ಚಾಕು ತೋರಿಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ

KannadaprabhaNewsNetwork |  
Published : Mar 17, 2025, 12:33 AM IST
ವಿದ್ಯಾರ್ಥಿ ಯಶವಂತ್ ಮೇಲೆ ಏಳು ಜನ ಅನ್ಯ ಕೋಮಿನ ಯುವಕರು ಮನಬಂದಂತೆ ಹಲ್ಲೆ  | Kannada Prabha

ಸಾರಾಂಶ

ವಿದ್ಯಾರ್ಥಿನಿಯರ ಶೌಚಗೃಹದ ಮೇಲೆ ಕಲ್ಲು ತೂರುತ್ತಿದ್ದ ಅನ್ಯ ಕೋಮಿನ ಯುವಕರನ್ನು ಪ್ರಶ್ನಿಸಿದ 10ನೇ ತರಗತಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿರುವ ಆತಂಕಕಾರಿ ಘಟನೆ ಪಟ್ಟಣದ ಕೆಂಕೆರೆ ಕೆಪಿಎಸ್ ಶಾಲಾ ಆವರಣದಲ್ಲಿ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಹುಳಿಯಾರು

ವಿದ್ಯಾರ್ಥಿನಿಯರ ಶೌಚಗೃಹದ ಮೇಲೆ ಕಲ್ಲು ತೂರುತ್ತಿದ್ದ ಅನ್ಯ ಕೋಮಿನ ಯುವಕರನ್ನು ಪ್ರಶ್ನಿಸಿದ 10ನೇ ತರಗತಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿರುವ ಆತಂಕಕಾರಿ ಘಟನೆ ಪಟ್ಟಣದ ಕೆಂಕೆರೆ ಕೆಪಿಎಸ್ ಶಾಲಾ ಆವರಣದಲ್ಲಿ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಯಶವಂತ ಎಂದು ಗುರುತಿಸಲಾಗಿದ್ದು ಘಟನೆಯಲ್ಲಿ ಭಾಗಿಯಾಗಿದ್ದ 7 ಜನ ಆರೋಪಿಗಳಾದ ಬಳ್ಳೆಕಟ್ಟೆಯ ಶಂಶುದ್ದೀನ್ , ಇರ್ಫಾನ್ , ಮೆಹಬೂಬ್ ಷರೀಫ್, ಮುಬಾರಕ್ , ಮುದಾಸಿರ್, ಯಾಸೀನ್ , ತಾಝೀಮ್ ರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕೆಲವರನ್ನು ಬಾಲ ಮಂದಿರಕ್ಕೆ ಹಾಗೂ ಇನ್ನೂ ಕೆಲವರನ್ನು ತುಮಕೂರು ಕಾರಾಗೃಹಕ್ಕೂ ಕಳುಹಿಸಲಾಗಿದೆ.

ಆಗಿದ್ದೇನು?

ಶುಕ್ರವಾರ ಎಂದಿನಂತೆ ಶಾಲಾ ಆವರಣದಲ್ಲಿ ನಿಂತಿದ್ದ ಯಶವಂತಗೆ ವಿದ್ಯಾರ್ಥಿನಿಯರ ಶೌಚಾಲಯದ ಮೇಲೆ ಯಾರೋ ಕಲ್ಲು ಎಸೆಯುತ್ತಿರುವುದು ಕಂಡು ಬಂದಿದೆ. ಹತ್ತಿರ ಹೋಗಿ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಚಾಕು ತೋರಿಸಿ ಬೆದರಿಕೆ ಹಾಕಿದ ಪುಂಡರು ಶಾಲಾ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿ ಜಗಳ ಶುರು ಮಾಡಿದ್ದಾರೆ. ಈ ವೇಳೆ ಯಶವಂತನನ್ನು ಜಗ್ಗಾಡಿ ಹಲ್ಲೆಗೆ ಮುಂದಾಗಿದ್ದಾಗ ಅಲ್ಲಿಯೇ ಇದ್ದ ಅಡುಗೆಯವರು ಯುವಕರಿಗೆ ಬೈದು ಕಳಿಸಿದ್ದಾರೆ. ನಂತರ ಮಧ್ಯಾಹ್ನ ವಿದ್ಯಾರ್ಥಿ ಊಟ ಮುಗಿಸಿ ತನ್ನ ಸ್ನೇಹಿತನ ಜೊತೆಗೆ ತರಗತಿಯ ಕೊಠಡಿ ಬಳಿ ಮಾತನಾಡುತ್ತಾ ನಿಂತಿದ್ದಾಗ ಮತ್ತೆ ಅಲ್ಲಿಗೆ ಬಂದ ಯುವಕರ ಗುಂಪು ವಿದ್ಯಾರ್ಥಿಯ ಕಾಲರ್ ಹಿಡಿದು ಕೈಗಳಿಂದ ಹೊಡೆದಿದ್ದಲ್ಲದೆ ದೊಣ್ಣೆಯಿಂದ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದಿದ್ದು ಚಾಕು ತೋರಿಸಿ ನಿನ್ನನ್ನು ಇವತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟರಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಬಂದದ್ದನ್ನು ನೋಡಿ ಓಡಿ ಹೋಗುತ್ತಿದ್ದಾಗ ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ತನಿಖೆಗೆ ಇಳಿದ ಪೊಲೀಸರು ಉಳಿದವರನ್ನು ಬಂಧಿಸಿದ್ದಾರೆ.

ಕೋಟ್‌....

ವಿದ್ಯಾರ್ಥಿನಿಯರ ಮಾನ ಕಾಪಾಡಲು ಹೋದ ನನ್ನ ಮಗನ ಮೇಲೆ ಅನ್ಯ ಕೋಮಿನ ಪುಂಡರು ಹಲ್ಲೆ ನಡೆಸಿದ್ದಲ್ಲದೇ ಹಾಡಹಗಲೇ ಶಾಲಾ ಆವರಣದಲ್ಲಿ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅವನಿಗೆ ಕುತ್ತಿಗೆ ಭಾಗದಲ್ಲಿ ದೊಣ್ಣೆಯಿಂದ ಹೊಡೆದಿದ್ದಾರೆ. ಇದಕ್ಕೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು.

- ಶಶಿರೇಖಾ, ಯಶವಂತನ ತಾಯಿ

ಘಟನೆ ನಡೆದು ಎರಡು ದಿನಗಳಾದರೂ ಪೊಲೀಸರು ಮಾಧ್ಯಮಗಳಿಂದ ಪ್ರಕರಣ ಮುಚ್ಚಿಡುವ ಪ್ರಯತ್ನ ಮಾಡಿದ್ದು ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದ್ದು ಗೃಹ ಸಚಿವರ ತವರಿನಲ್ಲೇ ಶಾಲಾ ಆವರಣದಲ್ಲಿಯೇ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ತಡೆದದ್ದು ಯಾರು ಎನ್ನುವುದು ನಾಗರಿಕರ ಪ್ರಶ್ನೆಯಾಗಿದೆ.

PREV

Recommended Stories

2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ
ದಸರಾಗೆ ಬಾನು : ಸುಪ್ರೀಂನಲ್ಲಿ ಮೇಲ್ಮನವಿ ವಜಾ