಡೆದಿತ್ತು. ಅದೇ ಇಲ್ಲಿವರೆಗಿನ ಸಾಧನೆಯಾಗಿತ್ತು. ಎಸ್ಸೆಸ್ಸೆಲ್ಸಿ ಫಲಿತಾಂಶದ ಅತ್ಯುತ್ತಮ ಸಾಧನೆಗೆ ಸಚಿವ ಮಧು ಬಂಗಾರಪ್ಪ ಶ್ಲಾಘಿಸಿದ್ದಾರೆ.ಜಿಲ್ಲೆಗೆ ನಾಲ್ವರು ಟಾಪರ್ಸ್:
ಜಿಲ್ಲೆಯಲ್ಲಿ ಈ ಬಾರಿ ನಾಲ್ವರು ವಿದ್ಯಾರ್ಥಿಗಳು 622 ಅಂಕಗಳೊಂದಿಗೆ ಟಾಪರ್‌ಗಳಿದ್ದಾರೆ. ಶಿವಮೊಗ್ಗ ನಗರದ ಶ್ರೀ ರವಿಶಂಕರ್ ವಿದ್ಯಾ ಮಂದಿರ ಪ್ರೌಢ ಶಾಲೆಯ ವಿದ್ಯಾರ್ಥಿ ಗುರುಚರಣ್ ಎಂ.ಶೆಟ್ಟಿ, ಸೊರಬದ ಸಾಥೋಮ್ ಆಂಗ್ಲ ಮಾಧ್ಯಮ ಶಾಲೆಯ ಚಿನ್ಮಯಿ ಅನಂತ್ ಶಾನಬೋಗ್, ಸ್ವಾಮಿ ವಿವೇಕಾನಂದ ಇಎಂಎಚ್‌ಎಸ್ ಶಾಲೆ ವಿದ್ಯಾರ್ಥಿನಿ ಬಿಂದು ಪಿ.ಗೌಡ, ಸರ್ಕಾರಿ ಪ್ರೌಢಶಾಲೆ ಹಳೆ ಸೊರಬ ಶಾಲೆ ವಿದ್ಯಾರ್ಥಿ ಯು.ರಕ್ಷಶ್ರೀ ಜಿಲ್ಲೆಗೆ ಟಾಪರ್ ಆಗಿದ್ದಾರೆ.